ಖಾಲಿ ಹುದ್ದೆಗಳ ಭರ್ತಿವೇಳೆ ಪರಿಶಿಷ್ಟ ಜಾತಿಗಳ ಶೇ.15 ರಷ್ಟು ಒಳ ಮೀಸಲಾತಿಯನ್ನು ಗ್ರೂಪ್ ಎ, ಬಿ, ಸಿ ವರ್ಗೀಕರಣದಂತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾದರ ಮಹಾಸಭಾ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಟಿ.ಆರ್. ವಿಜಯಕುಮಾರ್, ಸಿ.ಆರ್.ಮಂಜುನಾಥ್, ದೇವರಾಜು ಇತರರಿದ್ದರು.
ಹಾಸನ:ರಾಜ್ಯದಲ್ಲಿ 56,342 ಖಾಲಿ ಹುದ್ದೆಗಳ ಭರ್ತಿ ವೇಳೆ ಪರಿಶಿಷ್ಟ ಜಾತಿಗಳ ಶೇ.15 ರಷ್ಟು ಒಳ ಮೀಸಲಾತಿಯನ್ನು ಗ್ರೂಪ್ ಎ, ಬಿ, ಸಿ ವರ್ಗೀಕರಣದಂತೆ ಕಡ್ಡಾಯವಾಗಿ ಜಾರಿಗೊಳಿಸಬೇಕು ಹಾಗೂ ಶೇ.56 ರಷ್ಟು ಒಟ್ಟು ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ಮಾದರ ಮಹಾಸಭಾ ಜಿಲ್ಲಾ ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಹಾಸಭಾದ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ನಂತರ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿದೆ. ಸಂವಿಧಾನದ ವಿಧಿ 15(4) ಮತ್ತು 16(4)ಗಳ ಆಶಯ ಜಾರಿಗೊಳಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದ್ದರೂ, ಇತ್ತೀಚಿನ ಸರ್ಕಾರದ ಆದೇಶಗಳಿಂದ ಆ ಆಶಯಕ್ಕೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿದರು.
ಫೆ.27 ರಂದು ಹೊರಡಿಸಲಾದ ಸರ್ಕಾರದ ಆದೇಶದಲ್ಲಿ ಹಿಂದಿನ ಶೇ.15 ಪರಿಶಿಷ್ಟ ಜಾತಿ ಹಾಗೂ ಶೇ.3 ರಷ್ಟು ಪರಿಶಿಷ್ಟ ಪಂಗಡ ಮೀಸಲಾತಿ ಮತ್ತು ಹಳೆಯ ರೋಸ್ಟರ್ ವ್ಯವಸ್ಥೆಯಂತೆ ನೇಮಕಾತಿ ಕೈಗೊಳ್ಳಲು ಸೂಚಿಸಿರುವುದು ಒಳಮೀಸಲಾತಿ ಆದೇಶ ಅನ್ವಯಿಸದಂತಾಗಿದೆ.
ಹಿಂದಿನ ಒಳ ಮೀಸಲಾತಿ ಸಂಬಂಧಿತ ಆದೇಶಗಳನ್ನು ಅಳವಡಿಸದೆ ನೇಮಕಾತಿ ಪ್ರಕ್ರಿಯೆ ಆರಂಭಿಸುವುದು ದೀರ್ಘ ಹೋರಾಟಕ್ಕೆ ಮಾಡಿದ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾ.ನಾಗಮೋಹನ್ ದಾಸ್ ವರದಿ ಆಧಾರದ ಮೇಲೆ ಪರಿಶಿಷ್ಟ ಜಾತಿಗಳನ್ನು ಗ್ರೂಪ್ ಎ, ಬಿ, ಸಿ ವರ್ಗೀಕರಣದಂತೆ ಉಪವರ್ಗೀಕರಿಸಿ ಶೇ.15 ರಷ್ಟು ಒಳ ಮೀಸಲಾತಿಯನ್ನು ಸ್ಪಷ್ಟವಾಗಿ ಜಾರಿಗೊಳಿಸಬೇಕು. ಪರಿಷ್ಕೃತ ರೋಸ್ಟರ್ ಪ್ರಕಟಿಸಿ ಉಪ ಗುಂಪುವಾರು ಹಂಚಿಕೆ ಖಚಿತಪಡಿಸಬೇಕು ಎಂದು ಒತ್ತಾಯಿಸಲಾಗಿದೆ. ಇದಲ್ಲದೆ, ಶೇ.56 ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ಇಳಿಸಿರುವ ವಿಚಾರದಲ್ಲಿ ಸರ್ಕಾರ ನ್ಯಾಯಾಲಯದ ಮುಂದೆ ಸಮರ್ಥ ವಾದ ಮಂಡಿಸಬೇಕು. ಸಾಮಾಜಿಕ ನ್ಯಾಯದ ನೀತಿಯನ್ನು ನ್ಯಾಯಾಂಗೀಯ ಸವಾಲುಗಳಿಂದ ರಕ್ಷಿಸಲು ಶೇ.56 ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಲು ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಸಂವಿಧಾನ ತಿದ್ದುಪಡಿ ತರಬೇಕೆಂದು ಆಗ್ರಹಿಸಿದರು.
ಸರ್ಕಾರ ತಕ್ಷಣ ತಿದ್ದುಪಡಿ ಆದೇಶ ಹೊರಡಿಸಿ ಒಳಮೀಸಲಾತಿ ಜಾರಿಗೊಳಿಸದಿದ್ದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್.ಮಂಜುನಾಥ್, ಖಜಾಂಚಿ ದೇವರಾಜು, ಕಾರ್ಯಕಾರಿ ಸಮಿತಿ ಸದಸ್ಯ ರವೀಶ್ ಬಸವಪುರ, ಕಿರಣ್ ಅರೆಕೆರೆ, ಗಿರೀಶ್, ಪ್ರಕಾಶ್, ಸತೀಶ್ ಕಡಗ, ಕೆ.ಎಂ. ಸತೀಶ್, ಕೆಂಚಪ್ಪ, ಶಿವಣ್ಣ, ಕುಮಾರಸ್ವಾಮಿ, ವಸಂತಕುಮಾರಿ ಇದ್ದರು.