ಕೆಂಪೇಗೌಡರ ಆಡಳಿತ ಸರ್ವರಿಗೂ ಮಾದರಿ

ಆಲೂರು ಕೆ.ಇ.ಬಿ ವೃತ್ತದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ರವಿನಾಕಲಗೂಡು, ಉದಯರವಿ, ಜಿ.ಆರ್.ಕೆಂಚೇಗೌಡ, ಲಕ್ಷ್ಮೀಗೌಡ ಅವರನ್ನು ಸನ್ಮಾನಿಸಲಾಯಿತು. ಶ್ರೀ ಶಂಭುನಾಥ ಸ್ವಾಮೀಜಿ, ಎಚ್.ಎನ್ ಮಲ್ಲೇಶ್ ಗೌಡ, ಶ್ರೇಯಸ್ ಪಟೇಲ್, ಬಾಲಕೃಷ್ಣ ಇತರರು ಇದ್ದರು.
ಆಲೂರು ಕೆ.ಇ.ಬಿ ವೃತ್ತದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ರವಿನಾಕಲಗೂಡು, ಉದಯರವಿ, ಜಿ.ಆರ್.ಕೆಂಚೇಗೌಡ, ಲಕ್ಷ್ಮೀಗೌಡ ಅವರನ್ನು ಸನ್ಮಾನಿಸಲಾಯಿತು. ಶ್ರೀ ಶಂಭುನಾಥ ಸ್ವಾಮೀಜಿ, ಎಚ್.ಎನ್ ಮಲ್ಲೇಶ್ ಗೌಡ, ಶ್ರೇಯಸ್ ಪಟೇಲ್, ಬಾಲಕೃಷ್ಣ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶಂಭುನಾಥ ಸ್ವಾಮೀಜಿ ಬಣ್ಣನೆ
ಆಲೂರು: ನವ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜನಪರ ಆಡಳಿತ ಸರ್ವರಿಗೂ ಮಾದರಿ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮತ್ತು ಕೊಡಗು ಜಿಲ್ಲೆಯ ಪೀಠಾಧ್ಯಕ್ಷ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಕೆ.ಇ.ಬಿ ವೃತ್ತದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಆಲೂರು ತಾಲೂಕು ಒಕ್ಕಲಿಗರ ಸಂಘ ಹಾಗೂ ಕೆಂಪೇಗೌಡ ಜಯಂತಿ ಅಭಿಮಾನಿಗಳ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆಲೂರು ತಾಲೂಕು ಸಾಮರಸ್ಯದ ಬೀಡಾಗಿದೆ. ಎಲ್ಲರನ್ನೂ ಒಳಗೊಂಡಂತೆ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ವಿಚಾರ. ಕೆಂಪೇಗೌಡರು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗೆ ದುಡಿದ ಧೀಮಂತ ನಾಯಕರಾಗಿದ್ದು, ಅವರ ಹೆಸರಿನಲ್ಲಿ ಭವನ ನಿರ್ಮಾಣಕ್ಕೆ ಎಲ್ಲರೂ ಒಂದಾಗಿ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಹಾಸನ ಜಿಲ್ಲಾಧ್ಯಕ್ಷ ಎಚ್.ಎನ್ ಮಲ್ಲೇಶ್ ಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಇಡೀ ನಾಡಿನ ಹೆಮ್ಮೆ, ಸರ್ವಜನಪರ ಆಡಳಿತಗಾರ ಹಾಗೂ ಜಾತ್ಯತೀತ ಚಿಂತನೆಯ ವಿಶ್ವಮಾನ್ಯ ನಾಯಕರಾಗಿದ್ದರು. ಅವರ ಆಡಳಿತ ಮತ್ತು ದೂರದೃಷ್ಟಿ ಇಡೀ ನಾಡಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಮಹನೀಯರ ಜಯಂತಿ ಆಚರಿಸುವುದು ಅವರ ಆದರ್ಶ, ಸಮಾಜಮುಖಿ ಕಾರ್ಯಗಳು ಹಾಗೂ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಇದರ ಉದ್ದೇಶ. ನಾಡಪ್ರಭು ಕೆಂಪೇಗೌಡ, ಮಹರ್ಷಿ ವಾಲ್ಮೀಕಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದು, ಅವರ ಸೇವೆ ಮತ್ತು ಚಿಂತನೆ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ. ಇವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಿ ಎಂದರು.
ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಶತಮಾನಗಳ ಹಿಂದೆಯೇ ಬೆಂಗಳೂರಿನ ಭವಿಷ್ಯವನ್ನು ಊಹಿಸಿ ನಗರವನ್ನು ನಿರ್ಮಿಸಿರುವ ಮಹಾನ್ ನಾಯಕ ಎಂದು ಬಣ್ಣಿಸಿದ ಅವರು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಮ್ಮ ಸಮಾಜದವರೇ ಆಗಿರುವುದರಿಂದ ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಕನ್ನಡ ನಾಡಿಗೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ, ಗ್ರಾಮೀಣ ಪ್ರದೇಶದ ಜನರಿಗಾಗಿ ಕೆರೆ- ಕಟ್ಟೆಗಳನ್ನು ನಿರ್ಮಿಸಿ ನಾಡಿನ ಸಮಸ್ತ ಜನರ ಮನಗೆದ್ದಿದ್ದರು.16ನೇ ಶತಮಾನದಲ್ಲಿಯೇ ದೂರದೃಷ್ಟಿಯಿಂದ ಸುಂದರ ಬೆಂಗಳೂರು ನಗರವನ್ನು ನಿರ್ಮಿಸಿದ್ದಾರೆ. ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದಿರುವ ಬೆಂಗಳೂರು ನಗರ ನಿರ್ಮಾಣಕ್ಕೆ ಕಾರಣರಾದವರು ನಾಡಪ್ರಭು ಕೆಂಪೇಗೌಡರು. ಹಿಂದಿನ ಕಾಲದಲ್ಲಿಯೇ ಒಂದು ನಗರ ಹೇಗಿರಬೇಕೆಂಬ ಕಲ್ಪನೆಯನ್ನು ಹೊಂದಿದ್ದರು ಎಂದು ಬಣ್ಣಿಸಿದರು.
ಕಾರ್ಯಕ್ರಮಕ್ಕೂ ಮುನ್ನ ವೀರಶೈವ ಕಲ್ಯಾಣ ಮಂಟಪದಿಂದ ಕೆಇಬಿ ವೃತ್ತದಲ್ಲಿರುವ ಒಕ್ಕಲಿಗರ ಸಮುದಾಯ ಭವನದವರೆಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಪಟಾಕಿ ಸಿಡಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಈ ವೇಳೆ ವೀರಗಾಸೆ ಕುಣಿತ, ತಮಟೆ ವಾದನ, ಪ್ರದರ್ಶನ ಮೆರುಗು ನೀಡಿದವು.
ವೇದಿಕೆಯ ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮಾಜದಲ್ಲಿ ಸಾಧನೆಗೈದ ಗಣ್ಯರನ್ನು ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಹಾಸನ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮುದ್ದೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಬಾಗೂರು ಮಂಜೇಗೌಡ, ಎಸ್.ಎಸ್ ರಘು ಗೌಡ, ಆರ್.ಟಿ ದ್ಯಾವೇಗೌಡ, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವ ಅಧ್ಯಕ್ಷ ರವಿ ನಾಕಲಗೂಡು, ಮಾಜಿ ಶಾಸಕ ಎಚ್. ಎಂ.ವಿಶ್ವನಾಥ್, ಆಲೂರು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹೆಮ್ಮಿಗೆ ಮೋಹನ್, ಉಪಾಧ್ಯಕ್ಷ ಕೆ.ಎಸ್ ಮಂಜೇಗೌಡ, ಖಜಾಂಚಿ ಶಾಂತಕೃಷ್ಣ, ಗ್ಯಾರಂಟಿ ಅನುಷ್ಠಾನ ಸಮಿತಿಯ ಸಕಲೇಶಪುರ ಅಧ್ಯಕ್ಷ ಮುರಳಿ ಮೋಹನ್, ಆಲೂರು ಅಧ್ಯಕ್ಷ ಪೃಥ್ವಿ ಜಯರಾಮ್, ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಅಜಿತ್ ಚಿಕ್ಕಕಣಗಾಲು, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಪಿ.ಎಲ್ ಲಿಂಗರಾಜು, ಸಮಾಜದ ಹಿರಿಯ ಮುಖಂಡರಾದ ರಾಜಪ್ಪ ಗೌಡ ಕದಾಳು, ಲೋಕೇಶ್ ಕದಾಳು, ತನುಗೌಡ, ವಕೀಲ ಕೆ.ಜಿ ನಾಗರಾಜ್, ತಾಪಂ ಮಾಜಿ ಸದಸ್ಯರಾದ ಸಿ.ವಿ ಲಿಂಗರಾಜು, ನಟರಾಜ್ ನಾಕಲಗೂಡು ಸೇರಿದಂತೆ ಮುಂತಾದವರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net