ನಾಡಿನ ಸಾಹಿತ್ಯ, ಸಂಸ್ಕೃತಿಯ ಮಹಾರಾಜ ಕುವೆಂಪು

ಹೊಳೆನರಸೀಪುರ ಪಟ್ಟಣದ ಮಹಾತ್ಮ ಗಾಂಧಿ ಉದ್ಯಾನದಲ್ಲಿ ಕುವೆಂಪು ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿಗತ್ತು. ಡಿಕೆ ಕುಮಾರಯ್ಯ, ಡಿಕೆ ವಸಂತಯ್ಯ, ಬಿ ಟಿ ಲೋಕೇಶ್, ನಾಗರಾಜ, ಶಿವರಾಮ, ಇದ್ದರು.
ಹೊಳೆನರಸೀಪುರ ಪಟ್ಟಣದ ಮಹಾತ್ಮ ಗಾಂಧಿ ಉದ್ಯಾನದಲ್ಲಿ ಕುವೆಂಪು ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿಗತ್ತು. ಡಿಕೆ ಕುಮಾರಯ್ಯ, ಡಿಕೆ ವಸಂತಯ್ಯ, ಬಿ ಟಿ ಲೋಕೇಶ್, ನಾಗರಾಜ, ಶಿವರಾಮ, ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿ.ಕೆ.ಕುಮಾರಯ್ಯ ಬಣ್ಣನೆ
  • ವೈಚಾರಿಕ ದಿನಾಚರಣೆ ಕಾರ್ಯಕ್ರಮ
ಹೊಳೆನರಸೀಪುರ: ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಸಾಮಾಜಿಕ ಕ್ರಾಂತಿಕಾರಿ ಕುವೆಂಪು ಎಂದು ಬೈಚನಹಳ್ಳಿ ಗ್ರಾಮಾಂತರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಕೆ ಕುಮಾರಯ್ಯ ಹೇಳಿದರು.
ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ವತಿಯಿಂದ ಸೋಮವಾರ ಜಯ ಚಾಮರಾಜೇಂದ್ರ ವೃತ್ತದಲ್ಲಿರುವ ಮಹಾತ್ಮ ಗಾಂಧೀಜಿ ಉದ್ಯಾನದಲ್ಲಿ ಸೋಮವಾರ ಕುವೆಂಪು ಅವರ 121ನೇ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ್ದ ವೈಚಾರಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುವೆಂಪು ಅವರ ವೈಚಾರಿಕತೆ, ವೈಜ್ಞಾನಿಕ, ತಾರ್ಕಿಕ ದೃಷ್ಟಿಕೋನದಿಂದ ಸಾಹಿತ್ಯ, ದೇವರು, ಧರ್ಮ, ಸಮಾಜ ಮತ್ತು ಮಾನವ ಜೀವನವನ್ನು ವಿಶ್ಲೇಷಿಸುವುದು ಎಂಬುದನ್ನು ಸಾರುತ್ತದೆ. ಮೂಢನಂಬಿಕೆಗಳನ್ನು ಪ್ರಶ್ನಿಸುವುದು, ವಿಶ್ವಮಾನವ ಸಂದೇಶದ ಮೂಲಕ ಸಮನ್ವಯ ಮತ್ತು ಸಮಾನತೆಗಳನ್ನು ಕುವೆಂಪು ಪ್ರತಿಪಾದಿಸಿದರು ಎಂದರು.
ಕುವೆಂಪು ಅವರು 20ನೇ ಶತಮಾನ ಕಂಡ ಅಪರೂಪದ ದೈತ್ಯ ಪ್ರತಿಭೆ. ಅವರು ಯುಗದ ಕವಿ, ಜಗದ ಕವಿ ಎನಿಸಿಕೊಂಡವರು. ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಕರ್ನಾಟಕರತ್ನ ಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿ ಹೀಗೆ ಪ್ರಶಸ್ತಿಗಳ ಸರಮಾಲೆಯನ್ನೇ ಮುಡಿಗೇರಿಸಿಕೊಂಡವರು. ಕುವೆಂಪು ಅವರು ಈ ನಾಡಿನ ಸಾಹಿತ್ಯ ಸಾಂಸ್ಕೃತಿಯ ಮಹಾರಾಜ ಎಂದು ಬಣ್ಣಿಸಿದರು.
ಕುವೆಂಪು ಅವರ ಮಂತ್ರ ಮಾಂಗಲ್ಯ ಸರಳ ವಿವಾಹ ಪದ್ಧತಿಯು ಜಾತಿ, ಧರ್ಮ, ಭಾಷೆ ಎಲ್ಲವನ್ನು ಮೀರಿದ ವಿಶ್ವಮಾನವ ವಿವಾಹ ಪದ್ಧತಿ ಎಂದರೆ ತಪ್ಪಾಗಲಾರದು. ನೀವು ಲೋಕವನ್ನಾಗಲಿ, ಸಮಾಜವನ್ನಾಗಲಿ, ಪುರೋಹಿತಶಾಹಿಯನ್ನಾಗಿ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆಯಾಗದೆ ಏನೂ ಬದಲಾಗುವುದಿಲ್ಲ ಎಂಬ ಕುವೆಂಪು ಮಾತುಗಳನ್ನು ನೆನಪಿಸಿಕೊಂಡರು.
ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಬಿಟಿ ಲೋಕೇಶ್ ಪ್ರಧಾನ ಭಾಷಣಕಾರರಾಗಿ ಕುವೆಂಪು ಅವರ ವಿಚಾರಧಾರೆಗಳನ್ನು ಸಮಗ್ರವಾಗಿ ತಿಳಿಸಿಕೊಟ್ಟರು. ದಲಿತ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಬಿಕೆ ವೆಂಕಟೇಶ್ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು.
ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಸಂತಯ್ಯ ಡಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕಡುವಿನ ಹೊಸಳ್ಳಿ ದಿಶಾ.ಕೆ, ಪೂರ್ಣಶ್ರೀ ಮತ್ತು ಅಂತಾರಾಷ್ಟ್ರೀಯ ಕರಾಟೆ ಪಟು ಹರ್ಷವರ್ಧನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಲಿತ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ಘಟಕದ ಕಲಾವಿದರಾದ ಕೆಎಂ ಕುಮಾರ್, ಚನ್ನಕೇಶವ, ವಿದ್ಯಾ ಧನುಷ್ ಕುವೆಂಪು ಅವರು ರಚಿಸಿರುವ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಎಚ್.ಎಸ್.ಪ್ರಭುಶಂಕರ್, ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಲೋಕೇಶ್, ಚು.ಸಾ .ಪರಿಷತ್ತಿನ ಅಧ್ಯಕ್ಷೆ ಪ್ರೇಮಾ ಮಂಜುನಾಥ, ಹಾಸನ ದಸಾಪ ಸಾಹಿತ್ಯ ಕಾರ್ಯದರ್ಶಿ ಮಧು ಕೆ ದೇವರಾಜ್, ಎಚ್.ಗಿರೀಶ್, ಜಂಟಿ ಕಾರ್ಯದರ್ಶಿ ವಸಂತ್ ಕುಮಾರ್, ಕುಮಾರಸ್ವಾಮಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net