ಹೇಮೆಯ ನೀರು ನಾಲೆಗಳಿಗೆ ಹರಿಯಲಿ

ಗೊರೂರು ಜಲಾಶಯದಿಂದ ಅರಕಲಗೂಡು ತಾಲೂಕಿನ ಹೇಮಾವತಿ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಹೇಮಾವತಿ ಜಲಾಶಯ ಯೋಜನೆ ಮುಖ್ಯ ಇಂಜಿನಿಯರ್ ಜಿ. ಭೀಮಾನಾಯ್ಕ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಎಚ್.ಪಿ. ಶ್ರೀಧರ್ ಗೌಡ, ಕೆ.ಟಿ. ಸೋಮಶೇಖರ್, ಪುಟ್ಟಸ್ವಾಮಿ, ಗುರುಮೂರ್ತಿ, ಮಾದೇಶ್, ದಶರಥ ಇತರರಿದ್ದರು.
ಗೊರೂರು ಜಲಾಶಯದಿಂದ ಅರಕಲಗೂಡು ತಾಲೂಕಿನ ಹೇಮಾವತಿ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಹೇಮಾವತಿ ಜಲಾಶಯ ಯೋಜನೆ ಮುಖ್ಯ ಇಂಜಿನಿಯರ್ ಜಿ. ಭೀಮಾನಾಯ್ಕ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಎಚ್.ಪಿ. ಶ್ರೀಧರ್ ಗೌಡ, ಕೆ.ಟಿ. ಸೋಮಶೇಖರ್, ಪುಟ್ಟಸ್ವಾಮಿ, ಗುರುಮೂರ್ತಿ, ಮಾದೇಶ್, ದಶರಥ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Hemavati

ಅರಕಲಗೂಡು:

ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ತಮ್ಮ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ದೊರಕಬೇಕಾದರೆ ತಕ್ಷಣವೇ ಹೇಮಾವತಿ ಬಲದಂಡೆ, ಬಲ ಮೇಲ್ದಂಡೆ ನಾಲೆಗಳಿಗೆ ಮತ್ತು ಅಡಿಕೆ ಬೊಮ್ಮನಹಳ್ಳಿ ನಾಲೆಗಳಿಗೆ ನೀರು ಹರಿಸಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್ ಗೌಡ ಆಗ್ರಹಿಸಿದರು.

ಸೋಮವಾರ ರೈತರೊಂದಿಗೆ ಗೊರೂರು ಹೇಮಾವತಿ ಜಲಾಶಯ ಯೋಜನೆಯ ಮುಖ್ಯ ಇಂಜಿನಿಯರ್ ಜಿ. ಭೀಮಾನಾಯ್ಕ ಅವರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಹೇಮಾವತಿ ಜಲಾಶಯ ನಿರ್ಮಾಣದಿಂದ ತಾಲೂಕಿನ ಸಾವಿರಾರು ರೈತರು ಸಂತ್ರಸ್ತರಾಗಿದ್ದರೂ, ಯೋಜನೆಯ ಲಾಭ ಮಾತ್ರ ಈ ಭಾಗದ ರೈತರಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವರ್ಷ ಮುಂಗಾರು ಕೈಕೊಟ್ಟ ಪರಿಣಾಮ ತಾಲೂಕಿನಾದ್ಯಂತ ವಿವಿಧ ಬೆಳೆಗಳು ಒಣಗಿ ನಾಶವಾಗಿವೆ. ಕೆರೆ-ಕಟ್ಟೆಗಳು ಬರಿದಾಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ರೈತರು ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಎದುರಾಗಿದೆ. ಕೃಷಿ ಚಟುವಟಿಕೆಗಳು ಸಂಪೂರ್ಣ ನೆಲಕಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಸುರಿದ ಮಳೆಯಿಂದ ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ನೀರು ಬಿಡುಗಡೆ ಮಾಡಿ ಕೆರೆ-ಕಟ್ಟೆಗಳನ್ನು ತುಂಬಿಸಬೇಕು. ನಂತರ ನಾಲೆಗಳ ಮೂಲಕ ಕೃಷಿ ಭೂಮಿಗಳಿಗೆ ನೀರು ಹರಿಸಿ ರೈತರ ಬೆಳೆ ಉಳಿಸುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳು ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಎರಡು ಬೆಳೆಗಳನ್ನು ಬೆಳೆಯಲು ಅನುಕೂಲವಾಗುವಂತೆ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲವಾದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಗೊರೂರು ಹೇಮಾವತಿ ಜಲಾಶಯ ಯೋಜನೆಯ ಮುಖ್ಯ ಇಂಜಿನಿಯರ್ ಜಿ. ಭೀಮಾನಾಯ್ಕ ಮಾತನಾಡಿ, ಇದೇ ತಿಂಗಳ 5ರಂದು ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದೆ. ಪ್ರಸ್ತುತ ಮೊದಲ ಆದ್ಯತೆಯಾಗಿ ಕುಡಿಯಲು ಹಾಗೂ ಕೆರೆ-ಕಟ್ಟೆಗಳನ್ನು ತುಂಬಿಸುವ ಬಗ್ಗೆ ಚರ್ಚೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾದಲ್ಲಿ ಬೆಳೆಗಳಿಗೆ ನೀರು ಹರಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ರೈತರ ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಕೆ.ಟಿ. ಸೋಮಶೇಖರ್, ಹೊಡೆನೂರು ಪುಟ್ಟಸ್ವಾಮಿ, ಹಂಡ್ರಂಗಿ ಬೇಲೂರೇಗೌಡ, ದಶರಥ್, ಎ.ವಿ. ಗುರುಮೂರ್ತಿ, ಮಾದೇಶ್, ಹೂವಣ್ಣ, ಸಲೀಂ, ಸುಭಾನ್ ಷರೀಫ್, ಸುರೇಶ್, ಮುಸಾವೀರ್ ಪಾಷಾ, ಸತ್ಯರಾಜ್, ಮಂಜುನಾಥ್, ದೀಪು, ಪುರುಷೋತ್ತಮಗೌಡ, ಪ್ರಸನ್ನ, ಪುಟ್ಟಯ್ಯ, ಲಕ್ಷ್ಮಣ್, ಭರತ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net