ಅಸಮಾನತೆ ತೊಡೆದು ಹಾಕಲು ‘ಗ್ಯಾರಂಟಿ’ ಜಾರಿ

ಹಾಸನ ನಗರದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಾ.ಎಚ್.ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ಸಿ.ಎನ್.ಬಾಲಕೃಷ್ಣ, ಎಚ್.ಕೆ.ಸುರೇಶ್, ಸಿಮೆಂಟ್ ಮಂಜು, ಡಿಸಿ ಲತಾಕುಮಾರಿ ಇತರರಿದ್ದರು.
ಹಾಸನ ನಗರದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಾ.ಎಚ್.ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ಸಿ.ಎನ್.ಬಾಲಕೃಷ್ಣ, ಎಚ್.ಕೆ.ಸುರೇಶ್, ಸಿಮೆಂಟ್ ಮಂಜು, ಡಿಸಿ ಲತಾಕುಮಾರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಸಮಾನತೆ ತೊಡೆದು ಹಾಕಲು ‘ಗ್ಯಾರಂಟಿ’ ಜಾರಿ
  • ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
  • ಹಾಸನದಲ್ಲಿ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶ
ಹಾಸನ: ಗ್ಯಾರಂಟಿ ಯೋಜನೆಗಳ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿರುವ ಅಸಮಾನತೆ ತೊಡೆದು ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಲೋಕಸಭಾ ಚುನಾವಣೆ ಮುಗಿದ ಬಳಿಕ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ ಎಂದು ಪ್ರತಿಪಕ್ಷ ನಾಯಕರು ಹೇಳಿದ್ದರು. ಆದರೆ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಸದೆ ಲಕ್ಷಾಂತರ ಕೋಟಿ ರೂ. ವ್ಯಯಿಸಲಾಗುತ್ತಿದೆ ಎಂದರು.
ಯಾವುದಾದರೂ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಅಧಿಕಾರಕ್ಕೆ ಬಂದು ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಟೀಕೆಗಳು ಸಾಯುತ್ತವೆ. ಮಾಡಿರುವ ಕೆಲಸಗಳು ಮಾತ್ರ ಉಳಿಯುತ್ತವೆ. ಶಕ್ತಿ ಯೋಜನೆ ವ್ಯರ್ಥ ಅಂತಾರೆ. ಇದಕ್ಕೆಲ್ಲ ಜನರೇ ಉತ್ತರ ನೀಡಬೇಕು ಎಂದರು.
2023ರ ಚುನಾವಣೆ ವೇಳೆ 492 ಭರವಸೆಗಳನ್ನು ಕೊಟ್ಟಿದ್ದೆವು. ನಾವು ಅಧಿಕಾರಕ್ಕೆ ಬಂದು ಎರಡು ವರ್ಷ, ಆರು ತಿಂಗಳು ತುಂಬಿದೆ. ಈ ಅವಧಿಯಲ್ಲಿ 242 ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮ ಸರ್ಕಾರ 2013-2018 ಮತ್ತು 2023ರಿಂದ ಇಲ್ಲಿಯವರೆಗೂ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕೆ ಪ್ರಯತ್ನ ಮಾಡಿದೆ ಎಂದು ತಿಳಿಸಿದರು.
2013ರಲ್ಲಿ ಕೊಟ್ಟಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಜೂ.11ಕ್ಕೆ ಶಕ್ತಿ ಯೋಜನೆ ಜಾರಿಯಾಯಿತು. ಇಲ್ಲಿಯವರೆಗೂ 600 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಹಾಸನ ಜಿಲ್ಲೆ ಪ್ರವಾಸೋದ್ಯಮ ಜಿಲ್ಲೆ. ಹೇಮಾವತಿ ಜಲಾಶಯದ ಕೆಳಗಡೆ 700 ಎಕರೆ ಜಾಗ ಇದೆ ಉದ್ಯಾನ ಮಾಡಿ ಎಂದಿದ್ದಾರೆ. ಪರಿಶೀಲನೆ ಮಾಡಿ ಕಾರ್ಯಕ್ರಮ ಜಾರಿ ಮಾಡುವ ಪ್ರಯತ್ನ ಮಾಡುತ್ತದೆ ಎಂದರು.
ಶ್ರವಣಬೆಳಗೊಳದಲ್ಲೂ ಉದ್ಯಾನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಾನು ಮಾತು ಕೊಡಲ್ಲ, ಕೊಟ್ಟ ಮೇಲೆ ಮಾಡೇ ಮಾಡುತ್ತೇನೆ ಎಂದು ಹೇಳಿದರು.
ಮೇಕೆದಾಟು ಕಾರ್ಯರೂಪಕ್ಕೆ ತರಲು ನಿರ್ಧಾರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕೇಂದ್ರ ಇಲಾಖೆ ಅನುಮತಿ ಕೊಟ್ಟ ಮೂರ‌್ನಾಲ್ಕು ತಿಂಗಳಲ್ಲಿ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ಯೋಜನೆಯಿಂದ ನೀರು ಹರಿಸುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಮೇಕೆದಾಟಿಗೋಸ್ಕರ ಹೆಜ್ಜೆ ಹಾಕಿ, ಹೋರಾಟ ಮಾಡಲಾಯಿತು. ನನ್ನ ಮಾರ್ಗದರ್ಶನದಲ್ಲಿ ನಡೆದ ಹೋರಾಟ, ನಿರ್ಧಾರದಿಂದ ಸುಪ್ರೀಂಕೋರ್ಟ್ ನಮ್ಮ ಪರ ತೀರ್ಪು ಕೊಟ್ಟಿದೆ. ಸುಪ್ರೀಂಕೋರ್ಟ್‌ಗೆ ಸಾಷ್ಟಾಂಗ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮೇಕೆದಾಟು ಯೋಜನೆ ಬಗ್ಗೆ ನಾನು, ಮುಖ್ಯಮಂತ್ರಿ ಸೇರಿ ಯಾವ ರೀತಿ ಕಾರ್ಯರೂಪಕ್ಕೆ ತರಬೇಕು ಎಂದು ತೀರ್ಮಾನ ಮಾಡಿದ್ದೇವೆ. ಭಗವಂತ ನಮಗೆ ಅವಕಾಶ ಕೊಟ್ಟಿದ್ದಾನೆ. ದೇವರು ವರ, ಶಾಪ ಕೊಡುವುದಿಲ್ಲ. ಅವಕಾಶ ಮಾತ್ರ ಕೊಡುತ್ತಾನೆ ಎಂದು ಹೇಳಿದರು.
ಅಕ್ಬರ್, ಬೀರ್‌ಬಲ್ ಎಂದು ಟೀಕೆ ಮಾಡುತ್ತಾರೆ. ಪ್ರತಿಪಕ್ಷದ ನಾಯಕರು, ಶಾಸಕರು ಕೆಲಸಗಳನ್ನು ಕಣ್ಣಲ್ಲಿ ನೋಡಿದ್ದಾರೆ. ನಮ್ಮ ಸರ್ಕಾರ ಸರ್ವರಿಗೂ ನೆಮ್ಮದಿ, ಅಭಿವೃದ್ಧಿ ಕೊಡುವ ಸರ್ಕಾರ. ನಮ್ಮ ನಿರ್ಧಾರಗಳನ್ನು ಒಂದು ನಿಮಿಷದಲ್ಲಿ ತೆಗೆದುಕೊಳ್ಳುವ ಅವಕಾಶವಿದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಿಕೊಂಡು ಬರುತ್ತಿದ್ದೇವೆ ಎಂದರು.
ಮುಂದೆಯೂ ಈ ಸರ್ಕಾರ ನಡೆದುಕೊಂಡು ಹೋಗುತ್ತದೆ. ಮುಂದಿನ ದಿನಗಳಲ್ಲಿ ಹಾಸನಕ್ಕೆ ಹೊಸ ರೂಪ ಕೊಡಬೇಕು. ಹಿಂದೆ ನಡೆಯುತ್ತಿದ್ದ ಆಡಳಿತಕ್ಕೆ ನಮ್ಮ ಜಿಲ್ಲಾಧಿಕಾರಿ, ಎಲ್ಲ ಅಧಿಕಾರಿಗಳು ಕೊನೇ ಹಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ರೂಪ, ಶಕ್ತಿಯನ್ನು ತುಂಬಲು ನಾವು ಸಜ್ಜಾಗೋಣ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಚಿವರಾದ ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ಶಾಸಕ ಎಚ್.ಕೆ.ಸುರೇಶ್, ಸಿ.ಎನ್.ಬಾಲಕೃಷ್ಣ, ಸಿಮೆಂಟ್ ಮಂಜು, ಡಿಸಿ ಲತಾಕುಮಾರಿ ಇತರರಿದ್ದರು.
*ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಿದೆ. ಪ್ರಪಂಚದ ಯಾವ ದೇಶ, ರಾಜ್ಯದಲ್ಲೂ ಜನರಿಗೆ ನೇರವಾಗಿ ಸವಲತ್ತು ಕೊಟ್ಟಿರುವ ಸರ್ಕಾರ ಯಾವುದು ಇಲ್ಲ. ನಮ್ಮ ಸರ್ಕಾರ ದಾಖಲೆ ಬರೆಯುವ ಕೆಲಸ ಮಾಡಿದೆ. ಕಂದಾಯ ಇಲಾಖೆ ಬೇರೆ ಇಲಾಖೆಗಳಿಗಿಂತ ಜಟಿಲ. ಇಲಾಖೆ ಅಧಿಕಾರಿಗಳು ನಾನಾ ಬದಲಾವಣೆಗಳನ್ನು ತಂದಿದ್ದಾರೆ. ಹಾಸನ ವಿಮಾನ ನಿಲ್ದಾಣ ಕಾರ್ಯರೂಪಕ್ಕೆ ಬಾರದೆ ನಿಂತಿದೆ. ಅದನ್ನು ಪೂರ್ತಿಗೊಳಿಸಿ ಕಾರ್ಯ ರೂಪಕ್ಕೆ ತರಬೇಕು. ನಾಲೆಗಳು, ಉಪನಾಲೆಗಳ ಆಧುನೀಕರಣಕ್ಕೆ ಸಂಕಲ್ಪ ಮಾಡಬೇಕು.
ಕೃಷ್ಣಭೈರೇಗೌಡ ಜಿಲ್ಲಾ ಉಸ್ತುವಾರಿ ಸಚಿವ
*ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸರ್ಕಾರದ ಹಣಕಾಸು ವ್ಯವಸ್ಥೆ ಸುಭದ್ರವಾಗಿದೆ. ಹಿಂದೆ ಇದ್ದ ಸರ್ಕಾರ 64 ಸಾವಿರ ಕೋಟಿ ರೂ. ಬಾಕಿ ಬಿಲ್ ಬಿಟ್ಟು ಹೋಗಿದೆ. ಗ್ಯಾರಂಟಿಯಿಂದ ಸ್ವಲ್ಪ ಕಷ್ಟಕ್ಕೆ ಸಿಲುಕಿರಬಹುದು. ಯಾವುದೇ ಯೋಜನೆಗಳು ನಿಂತಿಲ್ಲ. ಸಿದ್ದರಾಮಯ್ಯ ಸರ್ಕಾರ ಸುಭದ್ರವಾಗಿ ಕೆಲಸ ಮಾಡಿದೆ. ಪ್ರತಿಪಕ್ಷ ನಾಯಕರು ವಿನಾಕಾರಣ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ.
ಕೆ.ಎಂ. ಶಿವಲಿಂಗೇಗೌಡ ಅರಸೀಕೆರೆ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net