ಜಿಲ್ಲೆಯಲ್ಲಿನ ಮಳೆ ಪರಿಸ್ಥಿತಿ, ಜಲಾಶಯಗಳ ನೀರಿನ ಮಟ್ಟ, ಕುಡಿಯುವ ನೀರಿನ ಲಭ್ಯತೆ, ಕೃಷಿ ಚಟುವಟಿಕೆ ಹಾಗೂ ಬರ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಈ ಬಾರಿ ಮುಂಗಾರು ಆರಂಭವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಜಿಲ್ಲೆಯಲ್ಲಿ ಒಟ್ಟಾರೆ ಶೇ.32ರಷ್ಟು ಮಳೆ ಕೊರತೆಯಾಗಿದ್ದು, ವಿಶೇಷವಾಗಿ ಜೂನ್ ತಿಂಗಳಲ್ಲಿ ತೀವ್ರ ಮಳೆ ಅಭಾವ ಕಂಡುಬಂದಿದೆ. ಇದರ ಪರಿಣಾಮ ರೈತರು ಬಿತ್ತನೆ ಕಾರ್ಯ ಆರಂಭಿಸಲು ಸಾಧ್ಯವಾಗದೆ ಕೃಷಿ ಚಟುವಟಿಕೆಗಳು ಹಿನ್ನಡೆಯಾಗಿವೆ. ಮಳೆಗಾಗಿ ಕಾಯುತ್ತಿರುವ ರೈತರು ಆತಂಕದಲ್ಲಿದ್ದು, ಮುಂದಿನ ಕೆಲ ದಿನಗಳ ಮಳೆಯೇ ಕೃಷಿಯ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.