ಉತ್ತಮ ಆರೋಗ್ಯಕ್ಕಾಗಿ ಪ್ರತಿನಿತ್ಯ ನಡೆಯೋಣ

ಅರಸೀಕೆರೆ ನಗರದಲ್ಲಿ ಲಯನ್ಸ್ ಕಲ್ಪತರು ಕ್ಲಬ್‌ನಿಂದ ಆಯೋಜಿಸಿದ್ದ ವಾಕಥಾನ್ ನಡಿಗೆಯಲ್ಲಿ ನಾಗರಿಕರು ಪಾಲ್ಗೊಂಡಿರುವುದು.
ಅರಸೀಕೆರೆ ನಗರದಲ್ಲಿ ಲಯನ್ಸ್ ಕಲ್ಪತರು ಕ್ಲಬ್‌ನಿಂದ ಆಯೋಜಿಸಿದ್ದ ವಾಕಥಾನ್ ನಡಿಗೆಯಲ್ಲಿ ನಾಗರಿಕರು ಪಾಲ್ಗೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಕರೆ

ಅರಸೀಕೆರೆ:

ಆರೋಗ್ಯ ಜೀವನಕ್ಕೆ ನಡಿಗೆ ಹೆಸರಿನಲ್ಲಿ ಭಾನುವಾರ ನಗರದ ಲಯನ್ಸ್ ಕಲ್ಪತರು ಕ್ಲಬ್‌ನಿಂದ ಮೊದಲ ಬಾರಿಗೆ ವಾಕಥಾನ್ ಹಮ್ಮಿಕೊಳ್ಳಲಾಗಿತ್ತು.

ಶ್ವೇತ ಬಣ್ಣದ ಟಿ ಶರ್ಟ್ ಧರಿಸಿದ ಮಕ್ಕಳು, ಯುವಕ, ಯುವತಿಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಆರೋಗ್ಯ, ಆರಕ್ಷಕ ಇಲಾಖೆ, ವಿವಿಧ ಕಾಲೇಜು ವಿದ್ಯಾರ್ಥಿಗಳು ಕಂತೇನಹಳ್ಳಿ ಬಡಾವಣೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಆಡಳಿತ ಸೌಧದ ಕಚೇರಿವರೆಗೆ ಹೆಜ್ಜೆ ಹಾಕಿದರು.
ಬಸವೇಶ್ವರ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಮಾನಸಿಕ ಸೇರಿದಂತೆ ಎಲ್ಲ ರೀತಿಯ ಒತ್ತಡ ಅಥವಾ ಕಾಯಿಲೆ ದೂರವಿಡಲು ನಡಿಗೆ ಅತ್ಯುತ್ತಮ ಆಯ್ಕೆ ಎಂಬುದರಲ್ಲಿ ಸಂಶಯವಿಲ್ಲ. ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮೊದಲ ಬಾರಿಗೆ ಸಂಘಟಿತರಾಗಿ ವಾಕಥಾನ್ ಆಯೋಜಿಸಿರುವುದು ಹೆಮ್ಮೆಯ ವಿಷಯ. ನೆಮ್ಮದಿ ಹಾಗೂ ಆರೋಗ್ಯಕ್ಕಾಗಿ ಪ್ರತಿನಿತ್ಯ ನಿಯಮಿತವಾಗಿ ನಡೆಯೋಣ ಎಂದು ಕರೆ ನೀಡಿದರು.
ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಮಾತನಾಡಿ, ಕಲೆ, ಸಂಸ್ಕೃತಿ, ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ತಾಲೂಕಿನಲ್ಲಿ ಆರೋಗ್ಯ ಜಾಗೃತಿ ಅಭಿಯಾನ ವಿನೂತನವಾಗಿದೆ ಎಂದರು.
ಕ್ಲಬ್ ಅಧ್ಯಕ್ಷ ಲಯನ್ ಸತೀಶ್ ಮಾತನಾಡಿ, ಸಹೋದ್ಯೋಗಿಗಳ ಸಹಕಾರ ಪಡೆದು ವಿನೂತನ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಮೊದಲ ಬಾರಿ ನಡೆದ ಆರೋಗ್ಯಕ್ಕೆ ಸಿಂಹ ನಡಿಗೆ ಅತ್ಯಂತ ಯಶಸ್ಸು ಕಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಬಿ.ಪರಮೇಶ್, ಲಯನ್ ವೆಂಕಟೇಶ್, ಮಂಜುನಾಥ್, ಮುಖೇಶ್, ನಗರಸಭೆ ಮಾಜಿ ಸದಸ್ಯ ದರ್ಶನ್, ಕ್ರೀಡಾಪಟು ಗುರು ಸೇರಿದಂತೆ ಪದಾಧಿಕಾರಿಗಳು ವಿವಿಧ ಇಲಾಖೆಗಳ ನೌಕರರು, ಸಿಬ್ಬಂದಿ ಪಾಲ್ಗೊಂಡಿದ್ದರು. ತಾಲೂಕು ಕಚೇರಿ ಆವರಣದಲ್ಲಿ ನಡಿಗೆ ಮುಕ್ತಾಯಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net