ಹಾಸನ ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಿಸಿ ಕೆ.ಎಸ್ ಲತಾ ಕುಮಾರಿ, ಮಲ್ಲೇಶ್ ಗೌಡ, ಬಿ.ಡಿ ಶಂಕರೇಗೌಡ, ಬಾಬು, ಎಚ್.ಪಿ.ತಾರಾನಾಥ್ ಇತರರಿದ್ದರು.
ಹಾಸನ: ಸರ್ವಜ್ಞ ಕವಿಯು ಮೂರು ಸಾಲಿನ ತ್ರಿಪದಿಗಳಲ್ಲಿ ಜೀವನ ಸಂದೇಶ, ವ್ಯಕ್ತಿತ್ವ ವಿಕಸನ ಬದುಕಿನ ಮೌಲ್ಯವನ್ನು ಹಾಗೂ ಸಮಾಜದ ಆಗುಹೋಗುಗಳನ್ನು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಹೇಳಿದರು.
ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಂತ ಕವಿ ಸರ್ವಜ್ಞ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಒಂದೊಂದು ತ್ರಿಪದಿಗಳು ಹಲವಾರು ರೀತಿಯ ಅಧ್ಯಯನವನ್ನೇ ಮಾಡುವಂತಹ ಮೌಲ್ಯಯುತ ತ್ರಿಪದಿಯ ವಚನಗಳನ್ನು ಸಮಾಜಕ್ಕೆ ನೀಡುವ ಮೂಲಕ ಸಮಾಜದಲ್ಲಿ ಇರುವಂತಹ ಜಾತಿ ವ್ಯವಸ್ಥೆ ಹೋಗಲಾಡಿಸುವಿಕೆ ಹಾಗೂ ಸಮಾಜದ ಅಂಕುಡೊಂಕುಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಎಂದರು.
ಸಮಾಜಕ್ಕೆ ತತ್ವಜ್ಞಾನಿ ಮಾತ್ರವಲ್ಲ ಮನಶಾಸ್ತ್ರಜ್ಞರ ಪಾತ್ರವು ಅವಶ್ಯವಾಗಿದೆ. ಅವರ ಜೀವನವು ಇತರರಿಗೆ ಮಾದರಿಯಾಗಿದೆ. ಬಡತನ, ಜಾತಿ ವ್ಯವಸ್ಥೆ ಕುರಿತು ಎಲ್ಲವನ್ನು ತ್ರಿಪದಿಗಳ ಮೂಲಕ ತಿಳಿಸುತ್ತ ಸಮಾಜದಲ್ಲಿ ಸಮಾನತೆ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲೇಶ್‌ಗೌಡ ಮಾತನಾಡಿ, ತನಗೆ ಏನೂ ಗೊತ್ತಿಲ್ಲ ಎಂಬುವವನೇ ಜಗತ್ತಿನ ಸರ್ವಶ್ರೇಷ್ಠ ಜ್ಞಾನಿ. ತನಗೆ ಎಲ್ಲವೂ ಗೊತ್ತು ಎಂದು ಹೇಳುವವನೇ ಜಗತ್ತಿನ ಸರ್ವ ಶ್ರೇಷ್ಠ ಅಜ್ಞಾನಿ ಎಂದು ಹೇಳಿದರು.
ಸಾಮಾನ್ಯ ಜ್ಞಾನ ಪ್ರತಿಯೊಬ್ಬರಲ್ಲಿಯೂ ಇರಬೇಕು. ಸರ್ವಜ್ಞ ಎಂಬ ಸಣ್ಣ ಗರ್ವ ಇದ್ದರು ಸಹ ಜ್ಞಾನಿಯಾಗಲು ಸಾಧ್ಯವಿಲ್ಲ ಎಂದರು.
ವಿದ್ಯೆ ಎಂಬುದು ಕೇವಲ ಜ್ಞಾನಿಗಳ ಸ್ವತ್ತಲ್ಲ. ಪ್ರತಿಯೊಬ್ಬರು ವಿದ್ಯೆ ಕಲಿಯಲು ಅರ್ಹರು ಎಂದರಲ್ಲದೆ, ವಿದ್ಯೆ ಎಂಬುವುದು ಅಕ್ಷರ ರೂಪದಲ್ಲಿ ಮಾತ್ರವಲ್ಲದೆ ತಿಳಿವಳಿಕೆ, ಅನುಭವವು ಕೂಡ ಒಂದು ರೀತಿಯ ವಿದ್ಯೆಯಾಗಿದೆ ಎಂದು ಹೇಳಿದರು.
ಹೆಬ್ಬಾಲೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ ಬಿ.ಡಿ. ಶಂಕರೇಗೌಡ ಮಾತನಾಡಿ, ಯಾವುದೇ ಒಂದು ವ್ಯಕ್ತಿ ಸಮಾಜವನ್ನು ದಾರ್ಶನಿಕವಾಗಿ ಬೆಳೆಯಬೇಕೆಂದರೆ ಸರ್ವಜ್ಞನ ಕುರಿತು ಅಧ್ಯಯನ ಮಾಡುವುದು ಅತ್ಯಗತ್ಯ ಎಂದರು.
ಸರ್ವಜ್ಞನ ಸಾಹಿತ್ಯಗಳು ಎಂದಾಕ್ಷಣ ನಮಗೆ ನೆನಪಾಗುವುದು ತ್ರಿಪದಿಗಳು, ಬದುಕಿನ ಸಾರವನ್ನೇ ತಿಳಿಸುವಂತಹ ವಚನ ಸಾಹಿತ್ಯವನ್ನು ಸರ್ವಜ್ಞರು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸರ್ವಜ್ಞನು ತಮ್ಮ ವಚನಗಳ ಮೂಲಕ ಜಾತಿ ನಿಂದನೆ, ವರ್ಗ ಸಂಘರ್ಷ, ಧಾರ್ಮಿಕ ಸಂಘರ್ಷಗಳ ಬಗ್ಗೆ ಸಮಾಜವನ್ನು ಎಚ್ಚರಿಸುತ್ತ ಬಂದರು ಎಂದರು.
ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಬಾಬು, ಕನ್ನಡ ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಪಿ.ತಾರಾನಾಥ್ ಇತರರಿದ್ದರು.