ಜಿಲ್ಲಾ ಕಾರಾಗೃಹಕ್ಕೆ ಜಿಲ್ಲಾಧಿಕಾರಿ ಲತಾಕುಮಾರಿ ಭೇಟಿ ನೀಡಿದರು. ಬಿ.ಆರ್.ಉದಯ್ ಕುಮಾರ್, ಆರ್. ಪ್ರಸನ್ನ, ಅರಕಲಗೂಡು ಮಧುಸೂದನ್, ಸುಜಾತಾ ಎಫ್ ತಲವಾರ್, ಮಂಜುನಾಥ್, ಎಚ್.ಡಿ ವಜ್ರ ಕುಮಾರ್ ಇದ್ದರು.
ಜಿಲ್ಲಾ ಕಾರಾಗೃಹ ಸಂದರ್ಶಕ ಮಂಡಳಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಹೇಳಿಕೆ
ಎಫ್.ಎಂ. ರೇಡಿಯೋ ಹಾಗೂ ಸ್ಪೀಕರ್‌ಗಳನ್ನು ಹಸ್ತಾಂತರ
ಹಾಸನ: ಕೈದಿಗಳು ಮನ ಪರಿವರ್ತನೆ ಮಾಡಿಕೊಂಡು ಉತ್ತಮ ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ಹಾಗೂ ಜಿಲ್ಲಾ ಕಾರಾಗೃಹ ಸಂದರ್ಶಕ ಮಂಡಳಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಹೇಳಿದರು.
ಜಿಲ್ಲಾ ಕಾರಾಗೃಹಕ್ಕೆ ಆಕಾಶವಾಣಿ ಹಾಗೂ ರೋಟರಿ ಸಂಸ್ಥೆಯಿಂದ ಕೊಡುಗೆಯಾಗಿ ನೀಡಿದ ಎಫ್.ಎಂ. ರೇಡಿಯೋ ಹಾಗೂ ಸ್ಪೀಕರ್‌ಗಳನ್ನು ಹಸ್ತಾಂತರ ಮಾಡಿ ಮಾತನಾಡಿದ ಅವರು, ಮನಪರಿವರ್ತನೆಗೆ ಜಿಲ್ಲಾ ಕಾರಾಗೃಹವು ವಿವಿಧ ಕಾರ್ಯಕ್ರಮಗಳ ಮುಖೇನ ಪೂರಕ ವಾತಾವರಣವನ್ನು ಒದಗಿಸಿಕೊಡುತ್ತವೆ. ಕೈದಿಗಳು ಅವುಗಳ ಪ್ರಯೋಜನ ಪಡೆದುಕೊಂಡು ಸತ್ಪ್ರಜ್ಞೆಗಳಾಗಬೇಕು ಹಾಗೂ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಕಾರಾಗೃಹ ಸಂದರ್ಶಕ ಮಂಡಳಿ ಸದಸ್ಯ ಬಿ.ಆರ್.ಉದಯ್ ಕುಮಾರ್ ಮಾತನಾಡಿ, ಬಂಧಿ ನಿವಾಸಿಗಳು ಆಕಾಶವಾಣಿಯಲ್ಲಿ ಬಿತ್ತರಿಸುವ ಕಾರ್ಯಕ್ರಮಗಳನ್ನು ಆಲಿಸಿ ಗ್ರಂಥಾಲಯದಲ್ಲಿ ದೊರೆಯುವ ಉತ್ತಮ ಪುಸ್ತಕಗಳನ್ನು ಓದಿ ಸನ್ನಡತೆಯ ಕಡೆಗೆ ಹೆಜ್ಜೆ ಇಟ್ಟು ಸಮಾಜದೊಂದಿಗೆ ಬದುಕಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪೌಲ್ಟ್ರಿ ಹಾಗೂ ಪಶು ಸಂಗೋಪನೆ ತರಬೇತಿ ಪಡೆದ ಕೈದಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಜಿಲ್ಲಾ ಕಾರಾಗೃಹ ಅಧ್ಯಕ್ಷರಾದ ಆರ್. ಪ್ರಸನ್ನ, ಆಕಾಶವಾಣಿಯ ಅರಕಲಗೂಡು ಮಧುಸೂದನ್, ಸುಜಾತಾ ಎಫ್ ತಲವಾರ್, ರೋಟರಿ ಕ್ಲಬ್‌ನ ಮಂಜುನಾಥ್, ಎಚ್.ಡಿ.ವಜ್ರಕುಮಾರ್ ಇದ್ದರು.