ಶಿಷ್ಟಾಚಾರದಂತೆ ಜಿಲ್ಲಾ ಮಂತ್ರಿಗೆ ಆಹ್ವಾನ

-ಶ್ರೀ ಚನ್ನಕೇಶವಸ್ವಾಮಿಯ ಎರಡನೇ ದಿನದ ನಾಡ ರಥೋತ್ಸವದಲ್ಲಿ ಜಿಲ್ಲಾಧಿಲಾರಿ ಕೆ.ಎಸ್.ಲತಾಕುಮಾರಿ ಭಾಗವಹಿಸಿರುವುದು.
-ಶ್ರೀ ಚನ್ನಕೇಶವಸ್ವಾಮಿಯ ಎರಡನೇ ದಿನದ ನಾಡ ರಥೋತ್ಸವದಲ್ಲಿ ಜಿಲ್ಲಾಧಿಲಾರಿ ಕೆ.ಎಸ್.ಲತಾಕುಮಾರಿ ಭಾಗವಹಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸ್ಪಷ್ಟನೆ
  • ಶ್ರೀ ಚನ್ನಕೇಶವಸ್ವಾಮಿಗೆ ಪೂಜೆ ಸಲ್ಲಿಕೆ
ಬೇಲೂರು: ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸ್ಪಷ್ಟಪಡಿಸಿದರು.
ಶ್ರೀ ಚನ್ನಕೇಶವಸ್ವಾಮಿಯವರ ಎರಡನೇ ದಿನದ ನಾಡ ರಥೋತ್ಸವದಲ್ಲಿ ಭಾಗವಹಿಸಿ ನಂತರ ದೇವರ ದರ್ಶನ ಪಡೆದು ಅರ್ಚಕರಿಂದ ಉಡುಗೊರೆ ಸ್ವೀಕರಿಸಿದ ನಂತರ ದೇಗುಲದ ಆವರಣದಲ್ಲಿ ಬುಧವಾರ ಸುದ್ದಿಗಾರೊಂದಿಗೆ ಅವರು ಮಾತನಾಡಿದರು.
ತಾಲೂಕು ಆಡಳಿತ ಮತ್ತು ಶಾಸಕರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ. ಶ್ರೀ ಚನ್ನಕೇಶವಸ್ವಾಮಿ ರಥೋತ್ಸವಕ್ಕೆ ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮತ್ತು ಇಲಾಖೆಗೆ ಸಂಬಂಧಿಸಿದ ಸಚಿವರನ್ನು ಆಹ್ವಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಇನ್ನೂ ಅದ್ದೂರಿಯಾಗಿ ರಥೋತ್ಸವ ನಡೆಸಲಾಗುವುದು. ಜಾತ್ರಾ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ಬರುವ ಭಕ್ತರಿಗೆ ಮೂಲಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದರು.
ಮಂಗಳವಾರ ರಥೋತ್ಸವದ ನಂತರ ಸುರಿದ ಮಳೆಯಿಂದ ಭಕ್ತರಿಗೆ ತೊಂದರೆಯಾಗಿದೆ. ಆದರೆ ಕಲ್ಯಾಣ ಮಂಟಪಗಳಲ್ಲಿ ಭಕ್ತರು ಉಳಿಯಲು ತಾಲೂಕು ಆಡಳಿತ ವ್ಯವಸ್ಥೆ ಕಲ್ಪಿಸಿತ್ತು. ಕೆಲವರು ದೇಗುಲದ ಪ್ರಾಂಗಣದಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶ್ರೀ ಚನ್ನಕೇಶವಸ್ವಾಮಿ ದೇಗುಲವು ಧಾರ್ಮಿಕ ದತ್ತಿ ಇಲಾಖೆ, ಪುರಾತತ್ತ್ವ, ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟಿದ್ದು, ಇವರ ಸಮನ್ವಯತೆಯ ಕೊರತೆಯಿಂದ ಅಭಿವೃದ್ಧಿಗೆ ಅಡ್ಡಿಯಾಗಿದ್ದು, ತಕ್ಷಣವೇ ಮೂರು ಇಲಾಖೆಗೆ ಸೇರಿದ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ದೇಗುಲದ 100 ಮೀಟರ್ ವ್ಯಾಪ್ತಿಯಲ್ಲಿ ಹೊಸದಾಗಿ ಕಟ್ಟಡ ಕಟ್ಟುವ ಅನುಮತಿ ಇಲ್ಲ. ಜತೆಗೆ ಇತ್ತೀಚೆಗೆ ಕಟ್ಟಿರುವ ಕಟ್ಟಡಗಳ ಬಗ್ಗೆ ಮಾಹಿತಿ ಪಡೆದು ಕ್ರಮಕ್ಕೆ ಮುಂದಾಗಲಿದ್ದೇವೆ. ಹೊಯ್ಸಳ ಮಹೋತ್ಸವಕ್ಕೂ ಮೊದಲು ಇರುವ ಕೆಲ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಶ್ರೀನಿಧಿ, ಲತಾ, ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟರ್, ಇಒ ಯೋಗೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net