

ಪ್ರಮುಖ ಮುಖ್ಯಾಂಶಗಳು
ಹಾಸನ:
ಕಳೆದ ಕೆಲ ವರ್ಷಗಳಿಂದ ಜಿಲ್ಲೆಯ ರೈತರನ್ನು ಕಾಡುತ್ತಿರುವ ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗ ಈ ಬಾರಿ ಆತಂಕಕಾರಿ ಮಟ್ಟದಲ್ಲಿ ಹರಡುತ್ತಿದ್ದು, ಅನ್ನದಾತರ ಬದುಕಿನ ಮೇಲೆ ಕರಿನೆರಳು ಬೀರುವಂತಾಗಿದೆ.
ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗದ ಸಮಸ್ಯೆ ಹೆಚ್ಚಾದ ನಂತರ ರೈತರು ಕಡಿಮೆ ವೆಚ್ಚ, ಉತ್ತಮ ಇಳುವರಿ ಹಾಗೂ ಉತ್ತಮ ಮಾರುಕಟ್ಟೆ ಬೆಲೆ ನಿರೀಕ್ಷೆಯಲ್ಲಿ ಮೆಕ್ಕೆಜೋಳವನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಅಳವಡಿಸಿಕೊಂಡಿದ್ದರು. ಆದರೆ ಕಳೆದ ಮೂರ‌್ನಾಲ್ಕು ವರ್ಷಗಳಿಂದ ಬಿಳಿಸುಳಿ ರೋಗ ಕಾಣಿಸಿಕೊಳ್ಳುತ್ತಿದ್ದು, ಈ ಬಾರಿ ಅದರ ತೀವ್ರತೆ ಜಿಲ್ಲಾದ್ಯಂತ ಹೆಚ್ಚಿರುವುದು ಕೃಷಿ ವಲಯದಲ್ಲಿ ಆತಂಕ ಮೂಡಿಸಿದೆ.
ಹಾಸನದಲ್ಲಿ 25 ಸಾವಿರ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬೆಳೆದಿದ್ದಾರೆ. 12 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಬೆಳೆದ ಜೋಳಕ್ಕೆ ಬಿಳಿಸುಳಿ ರೋಗ ತಗುಲಿದೆ. ಅದನ್ನು ಜಾನುವಾರು ತಿನ್ನಲೂ ಯೋಗ್ಯವಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರ ಒದಗಿಸಬೇಕು. ಜತೆಗೆ ಹಾಸನವನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ವಿಶೇಷ ಅನುದಾನ ನೀಡಬೇಕು. ಜೋಳ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು.
ರೈತ ಸಂಘದ ಮುಖಂಡರು ಮುಸುಕಿನ ಜೋಳಕ್ಕೆ ಬಿಳಿಸುಳಿ ರೋಗ ತಗುಲಿರುವ ಬಗ್ಗೆ ಗಮನಕ್ಕೆ ತಂದಿದ್ದಾರೆ. ಈ ಸಲುವಾಗಿ ಕೃಷಿ, ತೋಟಗಾರಿಕೆ, ವಿಜ್ಞಾನಿಗಳನ್ನು ಒಳಗೊಂಡಂತೆ ತಂಡವನ್ನು ರಚಿಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಬಂದ ನಂತರ ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ವಹಿಸಲಾಗುವುದು.