ಯುವಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಲಿ

ಹಾಸನದ ಎಂ.ಜಿ.ರಸ್ತೆಯಲ್ಲಿ ನಿರ್ಮಿಸಿರುವ ಕೃಷಿಕ್ ಸರ್ವೋದಯ ಫೌಂಡೇಷನ್‌ನ ಜಿಲ್ಲಾ ಶಾಖೆಯ ವೈ.ಕೆ.ಪಿ. ಭವನವನ್ನು ಗಣ್ಯರು ಉದ್ಘಾಟಿಸಿದರು. ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವೈ.ಕೆ.ಪುಟ್ಟಸ್ವಾಮಿಗೌಡ, ದೇವರಾಜ್, ಶಾಸಕ ಎಚ್.ಪಿ.ಸ್ವರೂಪ್, ಶಂಕರಲಿಂಗೇಗೌಡ, ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಶೈಲನಾಥ ಸ್ವಾಮೀಜಿ, ಜಿ.ಎಲ್.ಮುದ್ದೇಗೌಡ ಇತರರಿದ್ದರು.
ಹಾಸನದ ಎಂ.ಜಿ.ರಸ್ತೆಯಲ್ಲಿ ನಿರ್ಮಿಸಿರುವ ಕೃಷಿಕ್ ಸರ್ವೋದಯ ಫೌಂಡೇಷನ್‌ನ ಜಿಲ್ಲಾ ಶಾಖೆಯ ವೈ.ಕೆ.ಪಿ. ಭವನವನ್ನು ಗಣ್ಯರು ಉದ್ಘಾಟಿಸಿದರು. ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವೈ.ಕೆ.ಪುಟ್ಟಸ್ವಾಮಿಗೌಡ, ದೇವರಾಜ್, ಶಾಸಕ ಎಚ್.ಪಿ.ಸ್ವರೂಪ್, ಶಂಕರಲಿಂಗೇಗೌಡ, ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಶೈಲನಾಥ ಸ್ವಾಮೀಜಿ, ಜಿ.ಎಲ್.ಮುದ್ದೇಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುವಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಲಿ
  • .ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ
ಹಾಸನ: ಸರ್ಕಾರಿ ಉದ್ಯೋಗವನ್ನಷ್ಟೇ ಗುರಿಯಾಗಿಸಿಕೊಳ್ಳದೆ ಯುವಕರು ಸ್ವಾವಲಂಬಿ ಬದುಕಿಗೆ ನೆರವಾಗುವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಎಂ.ಜಿ. ರಸ್ತೆಯಲ್ಲಿ ನಿರ್ಮಿಸಿರುವ ಕೃಷಿಕ್ ಸರ್ವೋದಯ ಫೌಂಡೇಷನ್‌ನ ಜಿಲ್ಲಾ ಶಾಖೆಯ ನೂತನ ವೈ.ಕೆ.ಪಿ. ಭವನವನ್ನುಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಸ್ಟಾರ್ಟ್‌ಅಪ್‌ಗಳತ್ತ ಯುವಕರು ಗಮನ ಹರಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಸ್ವಬದುಕು ಕಟ್ಟಿಕೊಳ್ಳಲು ಬಯಸುವವರಿಗೆ ಆದಿಚುಂಚನಗಿರಿ ಮಠ ಹಾಗೂ ಕೃಷಿಕ್ ಸರ್ವೋದಯ ಫೌಂಡೇಷನ್ ಬೆನ್ನೆಲುಬಾಗಿ ಇರುತ್ತದೆ ಎಂದರು.
ಹತ್ತು ವರ್ಷಗಳ ಹಿಂದೆ ಸ್ಟಾರ್ಟಪ್ ಬಗ್ಗೆ ಏನೂ ಗೊತ್ತಿರಲಿಲ್ಲ. 2016ರಿಂದ ಈವರೆಗೆ ದೇಶದಲ್ಲಿ ಸುಮಾರು 2 ಲಕ್ಷ ಸ್ಟಾರ್ಟಪ್‌ಗಳು ಪ್ರಾರಂಭವಾಗಿವೆ. ಜಗತ್ತು ವೇಗವಾಗಿ ಬೆಳೆಯುತ್ತಿದ್ದು ಅದಕ್ಕೆ ತಕ್ಕಂತೆ ಯುವಕರು ಕೌಶಲದಿಂದ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು ಎಂದ ಅವರು, ನಾನು ಹಾಗೂ ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು ಎಂದು ಯೋಚಿಸಿದರೆ ಸಮಾಜ ಪ್ರಗತಿ ಹೊಂದಲು ಸಾಧ್ಯವಿಲ್ಲ ಎಂದರು.
ಯಾವುದೇ ಒಂದು ಮಹತ್ತರ ಬದಲಾವಣೆ ತರುತ್ತೇವೆಂದರೆ ಒಬ್ಬರಿಂದ ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರು ಕೆ.ಎಚ್.ರಾಮಯ್ಯ ಅವರಿಗೆ ಈ ವಿಚಾರವಾಗಿ ಸ್ಪಷ್ಟ ಮಾರ್ಗದರ್ಶನ ನೀಡದಿದ್ದರೆ ಒಕ್ಕಲಿಗರ ಸಂಘ ಸ್ಥಾಪನೆಯಾಗುತ್ತಿರಲಿಲ್ಲ. ವಿವೇಕಾನಂದರು ಕೊಲಂಬೊದಿಂದ ಅಲ್ಮೋರದವರೆಗೆ ಪ್ರವಾಸ ಕೈಗೊಂಡಿದ್ದಾಗ ಚೆನ್ನೈನಲ್ಲಿ ವ್ಯಾಸಂಗ ಮಾಡಿಕೊಂಡಿದ್ದ ಕೆ.ಎಚ್.ರಾಮಯ್ಯ ಅವರನ್ನು ಭೇಟಿಯಾಗುತ್ತಾರೆ. ವಿವೇಕಾನಂದರ ಆದರ್ಶ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಅವರು ದೇಶಕ್ಕಾಗಿ ನಾನು ಏನಾದರೂ ಕೊಡುಗೆ ನೀಡಬೇಕು, ಅದಕ್ಕಾಗಿ ಏನು ಮಾಡಬೇಕೆಂದು ಕೇಳಿದಾಗ ವಿವೇಕಾನಂದರು ಉತ್ತರಿಸಿ, ಮೊದಲು ನೀನು ಸ್ವಾವಲಂಬಿಯಾಗು, ಸಮಾಜವನ್ನು ಸದೃಢವಾಗಿಸು, ಒಂಟಿಯಾಗಿ ದೇಶ ಕಟ್ಟಲು ಸಾಧ್ಯವಿಲ್ಲವೆನ್ನುತ್ತಾರೆ. ಆ ಮಾತುಗಳಿಂದ ಪ್ರಭಾವಿತರಾದ ರಾಮಯ್ಯ ಬೆಂಗಳೂರಿಗೆ ವಾಪಸ್ಸಾಗಿ ಒಕ್ಕಲಿಗರ ಸಂಘ ಸ್ಥಾಪಿಸಿದರು. ಜತೆಗೆ ಆದಿಚುಂಚನಗಿರಿ ಮಠಕ್ಕೂ ಅವರು ಸ್ಪಷ್ಟ ರೂಪ ನೀಡಿದರೆಂದರು.
ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ವೈ.ಕೆ.ಪುಟ್ಟಸ್ವಾಮಿಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವಕ-ಯುವತಿಯರನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸಬೇಕೆಂಬ ಉದ್ದೇಶದಿಂದ ಸಮಾಜದ 10 ಜನರು ಸೇರಿ ಕೃಷಿಕ್ ಸರ್ವೋದಯ ಫೌಂಡೇಷನ್ ಸ್ಥಾಪಿಸಿದೆವು. ಉನ್ನತ ವ್ಯಾಸಂಗ ಮಾಡಿದ್ದರೂ ಗ್ರಾಮೀಣ ಮಕ್ಕಳು ಹಿಂಜರಿಕೆಯಿಂದ ದೊಡ್ಡ ಹುದ್ದೆಗಳಿಗೆ ಆಸೆಪಡುವುದಿಲ್ಲ. ಆ ಭಯ ಹೋಗಲಾಡಿಸುವ ದೃಷ್ಟಿಯಿಂದ ಫೌಂಡೇಷನ್ ಪ್ರಾರಂಭಿಸಲಾಯಿತು. ಈವರೆಗೆ 1.50 ಕೋಟಿ ರೂ. ವರೆಗೆ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು.
ಹಾಸನ ಕೃಷಿಕ್ ಸರ್ವೋದಯ ಫೌಂಡೇಷನ್ ಅಧ್ಯಕ್ಷ ದೇವರಾಜ್, ಶಾಸಕ ಎಚ್.ಪಿ.ಸ್ವರೂಪ್, ಮಾಜಿ ಐಎಎಸ್ ಅಧಿಕಾರಿ ಶಂಕರಲಿಂಗೇಗೌಡ ಮಾತನಾಡಿದರು. ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಶೈಲನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಕೃಷಿಕ್ ಸರ್ವೋದಯ ಫೌಂಡೇಷನ್ ನಿರ್ದೇಶಕ ಜಿ.ಎಲ್.ಮುದ್ದೇಗೌಡ, ಟ್ರಸ್ಟಿ ಸಿ.ಕೆ.ಶಿವಣ್ಣ, ಕಾರ್ಯದರ್ಶಿ ಎಚ್.ಪಿ.ಮೋಹನ್, ನಿವೇಶನ ದಾನಿ ಮಂಜೇಗೌಡರ ಪುತ್ರಿ ಹೇಮಲತಾ, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ಟಿ.ದ್ಯಾವೇಗೌಡ, ಶೇಖರ್, ವೆಂಕಟೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘು ಇತರರಿದ್ದರು.
93 ವರ್ಷದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಾರಕ್ಕೆ ಮೂರು ಸಲ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾರೆ. ಈ ಇಳಿವಯಸ್ಸಿನಲ್ಲೂ ರಾಜ್ಯದ ನೀರಾವರಿಗಾಗಿ ರಾಜ್ಯಸಭೆಯಲ್ಲಿ ಮಾತನಾಡುತ್ತಾರೆ. ರಾಜ್ಯಕ್ಕೆ ನೀರು ಕೊಡಿ ಎಂದು ಅವರು ಹೋರಾಡುತ್ತಿರುವಾಗ ಯುವಕರು ಏನು ಮಾಡುತ್ತಿದ್ದಾರೆ.
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net