ಹಾಸನ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಎಚ್.ಪಿ.ಮದನ್ ಗೌಡ, ಎಂ.ಕೆ.ಕಮಲ್ ಕುಮಾರ್, ರವಿ ನಾಕಲಗೂಡು, ಜೆ.ಆರ್.ಕೆಂಚೇಗೌಡ, ವಕೀಲ ಯೋಗೇಶ್, ವಿ.ಎಸ್.ರಾಣಿ, ಪರಮೇಶ್ ಇತರರಿದ್ದರು.
ಹಾಸನ: ಪ್ರತಿಯೊಬ್ಬ ವಿದ್ಯಾರ್ಥಿಯು ಬಾಲ್ಯದಿಂದಲೇ ಆತ್ಮಸ್ಥೈರ್ಯ ರೂಢಿಸಿಕೊಂಡು ಕಠಿಣ ಪರಿಶ್ರಮದಿಂದ ಗುರಿ ತಲುಪಬೇಕು ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಪಿ.ಮದನ್‌ಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ದೊಡ್ಡಬಳ್ಳಾಪುರದಲ್ಲಿ ನಡೆದ ನಾನು ವಿಜ್ಞಾನಿ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಭಾಗವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸೋಮವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.
ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ವಿಜ್ಞಾನ ಮನೋಭಾವ ಬೆಳೆಸುವ ಮೊದಲ ಹೆಜ್ಜೆಯಾಗಿವೆ. ಡಾ.ಎಪಿಜೆ ಅಬ್ದುಲ್ ಕಲಾಂ ಅವರಂತ ಮಹಾನ್ ಸಾಧಕರಿಂದ ಪ್ರೇರಣೆ ಪಡೆದು ಶ್ರಮಿಸಿದರೆ ಮಕ್ಕಳು ಉತ್ತಮ ಪ್ರಜೆಗಳಾಗಿ ದೇಶಕ್ಕೆ ಕೊಡುಗೆ ನೀಡಲಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ನಂಬಿಕೆಗಿಂತ ಅಪನಂಬಿಕೆಗಳು ಹೆಚ್ಚಾಗುತ್ತಿರುವುದನ್ನು ಉಲ್ಲೇಖಿಸಿದ ಅವರು, ಸೂರ್ಯನಂತೆ ಹೊಳೆಯಬೇಕಾದರೆ ಮೊದಲು ಉರಿಯೋದನ್ನು ಕಲಿಯಬೇಕು ಎಂಬ ಕಲಾಂ ಅವರ ಸಂದೇಶವನ್ನು ಸ್ಮರಿಸಿ, ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಸತತ ಪ್ರಯತ್ನದಿಂದ ಗುರಿ ಸಾಧಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ತಿನ ಗೌರವಾಧ್ಯಕ್ಷ ಎಂ.ಕೆ.ಕಮಲ್ ಕುಮಾರ್ ಮಾತನಾಡಿ, ಪಾಲಕರು ಮಕ್ಕಳನ್ನು ಅಂಕಾಧಾರಿತ ಶಿಕ್ಷಣದತ್ತ ಹೆಚ್ಚು ಒಲಿಸುವುದರಿಂದ ಮೌಲ್ಯಾಧಾರಿತ ಮತ್ತು ನೈತಿಕ ಶಿಕ್ಷಣ ಹಿಂದುಳಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮಕ್ಕಳಲ್ಲಿ ಮಾನಸಿಕ-ಶಾರೀರಿಕ ಸದೃಢತೆ ಮತ್ತು ಮೌಲ್ಯ ಶಿಕ್ಷಣ ಬೆಳೆಸಲು ಪಾಲಕರು ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಪರಿಷತ್ತಿನ ಜಿಲ್ಲಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರಿಯಲು ಉತ್ತೇಜನ ನೀಡಿದ ಮೆಟ್ಟಿಲಾಗಿದೆ. ಇದೇ ರೀತಿಯಲ್ಲಿ ಜಿಲ್ಲೆಯಲ್ಲಿ ಪುಷ್ಪಗಿರಿ ಮಠದಲ್ಲಿ ಬೃಹತ್ ರಾಜ್ಯಮಟ್ಟದ ಕಾರ್ಯಕ್ರಮವನ್ನು ಆಯೋಜಿಸುವ ಯೋಜನೆ ರೂಪಿಸಲಾಗಿದ್ದು, ರಾಷ್ಟ್ರಪತಿಗಳನ್ನು ಆಹ್ವಾನಿಸುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಪಾಲಕರ ಜವಾಬ್ದಾರಿಯಾಗಿದೆ ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುವ ರಾಜ್ಯಮಟ್ಟದ ಸಮ್ಮೇಳನಗಳನ್ನು ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ, ವಕೀಲ ಯೋಗೇಶ್, ರಾಣಿ ವಿ.ಎಸ್.ಪರಮೇಶ್ ಇತರರು ಇದ್ದರು.