ಕರ್ನಾಟಕ ಪೊಲೀಸ್ ಕಾಯ್ದೆ 1965ರ ಏಪ್ರಿಲ್ 2ರಂದು ಜಾರಿಗೆ ಬಂದ ದಿನವನ್ನು ರಾಜ್ಯ ಪೊಲೀಸ್ ಧ್ವಜ ದಿನವಾಗಿ ಆಚರಿಸಲಾಗುತ್ತದೆ. ಈ ದಿನದ ಅಂಗವಾಗಿ ಧ್ವಜ ಮಾರಾಟದ ಮೂಲಕ ಸಂಗ್ರಹವಾಗುವ ಹಣವನ್ನು ನಿವೃತ್ತ ಪೊಲೀಸ್ ಸಿಬ್ಬಂದಿ, ಅವರ ಕುಟುಂಬಗಳು ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವಿಗಾಗಿ ಬಳಸಲಾಗುತ್ತದೆ. ಕಳೆದ ವರ್ಷ ಹಾಸನ ಜಿಲ್ಲೆಯಲ್ಲಿ 2 ಲಕ್ಷ ರೂ. ಸಂಗ್ರಹವಾಗಿದ್ದು, 19 ಸಿಬ್ಬಂದಿಯ ಅಂತ್ಯಸಂಸ್ಕಾರಕ್ಕೆ ಹಾಗೂ 137 ಜನರಿಗೆ ಒಟ್ಟು 9 ಲಕ್ಷ ರೂ. ಸಹಾಯ ಒದಗಿಸಲಾಗಿದೆ. ಆದರೆ, ಈ ಮೊತ್ತ ಎಲ್ಲರ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತಿಲ್ಲ ಎಂಬುದು ವಾಸ್ತವ. ಆದ್ದರಿಂದ ಸಮಾಜದ ಪ್ರತಿಯೊಬ್ಬರೂ ಪೊಲೀಸ್ ಧ್ವಜವನ್ನು ಖರೀದಿಸುವ ಮೂಲಕ ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸಬೇಕು. ಪೊಲೀಸ್ ಧ್ವಜ ಕೇವಲ ಒಂದು ಚಿಹ್ನೆಯಲ್ಲ, ಅದು ಸಮಾಜದ ಸುರಕ್ಷತೆಗಾಗಿ ಹಗಲು-ರಾತ್ರಿ ದುಡಿಯುವವರಿಗಿರುವ ಕೃತಜ್ಞತೆಯ ಸಂಕೇತವಾಗಿದೆ ಎಂದರು.