ಮಕ್ಕಳಿಗೆ ಸಂಸ್ಕಾರ ಕಲಿಸುವ ಜವಾಬ್ದಾರಿ ಪಾಲಕರದು

ಹಾಸನ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಘಟಕದಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಾ ಮಂಜುನಾಥ್, ನೇತ್ರಾವತಿ ಮಂಜುನಾಥ್, ಸಿದ್ದೇಶ್ ನಾಗೇಂದ್ರ, ಅಮಿತ್ ಶೆಟ್ಟಿ, ಇಂದಿರಾ ನಾಗರಾಜು, ಅಂಬಿಕಾ, ಚೈತ್ರಗೌಡ, ವಿಜಯಲಕ್ಷ್ಮೀ ಅಂಜನಪ್ಪ ಇತರರಿದ್ದರು.
ಹಾಸನ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಘಟಕದಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಾ ಮಂಜುನಾಥ್, ನೇತ್ರಾವತಿ ಮಂಜುನಾಥ್, ಸಿದ್ದೇಶ್ ನಾಗೇಂದ್ರ, ಅಮಿತ್ ಶೆಟ್ಟಿ, ಇಂದಿರಾ ನಾಗರಾಜು, ಅಂಬಿಕಾ, ಚೈತ್ರಗೌಡ, ವಿಜಯಲಕ್ಷ್ಮೀ ಅಂಜನಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳಿಗೆ ಸಂಸ್ಕಾರ ಕಲಿಸುವ ಜವಾಬ್ದಾರಿ ಪಾಲಕರದು
  • ಪ್ರತಿಭಾ ಮಂಜುನಾಥ್ ಅಭಿಮತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಹಾಸನ: ಪ್ರಸ್ತುತದಲ್ಲಿ ತಂತ್ರಜ್ಞಾನ ಮುಂದುವರಿದರೂ ಮಕ್ಕಳಿಗೆ ಸಂಸ್ಕೃತಿ ತಿಳಿಸಿಕೊಡುವ ಮುಖ್ಯ ಜವಾಬ್ದಾರಿ ಪಾಲಕರ ಮೇಲಿದ್ದು, ಚಿಕ್ಕವಯಸ್ಸಿನಿಂದಲೇ ಸಂಸ್ಕಾರ ಬೆಳೆಸಿದರೆ ಮುಂದೆ ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬಹುದು ಎಂದು ಶಾಸಕ ಸಿಮೆಂಟ್ ಮಂಜು ಅವರ ಪತ್ನಿ ಪ್ರತಿಭಾ ಮಂಜುನಾಥ್ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ದೊಡ್ಡವರು ಹೇಳುವ ಮಾತನ್ನು ಮಕ್ಕಳು ಕೇಳುವ ಗುಣ ಬೆಳೆಸಿಕೊಳ್ಳಬೇಕು. ಇಂದಿನ ಮಕ್ಕಳಿಗೆ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಅರಿವು ಇದ್ದರೂ, ನಮ್ಮ ಸಂಸ್ಕೃತಿ ಮತ್ತು ಜೀವನ ವೌಲ್ಯಗಳಲ್ಲಿ ಹಿರಿಯರ ಅನುಭವವೇ ಮುಖ್ಯ ಎಂದು ತಿಳಿಸಿದರು.
ತಂದೆ-ತಾಯಿ ಕಲಿತ ಸಂಸ್ಕೃತಿ, ಆಚಾರ-ವಿಚಾರಗಳನ್ನು ಕನಿಷ್ಠ ಮಟ್ಟಿಗಾದರೂ ಮಕ್ಕಳಿಗೆ ತಿಳಿಸುವ ಕೆಲಸವನ್ನು ಪಾಲಕರು ಮಾಡಬೇಕು. ಮುಂದಿನ ಭವಿಷ್ಯ ಉತ್ತಮವಾಗಬೇಕಾದರೆ, ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಬೇಕಾದರೆ ಮಕ್ಕಳಲ್ಲೇ ಸಂಸ್ಕಾರ ಬೀಜ ಬಿತ್ತುವುದು ಅಗತ್ಯ ಎಂದರು.
ಇಂದಿನ ಕಾಲದಲ್ಲಿ ಹೆಚ್ಚುತ್ತಿರುವ ಸೌಲಭ್ಯಗಳು ಮಕ್ಕಳಲ್ಲಿ ಸೋಮಾರಿತನವನ್ನು ಹೆಚ್ಚಿಸುತ್ತಿವೆ. ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚು ಸೌಕರ್ಯ ನೀಡಿದಾಗ ಅವರಲ್ಲಿ ಜವಾಬ್ದಾರಿ ಕಡಿಮೆಯಾಗುತ್ತದೆ. ಆದ್ದರಿಂದ, ಸಣ್ಣ ಕೆಲಸಗಳನ್ನಾದರೂ ಕಲಿಸುವುದು ಮುಖ್ಯ. ವೈದ್ಯರು, ಇಂಜಿನಿಯರ್, ಐಎಎಸ್ ಆಗಬೇಕು ಎಂಬ ಆಶಯದಲ್ಲಿ ಮಕ್ಕಳಿಗೆ ಕೇವಲ ಓದಿನ ಮೇಲೆಯೇ ಒತ್ತಡ ಹಾಕುವುದು ಸರಿಯಲ್ಲ. ಮನೆ ಕೆಲಸಗಳೂ ಸೇರಿದಂತೆ ಜೀವನದ ವೌಲ್ಯ ಕಲಿಸುವುದು ಅಗತ್ಯ. ಆಡುವ ಸಮಯದಲ್ಲಿ ಮಕ್ಕಳು ಆಡಬೇಕು, ಓದುವ ಸಮಯದಲ್ಲಿ ಓದಲು ಅವಕಾಶ ಕೊಡಬೇಕು. ಈ ಸಮತೋಲನ ಇದ್ದಾಗ ಮಾತ್ರ ಮಕ್ಕಳ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಭರತನಾಟ್ಯ ಶಿಕ್ಷಕಿಯಾಗಿ ತರಬೇತಿ ಕೊಡುತ್ತಿರುವ ಅಂಬಾಳೆ ರಾಜೇಶ್ವರಿ, ಕುಸುಮಾ ಭೂಪಾಲ್ ಮತ್ತು ಸುಮಿತ್ರಾ ಜಯರಾಂ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಇಂದಿರಾ ನಾಗರಾಜು, ಅಂಬಿಕಾ, ಚಿಕ್ಕಮಗಳೂರು ಕನ್ನಡ ಸೇನೆ ಜಿಲ್ಲಾಧ್ಯಕ್ಷೆ ಚೈತ್ರಗೌಡ, ವಿಜಯಲಕ್ಷ್ಮೀ ಅಂಜನಪ್ಪ, ಶೇಶಮ್ಮ, ನಾಗರತ್ನಾ, ರಮೇಶ್, ರಶ್ಮಿ, ಅನೀತಾ ವೇದಾವತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net