ಭೌತಿಕವಾಗಿ, ಬೌದ್ಧಿಕವಾಗಿ ಕನ್ನಡ ಬಳಕೆಯಾಗಲಿ

ಹಾಸನ ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಎಚ್.ಎಲ್.ಮಲ್ಲೇಶಗೌಡ, ಟಿ.ಆರ್.ಲೋಕೇಶ್, ಎಂ.ಬಿ. ಇರ್ಷಾದ್, ಎಚ್.ಎಸ್.ಬಸವೇಗೌಡ ಇತರರಿದ್ದರು
ಹಾಸನ ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಎಚ್.ಎಲ್.ಮಲ್ಲೇಶಗೌಡ, ಟಿ.ಆರ್.ಲೋಕೇಶ್, ಎಂ.ಬಿ. ಇರ್ಷಾದ್, ಎಚ್.ಎಸ್.ಬಸವೇಗೌಡ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಭೌತಿಕವಾಗಿ, ಬೌದ್ಧಿಕವಾಗಿ ಕನ್ನಡ ಬಳಕೆಯಾಗಲಿ
  • ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಎಲ್.ಮಲ್ಲೇಶಗೌಡ ಅಭಿಪ್ರಾಯ
  • ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಹಾಸನ: ಭೌತಿಕ ಮತ್ತು ಬೌದ್ಧಿಕವಾಗಿ ಕನ್ನಡವನ್ನು ಬಳಸಿಕೊಳ್ಳುವುದರಿಂದ ಮಾತ್ರ ಕುವೆಂಪು ಆಶಯದ ‘ಕನ್ನಡವಾಗಿರು‘ ಅನ್ನುವುದು ಸಾರ್ಥಕವಾಗುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಎಲ್.ಮಲ್ಲೇಶಗೌಡ ಹೇಳಿದರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದು 2025-26ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಕೊಲ್ಲುವಿಕೆ ನಗರ ಪ್ರದೇಶಗಳಿಂದ ಆಚೆಗೆ ಹಳ್ಳಿಗಳಿಗೂ ವಿಸ್ತರಣೆಗೊಂಡಿರುವುದು ವಿಪರ್ಯಾಸ. ಕನ್ನಡದಲ್ಲಿನ ‘ಅನ್ನ’ದ ಅರ್ಥ ವಿನ್ಯಾಸ ನಮ್ಮ ಹಸಿವಿನ ಪರಂಪರೆ, ಮೌಲ್ಯ, ರೂಢಿಗಳಿಗೆ ಸಂಬಂಧಿಸಿದ್ದು ಎನ್ನುವುದನ್ನು ಅರ್ಥ ಮಾಡಿಕೊಂಡು, ಅನ್ಯಭಾಷಿಕ ಪದಗಳನ್ನು ನಮ್ಮ ಸತ್ವಯುತ ಭಾಷೆಗೆ ಪರ್ಯಾಯವಾಗಿ ಬಳಸುವುದನ್ನು ನಿಲ್ಲಿಸಬೇಕು ಎಂದರು.
ಭಾವನಾತ್ಮಕವಾಗಿ ಕನ್ನಡವನ್ನು ಶಕ್ಯವಾಗಿ ಬಳಸುತ್ತ ನಮ್ಮ ಕನ್ನಡದ ಒಳಗೊಳ್ಳುವಿಕೆಯ ಗುಣವನ್ನು ಹೊರಗೆ ಬೆರೆಯುವ ಗುಣಕ್ಕೆ ಸಮಾಂತರವಾಗಿ ದುಡಿಸಿಕೊಳ್ಳಬೇಕು ಎಂದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಅಂತಾರಾಷ್ಟ್ರೀಯ ವಿಸೆಲ್ ಗಾಯಕ ಟಿ.ಆರ್.ಲೋಕೇಶ್ ಮಾತನಾಡಿ, ವಿಶೇಷ ಮತ್ತು ಅಪರೂಪದ ಕಲೆಯನ್ನು ಗುರುತಿಸಿ ಗೌರವಿಸುವ ಕೆಲಸಗಳಾಗುತ್ತಿರುವುದು ಅಭಿನಂದನಾರ್ಹ ಎಂದರು. ಕನ್ನಡದ ಪ್ರಸಿದ್ಧ ಹಾಡುಗಳನ್ನು ವಿಸೆಲ್ ಗಾಯನದ ಮೂಲಕ ಹಾಡಿ ಎಲ್ಲರ ಗಮನ ಸೆಳೆದರು.
ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಎಚ್.ಎಸ್.ಬಸವೇಗೌಡ ಮಾತನಾಡಿ, ಸಾಮಾಜಿಕವಾಗಿ ಒಗ್ಗೂಡುವುದಕ್ಕೆ ಮತ್ತು ಪ್ರಾಯೋಗಿಕ ತಿಳಿವಳಿಕೆಗಾಗಿ ಔಪಚಾರಿಕ ಶಿಕ್ಷಣದ ಜತೆಗೆ ಅನೌಪಚಾರಿಕ ಶಿಕ್ಷಣವೂ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಕುಶಲತೆ ಮತ್ತು ಮಾನಸಿಕ ವಿಕಾಸಕ್ಕೆ ಸಹಪಠ್ಯ ಚಟುವಟಿಕೆಗಳು ಅಗತ್ಯವಿದ್ದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಮತ್ತು ಅವರ ಪ್ರತಿಭೆಯನ್ನು ಹೊರತರಲು ಸಾಂಸ್ಕೃತಿಕ ವೇದಿಕೆಗಳ ಪಾತ್ರ ಹಿರಿದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ.ಇರ್ಷಾದ್ ಮಾತನಾಡಿ, ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳ ಮನೋಬಲ, ಶಿಸ್ತು ಮತ್ತು ಸೃಜನಶೀಲತೆಗೆ ಒರೆಹಚ್ಚುವ ಕೆಲಸ ಮಾಡುತ್ತದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ರಂಗಕರ್ಮಿ ಕೆ.ಟಿ.ಸತ್ಯಮೂರ್ತಿ ಮತ್ತು ಶಿಕ್ಷಣ ಕ್ಷೇತ್ರದಿಂದ ಪ್ರಶಸ್ತಿ ಪಡೆದ ಡಾ.ಪಾರ್ಥೇಶ್ ಅವರನ್ನು ಕಾಲೇಜಿನಿಂದ ಸನ್ಮಾನಿಸಲಾಯಿತು. ಪದೋನ್ನತಿ ಹೊಂದಿದ ಕಾಲೇಜಿನ ಏಳು ಪ್ರಾಧ್ಯಾಪಕರನ್ನು ಗೌರವಿಸಲಾಯಿತು.
ಶೈಕ್ಷಣಿಕ ಡೀನ್ ಡಿ.ಎಸ್.ರಾಜು, ಪರೀಕ್ಷಾ ನಿಯಂತ್ರಕ ಡಾ.ಕೆ.ಡಿ.ಮುರಳೀಧರ್, ಕಾಲೇಜಿನ ಸಿ.ಡಿ.ಸಿ ಸದಸ್ಯ ವಿಶ್ವನಾಥ್ ಚೌಹಾಣ್, ಸ್ಕೌಟ್ಸ್ ಅಂಡ್ ಗೈಡ್ಸ್ ಸಂಚಾಲಕ ಡಾ. ಸಿ.ಸುರೇಶ, ಡಾ.ಪ್ರಮೀಳಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net