ಬೇಲೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ದೈಹಿಕ ಸಾಮರ್ಥ್ಯ ಮತ್ತು ರೋಗ ನಿರೋಧಕ ಶಕ್ತಿ ಗಣನೀಯವಾಗಿ ಕಡಿಮೆಯಾಗಲು ಜಂಕ್‌ಫುಡ್, ಕ್ರೀಡೆಗಳಿಂದ ದೂರು ಉಳಿದಿರುವುದೇ ಕಾರಣ ಎಂದು ಬೇಲೂರು ಕ್ರಿಕೆಟ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬೇಲೂರು ಕ್ರಿಕೆಟ್ ಕ್ಲಬ್‌ನಿಂದ ಆಯೋಜಿಸಿದ್ದ ಮಕ್ಕಳ ಕ್ರಿಕೆಟ್ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜಂಕ್‌ಫುಡ್ ಪ್ರಭಾವದಿಂದ ಮುಂದಿನ ಪೀಳಿಗೆಯ ಮಕ್ಕಳು ದೈಹಿಕ ದೌರ್ಬಲ್ಯಕ್ಕೆ ಒಳಗಾಗಲು ಪ್ರಮುಖ ಕಾರಣ. ಇವುಗಳಿಂದ ಮಕ್ಕಳನ್ನು ದೂರವಿಟ್ಟು, ಅವರಲ್ಲಿ ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಲು ಕ್ರೀಡಾ ಶಿಬಿರಗಳು ಸಹಕಾರಿಯಾಗುತ್ತವೆ ಎಂದರು.
ಬೇಲೂರು ಕ್ರಿಕೆಟ್ ಕ್ಲಬ್ ಕಾರ್ಯದರ್ಶಿ ರುದ್ರೇಶ್, ಉಪಾಧ್ಯಕ್ಷ ಧರಣೇಶ್, ನಿರ್ದೇಶಕರಾದ ಶ್ರೀವತ್ಸ, ನಿಂಗರಾಜು, ವಿನ್ಸೆಂಟ್ ರೆಬೆಲ್ಲೊ, ಸುಬ್ರಮಣ್ಯ, ಸೂಫಿಯನ್, ಸುದೀಪ್, ಶ್ರುತಿಲ್, ಹಿತೇಶ್ ಭಾಗವಹಿಸಿದ್ದರು.