ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶ

ಅಕ್ಕಿ ಸಾಗಿಸುತ್ತಿದ್ದ ವಾಹನ
ಅಕ್ಕಿ ಸಾಗಿಸುತ್ತಿದ್ದ ವಾಹನ
Published on

ಪ್ರಮುಖ ಮುಖ್ಯಾಂಶಗಳು

  • ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶ
  • ವಾಹನದೊಂದಿಗೆ ಚಾಲಕನ ಬಂಧನ
  • ಆಹಾರ ಇಲಾಖೆಯಿಂದ ಕ್ರಮ
ಹಾಸನ: ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಅನ್ನಭಾಗ್ಯ ಯೋಜನೆಯ 85 ಚೀಲ ಅಕ್ಕಿ ಹಾಗೂ ಪಿಕಪ್ ವಾಹನವನ್ನು ಶಾಂತಿಗ್ರಾಮ ಬಳಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೂ.25ರಂದು ಸಂಜೆ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಅಕ್ಕಿ ಸಾಗಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ತಾಲೂಕು ಆಹಾರ ನಿರೀಕ್ಷಕರು, ಶಿರಸ್ತೇದಾರ್ ಹಾಗೂ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ವಾಹನ ಪರಿಶೀಲಿಸಿದರು.
ಪರಿಶೀಲನೆ ವೇಳೆ ವಾಹನದಲ್ಲಿ ಸುಮಾರು 50 ಕೆಜಿ ತೂಕದ 85 ಚೀಲಗಳಷ್ಟು ಬಿಳಿ ಹಾಗೂ ಹಳದಿ ಬಣ್ಣದ ಅಕ್ಕಿ ಪತ್ತೆಯಾಗಿದೆ. ಅದು ಸರ್ಕಾರದ ಸಾರ್ವಜನಿಕ ವಿತರಣಾ ವ್ಯವಸ್ಥೆ ಯಡಿ ವಿತರಿಸುವ ಅನ್ನಭಾಗ್ಯ ಅಕ್ಕಿಯಂತೆಯೇ ಮೇಲ್ನೋಟಕ್ಕೆ ಕಂಡುಬಂದಿದ್ದು, ಅದರಲ್ಲಿ ಸಾರವರ್ಧಕ ಅಕ್ಕಿಯ ಮಿಶ್ರಣವೂ ಇರುವ ಲಕ್ಷಣ ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸ್ಥಳದಲ್ಲಿದ್ದ ವಾಹನ ಚಾಲಕ ತನ್ನ ಹೆಸರನ್ನು ಸಯ್ಯದ್ ಸೂಚಿಯಾನ್ ಬಿನ್ ಸಯ್ಯದ್ ನಯಾಜ್, ಹಾಸನದ ಪೆನ್ಶನ್ ಮೊಹಲ್ಲಾ ನಿವಾಸಿ ಎಂದು ತಿಳಿಸಿದ್ದಾನೆ. ಆದರೆ ಸಾಗಿಸುತ್ತಿದ್ದ ಅಕ್ಕಿಗೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆ, ಪರವಾನಗಿ ಅಥವಾ ಮಾಲೀಕತ್ವದ ದಾಖಲೆಗಳನ್ನು ಅಧಿಕಾರಿಗಳ ಮುಂದೆ ಹಾಜರುಪಡಿಸಲಾಗಿಲ್ಲ. ಅಲ್ಲದೆ, ಅಕ್ಕಿಯ ಮಾಲೀಕರು ಅಥವಾ ವಾರಸುದಾರರು ಸ್ಥಳದಲ್ಲಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಶಪಡಿಸಿಕೊಂಡ ಅಕ್ಕಿಯ ಒಟ್ಟು ಮೌಲ್ಯ ಸುಮಾರು 1.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಅಕ್ಕಿ ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net