ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ವಹಿಸಿ

ಅರಕಲಗೂಡು ತಾಪಂ ಸಾಮಾನ್ಯ ಸಭೆ ಮಂಗಳವಾರ ಆಡಳಿತಾಧಿಕಾರಿ ಎಂ. ಬಾಬು ಅಧ್ಯಕ್ಷತೆಯಲ್ಲಿ ಜರುಗಿತು. ತಾಪಂ ಇಒ ಶ್ರೀನಿವಾಸ್ ಇದ್ದರು.
ಅರಕಲಗೂಡು ತಾಪಂ ಸಾಮಾನ್ಯ ಸಭೆ ಮಂಗಳವಾರ ಆಡಳಿತಾಧಿಕಾರಿ ಎಂ. ಬಾಬು ಅಧ್ಯಕ್ಷತೆಯಲ್ಲಿ ಜರುಗಿತು. ತಾಪಂ ಇಒ ಶ್ರೀನಿವಾಸ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಉಪ ಕಾರ್ಯದರ್ಶಿ ಎಂ.ಬಾಬು ಸೂಚನೆ
  • ತಾಲೂಕು ಪಂಚಾಯಿತಿ ಸಭೆ
ಅರಕಲಗೂಡು: ತಾಪಂ ಸಾಮಾನ್ಯ ಸಭೆಗೆ ಅಧಿಕಾರಿಗಳು ಗೈರಾಗುವ ಮೂಲಕ ಸರ್ಕಾರದ ಅನುದಾನ ದುರ್ಬಳಕೆಗೆ ಆಸ್ಪದ ನೀಡಲಾಗುತ್ತಿದೆ. ಇಂತಹ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ವಹಿಸುವಂತೆ ಜಿಪಂ ಉಪ ಕಾರ್ಯದರ್ಶಿ ಹಾಗೂ ತಾಪಂ ಆಡಳಿತಾಧಿಕಾರಿ ಎಂ.ಬಾಬು ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಪಂ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆಗೆ ಶೇ.50ರಷ್ಟು ಅಧಿಕಾರಿಗಳು ಹಾಜರಾಗಿಲ್ಲ, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿಗಳು ನಡೆಸುವ ಸಭೆಗೆ ಇದೇ ರೀತಿ ಗೈರಾಗುತ್ತಾರೆ, ಸಭೆಗೆ ಬಾರದೆ ಅಧಿಕಾರಿಗಳ ಅಸಹಕಾರ ಸರಿಯಲ್ಲ, ಸರ್ಕಾರದ ಅನುದಾನ ದುರುಪಯೋಗವಾದರೆ ಯಾರು ಜವಾಬ್ದಾರರಾಗುತ್ತಾರೆ, ವಿವಿಧ ಇಲಾಖೆಗಳ ಪ್ರಗತಿ ಕಾರ್ಯ ಕುಂಠಿತಗೊಂಡಿದೆ. ಇಂತಹ ಅಧಿಕಾರಿಗಳಿಗೆ ನೋಟಿಸ್ ನೀಡಿ ಶಿಸ್ತು ಕ್ರಮ ಜರುಗಿಸುವಂತೆ ತಾಪಂ ಇಒ ಶ್ರೀನಿವಾಸ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಪಂ ಅನುದಾನದಡಿ ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳ ದುರಸ್ತಿಗಾಗಿ ನವೆಂಬರ್ ತಿಂಗಳಲ್ಲಿ ಕ್ರಿಯಾ ಯೋಜನೆ ತಯಾರಿಸಿದ್ದು 81 ಕಾಮಗಾರಿಗಳ ಪಟ್ಟಿ ಸಿದ್ದಪಡಿಸಲಾಗಿದ್ದು, 22 ಕಾಮಗಾರಿಗಳು ಬಾಕಿ ಇವೆ ಎಂದು ಜಿಪಂ ಇಂಜಿನಿಯರ್ ಶರತ್ ಸಭೆಗೆ ಮಾಹಿತಿ ನೀಡಿದರು. ಮಾರ್ಚ್ ತಿಂಗಳ ವೇಳೆಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಆಡಳಿತಾಧಿಕಾರಿ ಬಾಬು ಅವರು ತಾಕೀತು ಮಾಡಿದರು.
ಕೋಳಿಮೊಟ್ಟ ಸೇವಿಸಿದರೆ ಕ್ಯಾನ್ಸರ್ ಬರಲಿದೆ ಎನ್ನುವ ಸುದ್ದಿ ಹಬ್ಬಿಸಲಾಗಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆದಿಲ್ಲ, ಪಶುಪಾಲನಾ ಇಲಾಖೆ ನಿರ್ದೇಶಕರೇ ಸಭೆಗೆ ಗೈರಾಗಿದ್ದಾರೆ ಎಂದು ಕಿಡಿಕಾರಿದರು.
ಸಹಾಯಕ ಕೃಷಿ ನಿರ್ದೇಶಕಿ ಕೆ.ಜೆ.ಕವಿತಾ ಮಾತನಾಡಿ, ಈ ಬಾರಿ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಾಗದೆ ವಾಡಿಕೆಗಿಂತ ಹೆಚ್ಚು ಸುರಿದಿದೆ. ಭತ್ತ, ರಾಗಿ ಕಟಾವು ಕಾರ್ಯ ಸಾಗಿದೆ. ಸುನಂದ ಕಂಪನಿ 2400 ರೂ. ದರದಲ್ಲಿ 300 ಮೆಟ್ರಿಕ್ ಟನ್ ಮುಸುಕಿನ ಜೋಳ ಖರೀದಿಸಲು ತೀರ್ಮಾನಿಸಿದ್ದಾರೆ ಎಂದು ಸಭೆಗೆ ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಮಾತನಾಡಿ, ಗೃಹ ಆರೋಗ್ಯ ಕಾರ್ಯಕ್ರಮ ಯಶಸ್ಸಿಯಾಗಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ತೆರಳಿ ಬಿಪಿ ಶುಗರ್ ಪತ್ತೆ ಹಚ್ಚಿ ಔಷಧ ಮಾತ್ರೆ ನೀಡುತ್ತಿದ್ದಾರೆ. ಆಸ್ಪತ್ರೆಗಳ ಆವರಣದಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಕ್ರಮ ವಹಿಸಲಾಗಿದೆ ಎಂದರು.
ಅಬಕಾರಿ ಇನ್‌ಸ್ಪೆಕ್ಟರ್ ವೀರೇಶ್‌ಕುಮಾರ್ ಮಾತನಾಡಿ, ಗಾಂಜಾ ಮಾರಾಟದ ಐದು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಬಾಬು ಅವರು, ಅಸ್ಸಾಂ ರಾಜ್ಯದಿಂದ ವಲಸೆ ಬಂದಿರುವ ಕೂಲಿ ಕಾರ್ಮಿಕರಿಂದ ಗಾಂಜಾ ದಂಧೆ ಹೆಚ್ಚುತ್ತಿದೆ. ಇದಕ್ಕೆ ಕಾನೂನು ರೀತಿ ಕಡಿವಾಣ ಹಾಕಬೇಕು, ಈ ಕುರಿತು ಜಾಗೃತ ದಳ ಮಾದರಿ ಕಾರ್ಯನಿರ್ವಹಿಸಬೇಕು. ಅಕ್ರಮ ಮದ್ಯ ಮಾರಾಟ ನಿಷೇಧಿಸಬೇಕು ಎಂದು ಸೂಚಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ ಸಹಾಯಕ ಇಂಜಿನಿಯರ್ ನವೀನ್, ರೇಷ್ಮೆ ಇಲಾಖೆ, ತೋಟಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನರೇಗಾ ಸ್ಭೆರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇಲಾಖಾವಾರು ಕೈಗೊಂಡಿರುವ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡಿದರು.
30ಎಆರ್‌ಕೆ1..
30ಎಆರ್‌ಕೆ2..
ಅರಕಲಗೂಡಿನಲ್ಲಿ ಮಂಗಳವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net