ಪಟ್ಟಣದ ವೈಕುಂಠ ಬೀದಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ಪುರಸಭೆ ಮಾಜಿ ಅಧ್ಯಕ್ಷ ತೋ.ಚ.ಅನಂತ ಸುಬ್ಬರಾಯ, ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಸದಸ್ಯರಾದ ಜಗದೀಶ್, ಶೈಲೇಶ್, ಅಶೋಕ್ ಇತರರಿದ್ದರು.
ಬೇಲೂರು: ಪಟ್ಟಣದ ವೈಕುಂಠ ಬೀದಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ಬಳಿ ಇರುವ ವೈಕುಂಠ ಬೀದಿಯಿಂದ ಬಯಲು ರಂಗ ಮಂದಿರವರೆಗೆ 95 ಲಕ್ಷ ರೂ. ಅನುದಾನದಲ್ಲಿ ರಸ್ತೆ, ಚರಂಡಿ ಕವರಿಂಗ್ ಡೆಕ್ ಸ್ಲಾೃಬ್ ಮಾಡಿಸಲಾಗುತ್ತಿದೆ. ಇದರೊಂದಿಗೆ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುದಕ್ಕಾಗಿ 7.5 ಕೋಟಿ ರೂ. ಎಸ್‌ಎಫ್‌ಸಿ ಅನುದಾನ ಪುರಸಭೆ ವ್ಯಾಪ್ತಿಯ ಕಾಮಗಾರಿಗೆ ಬಿಡುಗಡೆಯಗಿದ್ದು, 23 ವಾರ್ಡ್‌ಗಳಲ್ಲೂ ಚರಂಡಿ, ರಸ್ತೆ, ಡೆಕ್ ಸ್ಲಾೃಬ್ ಕೆಲಸ ಮಾಡಿಸಲಾಗುವುದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ತೋ.ಚ.ಅನಂತ ಸುಬ್ಬರಾಯ ಮಾತನಾಡಿ, ಶಾಸಕ ಎಚ್.ಕೆ.ಸುರೇಶ್ ಬಿಜೆಪಿ ಪಕ್ಷದವರಾಗಿದ್ದರೂ ಪಕ್ಷಾತೀತವಾಗಿ ಯಾವುದೇ ರಾಜಕೀಯ ಮಾಡದೆ ನಮ್ಮ ಎಂಟನೇ ವಾರ್ಡಿನಲ್ಲಿ ಪುರಸಭೆ ಅನುದಾನದಲ್ಲಿ ಕೆಲಸ ಮಾಡಿಸುತ್ತಿರುವುದು ಶ್ಲಾಘನೀಯವಾಗಿದೆ. ಜತೆಗೆ ಪಟ್ಟಣದ ಅಭಿವೃದ್ಧಿ ಮಾಡಲು ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಇಲ್ಲಿ ಪಕ್ಷ ಮುಖ್ಯ ಅಲ್ಲ ಕೆಲಸ ಮುಖ್ಯ ಎಂದರು.