ಅಬಕಾರಿ’ ಕಿಕ್ ಇಳಿಸಿದ ಕೆಡಿಪಿ ಸದಸ್ಯರು

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ  ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. ಡಾ.ಬಿ.ಕೆ.ರಮೇಶ್, ಶ್ರೀಧರ್ ಕಂಕನವಾಡಿ, ಸತೀಶ್ ಕುಮಾರ್, ರೇವಣ್ಣ, ಜ್ಯೋತಿ, ನಂದೀಶ್, ನವೀನ್ ಇತರರು ಇದ್ದರು.  ಇತರರು
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. ಡಾ.ಬಿ.ಕೆ.ರಮೇಶ್, ಶ್ರೀಧರ್ ಕಂಕನವಾಡಿ, ಸತೀಶ್ ಕುಮಾರ್, ರೇವಣ್ಣ, ಜ್ಯೋತಿ, ನಂದೀಶ್, ನವೀನ್ ಇತರರು ಇದ್ದರು. ಇತರರು
Published on

ಬೇಲೂರು:

ಅಬಕಾರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದ್ದು, ಅಧಿಕಾರಿಗಳು ಅದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ತಾಲೂಕು ಕೆಡಿಪಿ ಸದಸ್ಯರು ಸಭೆಯ ಮುಂಭಾಗದಲ್ಲೇ ಕೆಲಸ ಸಮಯ ಧರಣಿ ಕುಳಿತು ಕ್ರಮಕ್ಕೆ ಒತ್ತಾಯಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಚ್.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ(ಕೆಡಿಪಿ)ಯಲ್ಲಿ ಅಬಕಾರಿ ಇಲಾಖೆಯ ಕಾರ್ಯ ವೈಖರಿಯ ಕುರಿತು ಕೆಡಿಪಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಕೆಲ ಬಾರ್‌ನವರು ನಿಯಮ ಉಲ್ಲಂಘಿಸಿ ಬೆಳಗ್ಗೆಯೆ ತೆರೆಯುತ್ತಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇಲಾಖೆ ಭ್ರಷ್ಟಾಚಾರದಿಂದ ಕೂಡಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಚ್.ಕೆ.ಸುರೇಶ್, ಕೇವಲ ಆರೋಪ ಮಾಡುವುದಲ್ಲ. ಸಾಕ್ಷ್ಯಾಧಾರಗಳೊಂದಿಗೆ ಮಾಹಿತಿ ನೀಡಿದರೆ ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ನಾನೇ ಶಿಫಾರಸು ಮಾಡುತ್ತೇನೆ ಎಂದು ಭರವಸೆ ನೀಡಿದರು. ಅಲ್ಲದೆ ಸಾಕ್ಷ್ಯ ಕರೆಸಿ ಎಂದು ಸಭೆ ಮುಂದುವರಿಸಿದರು. ಈ ಸಂದರ್ಭ ಕೆಡಿಪಿ ಸದಸ್ಯರು ಸಾಕ್ಷಿ ಕರೆಸುತ್ತೇವೆ ಎಂದೇಳಿ ತಮ್ಮ ಆಸನಕ್ಕೆ ಬಂದು ಕುಳಿತರು.
ಕೆಡಿಪಿ ಸದಸ್ಯರು ಮಾಡಿದ ಆರೋಪಕ್ಕೆ ಉತ್ತರಿಸಿದ ಅಬಕಾರಿ ಇಲಾಖೆ ಅಧಿಕಾರಿ ಅಪೂರ್ವಾ, ಆರೋಪಗಳು ಸತ್ಯವಾಗಿದ್ದರೆ ನನ್ನ ವಿರುದ್ಧ ಕ್ರಮವೂ ಕೈಗೊಳ್ಳಿ ಎಂದರು. ಮಧ್ಯಪ್ರವೇಶಿಸಿದ ಕೆಡಿಪಿ ಸದಸ್ಯ ನವೀನ್, ತಮ್ಮ ಬಳಿ ದಾಖಲೆಗಳಿದ್ದು ಅವುಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ರಸ್ತೆ ಕಾಮಗಾರಿಗಳ ಗುಣಮಟ್ಟ, ಗೆಂಡೇಹಳ್ಳಿ ರಸ್ತೆ ಅಭಿವೃದ್ಧಿ, ಅಬಕಾರಿ ಇಲಾಖೆಯ ವಿರುದ್ಧದ ಆರೋಪಗಳು, ಮಾನವ-ಆನೆ ಸಂಘರ್ಷ, ಜನ ಸಾಮಾನ್ಯರ ಸಮಸ್ಯೆಗಳ ಕುರಿತು ಶಾಸಕ ಎಚ್.ಕೆ.ಸುರೇಶ್ ಖಡಕ್ ಎಚ್ಚರಿಕೆ ನೀಡದರೆ, ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆನಂದ್ ದೇಶಾಣಿ ಮಾತನಾಡಿ, ಮಾಜಿ ಸಚಿವರು ತಂದ 6 ಕೋಟಿ ರೂ. ವೆಚ್ಚದ ಕಾಮಗಾರಿಗೆ ಉದ್ದೇಶ ಪೂರ್ವಕವಾಗಿ ಶಾಸಕರು ವಿಳಂಬ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಲ್ಲಿ ಅನುಮಾನ ವ್ಯಕ್ತವಾಗಿದೆ ಎಂದರು.

ಅಲ್ಲದೆ ಮುಂದಿನ ಒಂದು ವಾರದೊಳಗೆ ಗೆಂಡೇಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸದಿದ್ದರೆ ಕೆಡಿಪಿ ಸದಸ್ಯರು, ಸಾರ್ವಜನಿಕರೊಂದಿಗೆ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭ ಗೆಂಡೇಹಳ್ಳಿ ರಸ್ತೆ ಕಾಮಗಾರಿ ವಿಳಂಬದ ವಿಚಾರ ಸಭೆಯಲ್ಲಿ ಶಾಸಕ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆನಂದ್ ದೇಶಾಣಿ ನಡುವೆ ಮಾತಿನ ಚಕಮಕಿಗೂ ಕಾರಣವಾಯಿತು.

ತಾಲೂಕಿನಲ್ಲಿ ಮಳೆ ಇಲ್ಲದೆ ಬೆಳೆ ನಷ್ಟ, ಕುಡಿಯಲು ನೀರಿನ ಅಭಾವ, ಬಿಳಿಸುಳಿ ರೋಗ ಸೇರಿದಂತೆ ಇತರ ಸಮಸ್ಯೆಗಳಿವೆ. ಈ ಬಗ್ಗೆ ಅಧಿಕಾರಿಗಳು ಚರ್ಚಿಸಿ ಮತ್ತು ಇಲ್ಲಿನ ಬೆಳವಣಿಗೆಗಳ ಸಂಪೂರ್ಣ ವರದಿಯನ್ನು ರೈತರಿಗೆ ಪೂರಕವಾಗಿ ಕೊಟ್ಟು, ಕಾರ್ಯರೂಪಕ್ಕೆ ತರಲು ಎಲ್ಲರೂ ಸಹಕಾರ ನೀಡಿ ಎಂದು ಕೂರಿದರು.

ಕೆಡಿಪಿ ಸದಸ್ಯ ನವೀನ್ ಮಾತನಾಡಿ, ಪ್ರತಿ ವರ್ಷ ಬೆಳೆ ವಿಮೆ ಮಡಿಸುತ್ತಾರೆ. ಆದರೆ ರೈತರಿಗೆ ಸರಿಯಾಗಿ ವಿಮೆ ಸಿಗುತ್ತಿಲ್ಲ. ಈ ಬಾರಿಯಾದರೂ ವಿಮೆ ಕೊಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು. ಇದಕ್ಕೆ ದನಿಗೂಡಿಸಿದ ಸದಸ್ಯ ನಂದೀಶ್, ಕೆಲ ಬ್ಯಾಂಕ್‌ಗಳಲ್ಲಿ ರೈತರಿಂದ ವಿಮೆ ಕಟ್ಟಿಸಿಕೊಳ್ಳುತ್ತಿಲ್ಲ. ಶಾಸಕರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಬಿಳಿಸುಳಿ ರೋಗದ ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಇದರ ನಿಯಂತ್ರಣ ಸಾಧ್ಯವಿಲ್ಲ. ಜಮೀನು ಸರ್ವೇ ಮಡಿಸಿ ಎಲ್ಲ ರೈತರಿಗೂ ಪರಿಹಾರ ಕೊಡಿಸಲು ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಬೇಕು. ಎಲ್ಲ ರೈತರು ಬೆಳೆ ವಿಮೆ ಕಟ್ಟಲು ಮತ್ತಷ್ಟು ಕಾಲವಕಾಶ ನೀಡಿ ಸರ್ವರ್ ಸಮಸ್ಯೆಯಾಗದಂತೆ ನೋಡಿ ಕೊಳ್ಳಬೇಕು ಎಂದು ಶಾಸಕ ಸುರೇಶ್ ಸೂಚಿಸಿದರು.

ಕೆಡಿಪಿ ಸದಸ್ಯ ಚೇತನ್‌ಗೌಡ ಮಾತನಾಡಿ, ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಾನವ-ಆನೆ ಸಂಘರ್ಷಕ್ಕೆ ಯಾವುದೇ ಪಕ್ಷದ ಭೇದವಿಲ್ಲದೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ವಿಶೇಷ ಪರಿಹಾರ, ಸರ್ಕಾರಿ ಉದ್ಯೋಗ, ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚ ಭರಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಮನವಿಯನ್ನು ಶಾಸಕರಿಗೆ ಸಲ್ಲಿಸಿದರು.

ಶಾಸಕ ಎಚ್.ಕೆ.ಸುರೇಶ್ ಪ್ರತಿಕ್ರಿಯಿಸಿ, ಕಾಡಾನೆ ದಾಳಿಯಿಂದ ನಿರಂತರವಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಶಾಶ್ವತ ಪರಿಹಾರಕ್ಕೆ ವಿಳಂಬ ಮಾಡಬಾರದು. ಒಂಟಿ ಕಾಡಾನೆ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಬೇಕು ಎಂದು ಅಧಿಕಾರಿಗೆ ಸೂಚಿಸಿದರು.

ತಾಪಂ ಆಡಳಿತಾಧಿಕಾರಿ ಡಾ.ಬಿ.ಕೆ.ರಮೇಶ್, ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ತಾಪಂ ಇಒ ಸತೀಶ್ ಕುಮಾರ್, ಪೊಲೀಸ್ ಇನ್‌ಪೆಕ್ಟರ್ ರೇವಣ್ಣ, ಕೆಡಿಪಿ ಸದಸ್ಯರಾದ ಜ್ಯೋತಿ, ನಂದೀಶ್, ನವೀನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

ಎಲ್ಲ ಇಲಾಖೆಗಳಿಗೂ ಬರುವ ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಕ್ರಮಕೈಗೊಳ್ಳಬೇಕು. ಎಲ್ಲದರೂ ಲೋಪವಾದರೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಸಭೆ ಮುಗಿದು 15 ದಿನಗಳೊಳಗೆ ನಡಾವಳಿ ಕಳುಹಿಸಿ ಸಹಿ ಪಡೆಯಬೇಕು. ಒಂದು ದಿನ ಇದ್ದಾಗ ಸಭೆಯ ನಡಾವಳಿಗೆ ಸಹಿ ಹಾಕಿ ಎಂದರೆ ಹೇಗೆ? ಮೊದಲು ಹಿಂದಿನ ಸಭೆಯಲ್ಲಿ ಏನೇನು ನಿರ್ಣಯವಾಗಿದೆ? ಏನು ಕ್ರಮ ಕೈಗೊಳ್ಳಲಾಗಿದೆ? ಎಂಬುದರ ಸಂಪೂರ್ಣ ಮಾಹಿತಿ ನೀಡಿದರೆ ಚರ್ಚಿಸಲು ಅನುಕೂಲವಾಗುತ್ತದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸರಿಯಾಗಿ ನಿರ್ವಹಿಸಬೇಕು ಎಂದು ತಾಪಂ ಇಒಗೆ ಶಾಸಕ ಎಚ್.ಕೆ.ಸುರೇಶ್ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net