ಹಾಸನದ ಸ್ವಪ್ನ ಬುಕ್ ಹೌಸ್‌ನಲ್ಲಿ ಲೇಖಕ ದೊಡ್ಡಮನೆ ಆನಂದ್ ಅವರ ಕನ್ನಂಬಾಡಿ ಜೋಡಿ ಕೊಲೆಯ ರಹಸ್ಯ ಎಂಬ ಪತ್ತೇದಾರಿ ಕಾದಂಬರಿ ಬಿಡುಗಡೆಗೊಳಿಸಲಾಯಿತು. ಗೊರೂರು ಶಿವೇಶ್, ಮೇಟಿಕೆರೆ ಹಿರಿಯಣ್ಣ, ಯತೀಶ್ವರ್, ದೊಡ್ಡಮನೆ ಆನಂದ್, ಹಿರಿಯ ಲೇಖಕ ತಿರುಪತಿಹಳ್ಳಿ ಶಿವಶಂಕರಪ್ಪ, ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕೌತುಕಗಳು ಪತ್ತೇದಾರಿ ಸಾಹಿತ್ಯದ ಜೀವಾಳ
ಲೇಖಕ ಗೊರೂರು ಶಿವೇಶ್ ಅಭಿಪ್ರಾಯ
ಕನ್ನಂಬಾಡಿ ಜೋಡಿ ಕೊಲೆಯ ರಹಸ್ಯ ಕೃತಿ ಬಿಡುಗಡೆ
ಹಾಸನ: ತರ್ಕಬದ್ಧ ಆಲೋಚನೆ ಮತ್ತು ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ಕೌತುಕಗಳು ಪತ್ತೇದಾರಿ ಸಾಹಿತ್ಯದ ಜೀವಾಳ ಎಂದು ಲೇಖಕ ಗೊರೂರು ಶಿವೇಶ್ ಅಭಿಪ್ರಾಯಪಟ್ಟರು.
ನಗರದ ಸ್ವಪ್ನ ಬುಕ್ ಹೌಸ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಲೇಖಕ ದೊಡ್ಡಮನೆ ಆನಂದ್ ಅವರ ಕನ್ನಂಬಾಡಿ ಜೋಡಿ ಕೊಲೆಯ ರಹಸ್ಯ ಎಂಬ ಪತ್ತೇದಾರಿ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದರು.
ಆಂಗ್ಲ ಸಾಹಿತ್ಯದ ದಿಗ್ಗಜರಾದ ಸರ್ ಆರ್ಥರ್ ಕಾನನ್ ಡಯಾಲ್ ಮತ್ತು ಅಗಾಥಾ ಕ್ರಿಸ್ಟಿ ಅವರ ಪ್ರಭಾವದಿಂದ ಪ್ರೇರಿತವಾದ ಕನ್ನಡ ಪತ್ತೇದಾರಿ ಸಾಹಿತ್ಯ ಲೋಕವು, ಎನ್.ನರಸಿಂಹಯ್ಯ ಮತ್ತು ಟಿ.ಕೆ.ರಾಮರಾವ್ ಅಂತಹ ಮಹಾನ್ ಲೇಖಕರಿಂದಾಗಿ ಅಪಾರ ಓದುಗ ವಲಯವನ್ನು ಸೃಷ್ಟಿಸಿಕೊಂಡಿದೆ. ಆ ಪರಂಪರೆಯನ್ನು ದೊಡ್ಡಮನೆ ಆನಂದ್ ಅವರು ಸಮರ್ಥವಾಗಿ ಮುಂದುವರಿಸುತ್ತಿದ್ದಾರೆ. ಈ ಕೃತಿಯು ಓದುಗನನ್ನು ಕೊನೆಯವರೆಗೂ ಕಥೆಯ ಓಘದಲ್ಲಿ ಹಿಡಿದಿಟ್ಟುಕೊಳ್ಳುತ್ತಾ, ಅನಿರೀಕ್ಷಿತ ತಿರುವುಗಳ ಮೂಲಕ ಊಹೆಗೂ ನಿಲುಕದಂತೆ ಅಪರಾಧಿಯನ್ನು ಅನಾವರಣಗೊಳಿಸುತ್ತದೆ. ಇದು ಎಲ್ಲ ರೀತಿಯ ಸಿನಿಮೀಯ ತಂತ್ರಗಳನ್ನು ಒಳಗೊಂಡಿರುವುದು ವಿಶೇಷ ಎಂದು ಗೊರೂರು ಶಿವೇಶ್ ವಿವರಿಸಿದರು.
ಇತಿಹಾಸ ತಜ್ಞರು ಹಾಗೂ ಜಾನಪದ ವಿದ್ವಾಂಸರಾದ ಮೇಟಿಕೆರೆ ಹಿರಿಯಣ್ಣ ಅವರು ದೊಡ್ಡಮನೆ ಆನಂದ್ ಅವರ ಸಮಗ್ರ ಸಾಹಿತ್ಯ ಕೃಷಿಯನ್ನು ಪರಿಚಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎವಿಕೆ ಕಾಲೇಜಿನ ಪ್ರಾಂಶುಪಾಲ ಯತೀಶ್ವರ್ ಮಾತನಾಡಿ, ಡಿಜಿಟಲ್ ಯುಗದಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಪಠ್ಯದ ಓದಿನ ಜತೆಗೆ ಸಾಹಿತ್ಯದ ಓದು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕ ಎಂದು ಹೇಳಿದರು.
ವೇದಿಕೆಯಲ್ಲಿ ಲೇಖಕ ದೊಡ್ಡಮನೆ ಆನಂದ್, ಹಿರಿಯ ಲೇಖಕ ತಿರುಪತಿಹಳ್ಳಿ ಶಿವಶಂಕರಪ್ಪ, ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ, ಸ್ವಪ್ನ ಬುಕ್ ಹೌಸ್‌ನ ಮ್ಯಾನೇಜರ್ ಶಾಂತಲಾ, ಪ್ರಾಧ್ಯಾಪಕರಾದ ಮಹಾಲಕ್ಷ್ಮೀ ಇತರರು ಇದ್ದರು.