ರಾಜ್ಯ ಸರ್ಕಾರದ ಇಬ್ಬಗೆ ನೀತಿಗೆ ಸೋಲಾಗಲಿ

ನಗರದಲ್ಲಿ ಎಐಡಿಎಸ್‌ಒಯು ನೇತೃತ್ವದಲ್ಲಿ ನಿಟ್ಟೂರು ಹೋಬಳಿ ಮಟ್ಟದ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು. ಚಂದ್ರಕಲಾ, ಚೈತ್ರಾ, ಆರ್.ಪಿ.ವೆಂಕಟೇಶ ಮೂರ್ತಿ ಇತರರಿದ್ದರು.
ನಗರದಲ್ಲಿ ಎಐಡಿಎಸ್‌ಒಯು ನೇತೃತ್ವದಲ್ಲಿ ನಿಟ್ಟೂರು ಹೋಬಳಿ ಮಟ್ಟದ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು. ಚಂದ್ರಕಲಾ, ಚೈತ್ರಾ, ಆರ್.ಪಿ.ವೆಂಕಟೇಶ ಮೂರ್ತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರದ ಇಬ್ಬಗೆ ನೀತಿಗೆ ಸೋಲಾಗಲಿ
  • ಎಐಡಿಎಸ್‌ಒಯು ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ ಹೇಳಿಕೆ
ಹಾಸನ: ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆಯಡಿ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ಆರೋಪಿಸಿ ಎಐಡಿಎಸ್‌ಒಯು ನೇತೃತ್ವದಲ್ಲಿ ಸೋಮವಾರ ಹಂಗರಹಳ್ಳಿ, ನಾಗೇನಹಳ್ಳಿ, ರಂಗೇನ ಹಳ್ಳಿ, ಕೆಲವತ್ತಿ, ವೇದಾವತಿ, ಯಲಗುಂದ, ಹೊಸೂರು, ಸಿಂಗಟಗೆರೆ, ಸೊಪ್ಪಿನಹಳ್ಳಿ, ಲಿಂಗರಸನಹಳ್ಳಿ, ಬ್ರಹ್ಮದೇವರಹಳ್ಳಿ, ಉಬ್ಬೆನಹಳ್ಳಿ ಶಾಲೆಗಳನ್ನು ಉಳಿಸಲು ನಿಟ್ಟೂರು ಹೋಬಳಿ ಮಟ್ಟದ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು.
ಎಐಡಿಎಸ್‌ಒಯು ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ ಮಾತನಾಡಿ, 6 ಕಿ.ಮೀ. ವ್ಯಾಪ್ತಿಗೆ ಸೇರಿದಂತೆ ಗ್ರಾಮ ಪಂಚಾಯಿತಿಗೆ ಒಂದು ಶಾಲೆ ಎಂಬ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಮೂಲಕ ರಾಜ್ಯ ಸರ್ಕಾರ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಸರ್ಕಾರಿ ಶಾಲೆಗಳಿಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸದೆ ಅಧೋಗತಿಗೆ ತಂದು, ಜನ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿಲ್ಲ ಎಂದು ಸರ್ಕಾರವೇ ಅಪಪ್ರಚಾರ ಮಾಡುತ್ತಿದೆ. ಬಡವರ ಶಾಲೆ ಮುಚ್ಚುವ ಮಾತನಾಡುವ ಸರ್ಕಾರ 1500 ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದೆ. ನಮ್ಮ ರಕ್ತದಲ್ಲೇ ಕನ್ನಡ ಇದೆ ಎನ್ನುವ ಶಿಕ್ಷಣ ಸಚಿವರು ಚನ್ನಪಟ್ಟಣದ ಹೊಂಗನೂರು ಶಾಲೆಯನ್ನು ಮುಚ್ಚುವ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಈ ಇಬ್ಬಗೆಯ ನೀತಿಯನ್ನು ಸೋಲಿಸಬೇಕು ಎಂದು ಕರೆ ನೀಡಿದರು.
ಎಐಡಿಎಸ್‌ಒಯುಐ ರಾಜ್ಯ ಕಾರ್ಯದರ್ಶಿ ವಿನಯ್ ಚಂದ್ರ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಪ್ರಕಾರ ರಾಜ್ಯದ ಲಕ್ಷಾಂತರ ರೈತ-ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ವೃತ್ತಿಪರ ಶಿಕ್ಷಣವನ್ನು ಆರಂಭಿಸಲಾಗುವುದು. 6ನೇ ತರಗತಿಯಿಂದ ಮಕ್ಕಳಿಗೆ ಮಣ್ಣಿನ ಹಣತೆ ಮಾಡುವ, ಅಡಕೆ ಸುಲಿಯುವ ಕೌಶಲ್ಯಗಳನ್ನು ಕಲಿಸುವುದಾಗಿ ಶಿಕ್ಷಣ ಮಂತ್ರಿಗಳು ಬಹಿರಂಗಪಡಿಸಿದ್ದಾರೆ. ಕಾರ್ಮಿಕರ ಮಕ್ಕಳನ್ನು, ಕಾರ್ಮಿಕರನ್ನಗಿಯೇ ಉಳಿಸುವ ಕುತಂತ್ರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ್ ಮೂರ್ತಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕಾದ ಸರ್ಕಾರಗಳು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಮುಚ್ಚಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಕೇಂದ್ರೀಕೃತ ಶಾಲೆಗಳನ್ನು ಮಾಡುವ ನೆಪದಲ್ಲಿ ಜನರ ಸ್ವಾತಂತ್ರೃ ಕಸಿಯಲು ಹಾಗೂ ಮಹಾನ್ ವ್ಯಕ್ತಿಗಳ ಆಶಯಗಳನ್ನು ಗಾಳಿಗೆ ತೂರಲು ಸರ್ಕಾರ ಮುಂದಾಗುತ್ತಿದೆ ಎಂದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಉಪಾಧ್ಯಕ್ಷ ವಿ.ಎನ್. ರಾಜಶೇಖರ್ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಅಭಿವೃದ್ಧಿಪಡಿಸಲು ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್‌ನಿಂದ 2500 ಕೋಟಿ ರೂ. ಸಾಲ ಪಡೆದಿರುವ ಉದ್ದೇಶ ಮತ್ತು ಷರತ್ತುಗಳೇನು ಎಂಬುದು ಜನರ ಮುಂದೆ ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಎಂ. ಕೃಷ್ಣ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶಿವಶಂಕರ್, ಬರಹಗಾರ ಅಪ್ಪಾಜಿಗೌಡ ಮಾತನಾಡಿದರು. ಸಮಾವೇಶದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಾನಕಿ, ನಿಂಗರಾಜ, ಮಮತಾ, ನೀಲಮ್ಮ ಶಿವರುದ್ರಪ್ಪ, ಚಂದ್ರಶೇಖರ ಪ್ರವೀಣ್ ನಾಯ್ಕ, ಬಸವರಾಜು ಸದಸ್ಯರು, ಎಐಡಿಎಸ್‌ಒಯು ಜಿಲ್ಲಾಧ್ಯಕ್ಷೆ ಚೈತ್ರಾ, ಜಿಲ್ಲಾ ಕಾರ್ಯದರ್ಶಿ ಸುಷ್ಮಾ, ಡಿ.ಪಿ.ಅಭಿಷೇಕ್, ಮಮತಾ, ಪುರುಷೋತ್ತಮ್, ಧನು, ಧನಂಜಯ್, ರಾಕೇಶ್, ಶಿವು, ಭಾನು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net