ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ

ಹಿರೀಸಾವೆ ಹೋಬಳಿಯ ಕನುವನಘಟ್ಟ ಗ್ರಾಮದಲ್ಲಿ ಸರ್ಕಾರಿ ಕಿರಿಯಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಆಯೋಜಿಸಿದ್ದ 2026 ಕಲಾಸಿರಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಾಯಕ ಶಶಿಧರ್ ಕೋಟೆ ಉದ್ಘಾಟಿಸಿದರು. ಕೆ.ಎನ್.ಹರಿಪ್ರಸಾದ್, ಗೀತಾ, ನಾಗರತ್ನಾ, ಕೆ.ಟಿ.ನಾಗರಾಜ್, ಶ್ರೀನಿವಾಸ್, ಶಿವಕುಮಾರ್ ಆರಾಧ್ಯ ಇತರರು ಇದ್ದರು.
ಹಿರೀಸಾವೆ ಹೋಬಳಿಯ ಕನುವನಘಟ್ಟ ಗ್ರಾಮದಲ್ಲಿ ಸರ್ಕಾರಿ ಕಿರಿಯಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಆಯೋಜಿಸಿದ್ದ 2026 ಕಲಾಸಿರಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಾಯಕ ಶಶಿಧರ್ ಕೋಟೆ ಉದ್ಘಾಟಿಸಿದರು. ಕೆ.ಎನ್.ಹರಿಪ್ರಸಾದ್, ಗೀತಾ, ನಾಗರತ್ನಾ, ಕೆ.ಟಿ.ನಾಗರಾಜ್, ಶ್ರೀನಿವಾಸ್, ಶಿವಕುಮಾರ್ ಆರಾಧ್ಯ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗಾಯಕ ಶಶಿಧರ್ ಕೋಟೆ ಸಲಹೆ
  • ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ
ಹಿರೀಸಾವೆ: ಮಕ್ಕಳ ಮನಸ್ಸು ಶುಭ್ರವಾದ ಬಿಳಿಯ ಹಾಳೆ ಇದ್ದಂತೆ. ಒಮ್ಮೆ ಹಾಳು ಮಾಡಿದರೆ ಮತ್ತೊಮ್ಮೆ ಸರಿಪಡಿಸಲು ಸಾಧ್ಯವಿಲ್ಲ ಎಂದು ಗಾಯಕ ಶಶಿಧರ್ ಕೋಟೆ ಹೇಳಿದರು.
ಹೋಬಳಿಯ ಕನುವನಘಟ್ಟ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವತಿಯಿಂದ ಆಯೋಜಿಸಿದ್ದ ಕಲಾಸಿರಿ-2026 ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಕ್ಕ-ಪಕ್ಕದ ಮನೆಯ ಮಕ್ಕಳನ್ನು ತೋರಿಸಿ, ಇಲ್ಲವೇ ಹೆಚ್ಚು ಅಂಕಗಳನ್ನು ಗಳಿಸುವ ನಿಟ್ಟಿನಲ್ಲಿ ಓದುವಂತೆ ಒತ್ತಡ ಹಾಕಬೇಡಿ. ಇದು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪ್ರಭಾವ ಬೀರಲಿದ್ದು, ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಸಲಹೆ ನೀಡಿದರು.
ಮಕ್ಕಳ ದೈನಂದಿನ ಚಟುವಟಿಕೆಯ ಮೇಲೆ ಪಾಲಕರು ಗಮನ ಹರಿಸಬೇಕು. ಜತೆಗೆ ಮಕ್ಕಳ ಮನಸ್ಸಿನಲ್ಲಿ ಅಡಗಿರುವ ಪ್ರತಿಭೆ ಹಾಗೂ ಉನ್ನತ ಆಸೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಇದರಿಂದ ಮಕ್ಕಳು ಭವಿಷ್ಯದಲ್ಲಿ ಬದುಕನ್ನು ಸದೃಢವಾಗಿ ಕಟ್ಟಿಕೊಳ್ಳುವಲ್ಲಿ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಅನಿಲ್ ಮಾತನಾಡಿ, ಟಿವಿ ವೀಕ್ಷಣೆ ಹಾಗೂ ಮೊಬೈಲ್ ಬಳಕೆಯಿಂದ ಮಕ್ಕಳನ್ನು ದೂರ ಇಡುವುದರ ಜತೆಗೆ ಪಾಲಕರು ಸಹ ಬಿಡುವು ಮಾಡಿಕೊಂಡು ಮಕ್ಕಳೊಂದಿಗೆ ಕುಳಿತು ಓದು-ಬರಹದ ಬಗ್ಗೆ ಕಣ್ಣಾಡಿಸಬೇಕು. ಇದರಿಂದ ಮಕ್ಕಳು ಭವಿಷ್ಯದಲ್ಲಿ ಉತ್ತಮವಾಗಿ ರೂಪಗೊಳ್ಳಲಿದೆ. ಆದರೆ ಕೆಲ ಪಾಲಕರು ತಾವೇ ಕುಳಿತು ಟಿವಿ ವೀಕ್ಷಣೆ ಹಾಗೂ ಮೊಬೈಲ್ ಬಳಕೆಯತ್ತ ಹೆಚ್ಚು ಸಮಯ ಕಳೆಯುವುದರಿಂದ ಮಕ್ಕಳ ಶೈಕ್ಷಣಿಕ ವ್ಯವಸ್ಥೆಗೆ ಆದ್ಯತೆ ನೀಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕಲರವ ಎಂಬ ವಾರ್ಷಿಕ ಸಂಚಿಕೆ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಕೆ.ಜೆ.ವೈಶಾಖ್ ಬರೆದಿರುವ ಧ್ರುವತಾರೆ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎನ್.ಹರಿಪ್ರಸಾದ್, ಗೀತಾ, ನಾಗರತ್ನಾ, ಮಾಜಿ ಸದಸ್ಯ ಕೆ.ಟಿ.ನಾಗರಾಜ್, ಶಿಕ್ಷಣ ಸಂಯೋಜಕ ಶ್ರೀನಿವಾಸ್, ಹಿರಿಯ ಚಿತ್ರನಟ ಶಿವಕುಮಾರ್ ಆರಾಧ್ಯ, ಮಾನವ ಹಕ್ಕುಗಳ ತನಿಖಾ ಸಮಿತಿಯ ರಾಜ್ಯಾಧ್ಯಕ್ಷ ಕೆ.ಸಂತೋಷ್, ಜಿಲ್ಲಾಧ್ಯಕ್ಷ ತೇಜಸ್, ಪಿಡಿಒ ಕೆ.ಎಸ್.ಪ್ರಕಾಶ್, ಯುವ ರೈತ ಕೀರ್ತಿ, ಮಕ್ಕಳ ತಜ್ಞ ಡಾ.ಪವನ್, ಗಂಗಾಧರ್, ಮುಖ್ಯಶಿಕ್ಷಕಿ ಡಿ.ಮಂಜಳಾ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net