ವಾಸ್ತವ ಪರಿಸ್ಥಿತಿ ಅರಿತು ಆದೇಶ ನೀಡಲಿ

ಹಾಸನ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಸ್ವರೂಪ್ ಪ್ರಕಾಶ್, ಸಿ.ಎನ್.ಬಾಲಕೃಷ್ಣ, ಭೋಜೇಗೌಡ, ಸುರೇಶ್ ಬಾಬು ಇತರರಿದ್ದರು
ಹಾಸನ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಸ್ವರೂಪ್ ಪ್ರಕಾಶ್, ಸಿ.ಎನ್.ಬಾಲಕೃಷ್ಣ, ಭೋಜೇಗೌಡ, ಸುರೇಶ್ ಬಾಬು ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ವಾಸ್ತವ ಪರಿಸ್ಥಿತಿ ಅರಿತು ಆದೇಶ ನೀಡಲಿ
  • ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಲಹೆ
ಹಾಸನ: ರಾಜ್ಯದಲ್ಲಿ ಮುಂಗಾರು ಮಳೆಯ ಅಭಾವದಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಭೀಕರ ನೀರಿನ ಅಭಾವ ತಲೆದೋರಿದೆ. ರೈತರು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಧ್ಯೆ, ವಾಸ್ತವ ಪರಿಸ್ಥಿತಿಯನ್ನು ಅರಿಯದೇ ನೆರೆ ರಾಜ್ಯಕ್ಕೆ ನೀರು ಹರಿಸುವಂತೆ ಆದೇಶಿಸುತ್ತಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಧೋರಣೆಯನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಖಂಡಿಸಿದರು.
ದೆಹಲಿಯ ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಆದೇಶ ಹೊರಡಿಸುವ ತಜ್ಞರು ತಕ್ಷಣವೇ ಜಮೀನಿಗೆ ತೆರಳಿ ನೈಜ ಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕಾವೇರಿ ಪ್ರಾಧಿಕಾರದ ಸದಸ್ಯರು ದೆಹಲಿಯಲ್ಲಿ ಕುಳಿತು ಅಂಕಿ-ಅಂಶ ನೋಡಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಅವರಿಗೆ ಕರ್ನಾಟಕದ ಜಲಾಶಯಗಳ ತಳಮಟ್ಟದ ಪರಿಸ್ಥಿತಿ ಗೊತ್ತಿಲ್ಲ. ಮೊದಲು ದೆಹಲಿಯಿಂದ ಹೊರಬಂದು ಕರ್ನಾಟಕದ ಕೆಆರ್‌ಎಸ್, ಹಾರಂಗಿ, ಕಬಿನಿ, ಹೇಮಾವತಿ ಹಾಗೂ ತಮಿಳುನಾಡಿನ ಮೆಟ್ಟೂರು
ಜಲಾಶಯಗಳಿಗೆ ಖುದ್ದಾಗಿ ಭೇಟಿ ನೀಡಲಿ. ನೀರಿಲ್ಲದೆ ಒಣಗುತ್ತಿರುವ ಬೆಳೆಗಳು ಮತ್ತು ಕುಡಿಯುವ ನೀರಿನ ಅಭಾವವನ್ನು ಕಣ್ಣಾರೆ ಕಂಡು ನಂತರ ನಿರ್ಧಾರ ತೆಗೆದುಕೊಳ್ಳಲಿ ಎಂದವರು ಆಗ್ರಹಿಸಿದರು.
ಪ್ರಸ್ತುತ ರಾಜ್ಯದ ಜಲಾಶಯಗಳಲ್ಲಿ ಕೇವಲ 54 ರಿಂದ 55 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಇದು ರಾಜಧಾನಿ ಬೆಂಗಳೂರು ಸೇರಿದಂತೆ ಕಾವೇರಿ ಪಾತ್ರದ ನಗರ-ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕೂ ಸಾಲದ ಸ್ಥಿತಿಯಲ್ಲಿದೆ. ಸರ್ಕಾರ ಈಗಾಗಲೇ ಕೃಷಿಗೆ ನೀರು ನೀಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ತಕ್ಷಣವೇ ನೀರು ಬಿಡುವಂತೆ ಒತ್ತಡ ಹೇರುವುದು ನಮ್ಮ ಜನರ ಜೀವದ ಜತೆ ಆಟವಾಡಿದಂತೆ, ಎಂದು ಆತಂಕ ವ್ಯಕ್ತಪಡಿಸಿದರು.
ದೇವೇಗೌಡರ ಸಲಹೆ ಪರಿಗಣಿಸಿ:
ಮೇಕೆದಾಟು ಯೋಜನೆ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನೀಡಿರುವ ತಾಂತ್ರಿಕ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು. ಟ್ರಿಬ್ಯೂನಲ್ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಚೌಕಟ್ಟಿನಲ್ಲೇ, ಮೊದಲ ಹಂತದಲ್ಲಿ 23 ರಿಂದ 30 ಟಿಎಂಸಿ ನೀರು ಶೇಖರಣೆ ಮಾಡುವ ಸಾಮರ್ಥ್ಯದ ಯೋಜನೆಯನ್ನು ರೂಪಿಸಬೇಕು. ಇದಕ್ಕೆ ತಾಂತ್ರಿಕವಾಗಿ ಅನುಮೋದನೆ ಪಡೆದು ತಕ್ಷಣವೇ ಕಾಮಗಾರಿ ಆರಂಭಿಸಲು ಸರ್ಕಾರ ದಿಟ್ಟ ಹೆಜ್ಜೆ ಇಡಬೇಕು. ಇದರಿಂದ ಸಂಕಷ್ಟದ ವರ್ಷಗಳಲ್ಲಿ ಎರಡೂ ರಾಜ್ಯಗಳಿಗೂ ಅನುಕೂಲವಾಗಲಿದೆ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.
ಒಗ್ಗಟ್ಟಿನ ಹೋರಾಟ ಮಾಡೋಣ:
ರಾಜ್ಯ ಸರ್ಕಾರ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಲಿದೆ ಎಂದು
ಕುಮಾರಸ್ವಾಮಿ ಹೇಳಿದರು. ರಾಜ್ಯದ ನೆಲ, ಜಲ ಮತ್ತು ರೈತರ ಹಿತರಕ್ಷಣೆಯ ವಿಷಯ ಬಂದಾಗ ರಾಜಕೀಯವನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದರು. ಸುದ್ದಿಗೋಷ್ಠಿಯಲಿ ಶ್ರವಣಬೆಳಗೋಳ ಶಾಸಕ ಸಿ.ಎನ್.ಬಾಲಕೃಷ್ಣ, ಸ್ವರೂಪ್ ಪ್ರಕಾಶ್, ಎಂಎಲ್‌ಸಿ ಭೋಜೇಗೌಡ, ಸುರೇಶ್ ಬಾಬು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net