ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ

ಚಿಕ್ಕಯರಗನಾಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಸದಾಶಿವಯ್ಯ, ಕೋದಂಡರಾಮಚಂದ್ರು, ರಂಗೇಗೌಡ, ನಂಜುಂಡೇಗೌಡ, ಮಹಾಲಿಂಗಪ್ಪ, ರಂಗೇಗೌಡ, ಶಿವೇಗೌಡ, ಮಂಜೇಗೌಡ ಇತರರು.
ಚಿಕ್ಕಯರಗನಾಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಸದಾಶಿವಯ್ಯ, ಕೋದಂಡರಾಮಚಂದ್ರು, ರಂಗೇಗೌಡ, ನಂಜುಂಡೇಗೌಡ, ಮಹಾಲಿಂಗಪ್ಪ, ರಂಗೇಗೌಡ, ಶಿವೇಗೌಡ, ಮಂಜೇಗೌಡ ಇತರರು.
Published on
ಗಂಡಸಿ: ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದ ಮಕ್ಕಳು ಆಂಗ್ಲ ಭಾಷೆಗಷ್ಟೇ ಸೀಮಿತರಾಗಿರುತ್ತಾರೆ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ ಮಕ್ಕಳು ಕನ್ನಡ ಮತ್ತು ಇಂಗ್ಲಿಷ್ ಎರಡು ಮಾಧ್ಯಮದಲ್ಲೂ ಓದುವ ಮೂಲಕ ತಮ್ಮ ನೈಪುಣ್ಯತೆ, ಚಮತ್ಕಾರವನ್ನು ಯಾವುದೇ ವೇದಿಕೆಯಲ್ಲಿ ಪ್ರದರ್ಶಿಸಲು ಸಜ್ಜಾಗಿರುತ್ತಾರೆ ಎಂದು ನಿವೃತ್ತ ಶಿಕ್ಷಕ ಚಿಕ್ಕೇಗೌಡ ತಿಳಿಸಿದರು.
ಹೋಬಳಿಯ ಚಿಕ್ಕಯರಗನಾಳು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶುಕ್ರವಾರ ಹಿರಿಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರು ಮತ್ತು ಕಾರ್ಮಿಕ ವರ್ಗದ ಜನತೆ ಹಗಲಿರುಳು ಕಷ್ಟಪಟ್ಟು ದುಡಿದ ಹಣವನ್ನು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ಶುಲ್ಕಕ್ಕೆ ವ್ಯಯ ಮಾಡುತ್ತಿದ್ದು ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಖಾಸಗಿ ಶಾಲೆಗಳಿಗೆ ಕಟ್ಟುತ್ತಿದ್ದ ಅಲ್ಪ ಭಾಗದ ಹಣವನ್ನು ತಮ್ಮ ಗ್ರಾಮದಲ್ಲಿ ಇರುವ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಬಳಕೆ ಮಾಡುವುದರಿಂದ ಮಕ್ಕಳ ಸಮಗ್ರ ಬೆಳವಣಿಗೆಗೆ ತಾವೇ ಹೊತ್ತು ನೀಡಿದಂತಾಗುತ್ತದೆ ಎಂದರು.
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಶೋಷಿತ ವರ್ಗ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಸರ್ಕಾರಿ ಶಾಲೆಗಳು ಬಲವರ್ಧನೆಗೊಂಡಿವೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಸಾಮಾಜಿಕ ಮತ್ತು ನ್ಯಾಯಬದ್ಧ ಹೊಣೆಗಾರಿಕೆಯ ಅರಿವು ಮೂಡಿಸಲು ಸರ್ಕಾರಿ ಶಾಲೆಗಳಿಂದ ಮಾತ್ರ ಸಾಧ್ಯ ಎಂದರು.
ಪಿಎಸಿಸಿ ಬ್ಯಾಂಕ್ ನಿವೃತ್ತ ಮ್ಯಾನೇಜರ್ ನಂಜುಂಡೇಗೌಡ ಮಾತನಾಡಿ, ನಾನು ಇದೇ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯಾಗಿದ್ದು, 1933ರ ಸ್ವಾತಂತ್ರ್ಯ ಪೂರ್ವದ ಅವಧಿಯಲ್ಲಿ ಪ್ರಾರಂಭಗೊಂಡ ಶಾಲೆಯಾಗಿದ್ದು 93 ವರ್ಷಗಳ ಇತಿಹಾಸ ಹೊಂದಿದೆ. ಪಾರಂಪರಿಕ ಕಟ್ಟಡದ ಈ ಶಾಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹಿರಿಯ ವಿದ್ಯಾರ್ಥಿಗಳಾದ ನಮ್ಮದಾಗಿದ್ದು 2033ಕ್ಕೆ ನಮ್ಮೂರ ಶಾಲೆಯ ಶತಮಾನೋತ್ಸವ ಊರಬ್ಬದ ರೀತಿ ಆಚರಿಸಲು ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ಸಜ್ಜಾಗೋಣ ಎಂದರು.
ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕರಾದ ಸದಾಶಿವಯ್ಯ, ಕೋದಂಡರಾಮಚಂದ್ರು, ರಂಗೇಗೌಡ, ಚಿಕ್ಕೇಗೌಡ, ನಂಜುಂಡೇಗೌಡ, ಮಹಾಲಿಂಗಪ್ಪ, ಶಿವೇಗೌಡ, ಮಂಜೇಗೌಡ, ಮುಖ್ಯ ಶಿಕ್ಷಕಿ ರೂಪಶ್ರೀ ಹಾಗೂ ಸಹ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net