ಹಾಸನ:ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದು ಮತ್ತು ಬೀಜೋಪಚಾರಕ್ಕೆ ಆದ್ಯತೆ ನೀಡಿದಾಗ ಮಾತ್ರ ಆಲೂಗಡ್ಡೆ ಬೆಳೆಯಲ್ಲಿ ಜಿಲ್ಲೆಯ ರೈತರು ನಿರೀಕ್ಷಿತ ಇಳುವರಿ ಪಡೆಯಲು ಸಾಧ್ಯವಾಗಲಿದೆ
ಎಂದು ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಎಚ್.ಅಮರ ನಂಜುಂಡೇಶ್ವರ ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಾಸನ ಆಕಾಶವಾಣಿ, ಆಲೂಗೆಡ್ಡೆ ವರ್ತಕರ ಸಂಘ ಹಾಗು ವಿವಿಧ ರೈತ ಸಂಘಟನೆಗಳು ಮತ್ತು ಕೃಷಿ ಇಲಾಖೆಯಿಂದ ಹೊಸ ಬಸ್ ನಿಲ್ದಾಣ ಸಮೀಪದ ಹಾಸನಾಂಬ ಉದ್ಯಾನವನದಲ್ಲಿ ಏರ್ಪಡಿಸಿರುವ ರಾಜ್ಯ ಮಟ್ಟದ ಆಲೂಗೆಡ್ಡೆ ಮೇಳ ಹಾಗು ಸಿರಿ ಧಾನ್ಯ ಮೇಳದಲ್ಲಿ
‘ ಆಲೂ ಉತ್ಪಾದನೆಯಲ್ಲಿ ತಾಂತ್ರಿಕ ವಿಧಾನ’ ವಿಷಯ ಕುರಿತು ಸೋಮವಾರ ಉಪನ್ಯಾಸ ನೀಡಿದರು.
ರೈತರು ಯಾವುದೇ ಬೆಳೆಯನ್ನು ಬೆಳೆಯುವುದು ಲಾಭಕ್ಕಾಗಿಯೇ ಹೊರತು ಹವ್ಯಾಸಕ್ಕಾಗಿ ಅಲ್ಲ. ಅತ್ಯಂತ ಲಾಭದಾಯಕ ಬೆಳೆಯಾಗಿರುವ ಆಲೂಗೆಡ್ಡೆ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ಪ್ರದೇಶ ಹೊಂದಿತ್ತು. ಆದರೆ ಇತ್ತೀಚೆಗೆ ಅದು 5 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿದೆ. ಬೆಳೆ ಕುರಿತು ರೈತರು ನಿರಾಸಕ್ತಿ ತೋರಿಸಲು ಕಾರಣವೇನೆಂಬುದರ ಕುರಿತು ಗಂಭೀರ ಚರ್ಚೆ ನಡೆಸ ಬೇಕಿದೆಯೆಂದರು.
ನಮಗೇಕೆ ಸಾಧ್ಯವಾಗಿಲ್ಲ?: ಕಳೆದ 30 ವರ್ಷಗಳಿಂದ ಜಿಲ್ಲೆಯ ಆಲೂಗೆಡ್ಡೆ ಬೆಳೆಗಾರರು ಪಂಜಾಬ್‌ನ ಜಲಂಧರ್ ಜಿಲ್ಲೆಯನ್ನೇ ಅವಲಂಬಿಸಿದ್ದಾರೆ. ಅಲ್ಲಿನ ಆಲೂಗೆಡ್ಡೆ ಬಿತ್ತನೆಗೆ ಅಷ್ಟೊಂದು ಮಹತ್ವ ಪಡೆದಿದೆ ಎಂದರೆ ನಮಗೆ ಏಕೆ ಆ ಸಾಧನೆ ಸಾಧ್ಯವಾಗುತ್ತಿಲ್ಲವೆಂದು ಚಿಂತನೆ ನಡೆಸಬೇಕು. ಅಲ್ಲಿನ ರೈತರು ಅನುಸರಿಸುವ ಪದ್ಧತಿಯನ್ನೇ ನಾವು ಅಳವಡಿಸಿಕೊಂಡು ಬಿಜೋತ್ಪಾದನೆಗೆ ಮುಂದಾಗಬೇಕು. ಅದಕ್ಕೆ ಅಂಗಾಂಶ ಕೃಷಿ ಕುಡಿ ಕಾಂಡ ತಳಿ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ನಾವೂ ಚಿಂತನೆ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಸೋಮನಹಳ್ಳಿ ತೋಟಗಾರಿಕೆ ಸಂಶೋಧನೆ ಹಾಗು ವಿಸ್ತರಣಾ ಕೇಂದ್ರದಲ್ಲಿ ಅಂಗಾಂಶ ಕೃಷಿ ಕುಡಿ ಕಾಂಡ ತಳಿ ಅಭಿವೃದ್ಧಿಗೆ ಕಳೆದ ಆರು ವರ್ಷಗಳ ಹಿಂದೆ ಯೋಜನೆ ರೂಪಿಸಿ ಕಾರ್ಯಗತಕ್ಕೆ ತರಲಾಯಿತು. ಜಿಲ್ಲೆಯ ಶೇ.15 ರಿಂದ 20ರಷ್ಟು ರೈತರು ಮಾತ್ರ ಅದಕ್ಕೆ ಬೆಂಬಲ ನೀಡಿದರು. ನಂತರದ ವರ್ಷಗಳಲ್ಲಿ ಆರ್ಥಿಕ ಹಾಗು ಸಹಕಾರ ಕೊರತೆಯಿಂದ ಯೋಜನೆ ನನೆಗುದಿಗೆ ಬಿದ್ದಿತು. ವೈಜ್ಞಾನಿಕವಾಗಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದರೆ ಜಿಲ್ಲೆಯ ಆಲೂಗೆಡ್ಡೆ ಬೆಳೆ ದಾಖಲೆ ಬರೆಯುತ್ತದೆಂದು ವಿಶ್ವಾಸ ವ್ಯಕ್ತಪಡಿಸಿದರು.
ಗುಣಮಟ್ಟದ ಫಸಲು ಪೂರೈಕೆ ಆಗುತ್ತಿಲ್ಲ:
ಜಲಂಧರ್‌ನಿಂದ ಈಗ ತರಿಸಿಕೊಳ್ಳುತ್ತಿರುವ ಬಿತ್ತನೆ ಆಲೂಗೆಡ್ಡೆ ಎಂಟನೇ ಸಂತತಿಯಾಗಿರುವುದರಿಂದ ಅದು ನಮ್ಮ ಭೂಮಿಗೆ ಹೊಂದಿಕೊಳ್ಳುತ್ತಿಲ್ಲ. ನಾಲ್ಕನೇ ಸಂತತಿಗೆ ಸಿಗುವ ಆಲೂಗಡ್ಡೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದಲ್ಲದೆ ಗುಣಮಟ್ಟವೂ ಚೆನ್ನಾಗಿರುತ್ತದೆ. ಆದರೆ ನಮಗೆ 8ನೇ ಸಂತತಿ ನೀಡುತ್ತಿದ್ದಾರೆ. ಜಲಂಧರ್‌ನ ರೈತರು ನೀಡುವ ಆಲೂಗೆಡ್ಡೆಯಿಂದ ಇಲ್ಲಿನ ರೈತರಿಗೆ ಆಗುತ್ತಿರುವ ತೊಂದರೆಗಳ ಕುರಿತು ವಿವರಿಸಲು ಗೋಷ್ಠಿಗೆ ಅವರನ್ನೂ ಕರೆಸಲಾಗಿದೆ ಎಂದರು.