ಕಾರ್ಯಕರ್ತರಿಗೆ ನೋವಾದರೆ ಸಹಿಸುವುದಿಲ್ಲ

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ಜೆಡಿಎಸ್ ಪಕ್ಷದದಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಉದ್ದೇಶಿಸಿ ಎಚ್‌ಡಿ.ರೇವಣ್ಣ ಮಾತನಾಡಿದರು. ಎಂ.ಎ.ನಾಗರಾಜ್, ಬಿಡಿಚಂದ್ರೆಗೌಡ, ಜಿ.ಟಿ.ಇಂದಿರಾ, ರಾಜಶೇಖರ್ ಇದ್ದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ಜೆಡಿಎಸ್ ಪಕ್ಷದದಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಉದ್ದೇಶಿಸಿ ಎಚ್‌ಡಿ.ರೇವಣ್ಣ ಮಾತನಾಡಿದರು. ಎಂ.ಎ.ನಾಗರಾಜ್, ಬಿಡಿಚಂದ್ರೆಗೌಡ, ಜಿ.ಟಿ.ಇಂದಿರಾ, ರಾಜಶೇಖರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಎಚ್.ಡಿ.ರೇವಣ್ಣ ಗುಡುಗು
  • ಬೇಲೂರಿನಲ್ಲಿ ಜೆಡಿಎಸ್ ಸಭೆ
ಬೇಲೂರು: ಜೆಡಿಎಸ್ ಕಾರ್ಯಕರ್ತರ ಪಕ್ಷವಾಗಿದೆ. ಅವರಿಗೆ ಯಾರಾದರೂ ನೋವು ಕೊಟ್ಟರೆ ನಮ್ಮ ಪಕ್ಷದವರು ಕೈಕಟ್ಟಿ ಕೂರುವುದಿಲ್ಲ. ಅದಕ್ಕೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಗುಡುಗಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ತಾಲೂಕು ಜೆಡಿಎಸ್ ಪಕ್ಷದಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಇದೇ ತಿಂಗಳು 24 ರಂದು ಹಾಸನದಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದು ಬೇಲೂರು ತಾಲೂಕಿನಿಂದ 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಆದರೆ ಜಿಲ್ಲೆಯಲ್ಲಿ ನಮ್ಮ ಪಕ್ಷದ ಶಕ್ತಿ ಕುಗ್ಗಿಸಲು ಕಾಂಗ್ರೆಸ್ ಎರಡು ಬಾರಿ ಸಮಾವೇಶ ಮಾಡಿ ಜೆಡಿಎಸ್ ಪಕ್ಷವನ್ನು ನಿರ್ಮೂಲನೆ ಮಾಡಲು ಏನೇನೋ ತಂತ್ರಗಾರಿಕೆ ಮಾಡಿದರೂ ಅದಕ್ಕೆಲ್ಲ ಹೆದರುವುದಿಲ್ಲ. ಕಾರ್ಯಕರ್ತರೆ ನಮ್ಮ ಪಕ್ಷದ ಆಸ್ತಿ. ಅವರಿಗೆ ಯಾರೇ ತೊಂದರೆ ಕೊಟ್ಟರೂ ಸುಮ್ಮನಿರುವ ಜಾಯಮಾನ ನಮ್ಮದಲ್ಲ ಎಂದರು.
ಪಕ್ಷ ಯಾವ ರೀತಿ ಸಂಘಟನೆ ಮಾಡಬೇಕು, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ಸಭೆ ನಡೆಸಿ ಚರ್ಚಿಸುತ್ತೇವೆ. ನಮ್ಮ ಪಕ್ಷದಲ್ಲಿ ಸದೃಢ ಕಾರ್ಯಕರ್ತರಿದ್ದಾರೆ. ಬೇಲೂರು ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಏನು, ರಾಜ್ಯದ ಅಧಿಕಾರ ಹಿಡಿದು ಎರಡುವರೆ ವರ್ಷ ಕಳೆದರೂ ಯಾವ ಅಭಿವೃದ್ಧಿ ಮಾಡಿದ್ದಾರೆ ಎಂದು ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
ಬೇಲೂರಿಗೆ ಇಪ್ಪತ್ತು ವರ್ಷಗಳ ಹಿಂದೇನೆ ರೈಲ್ವೆ ಮಾರ್ಗಕ್ಕೆ ದೇವೇಗೌಡರ ಶ್ರಮ ಹಾಕಿದ್ದರು. ಆದರೆ ಕೆಲವರ ಪಿತೂರಿಯಿಂದಾಗಿ ಭೂಮಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಬೇಲೂರು-ಹಾಸನ ನಾಲ್ಕು ಪಥದ ರಸ್ತೆಗೆ 661 ಕೋಟಿ ರೂ.ಗಳನ್ನು ನೀಡಿದ್ದು ಎಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು. ಆದರೆ ಕಾಂಗ್ರೆಸ್‌ನವರು ನಮ್ಮ ಕೊಡುಗೆ ಎಂದು ಬೊಗಳೆ ಬಿಡುತ್ತಿದ್ದಾರೆ. ನಮ್ಮ ಶಕ್ತಿ ಏನು ಎಂಬುದನ್ನು 2028ರ ಸಾರ್ವತ್ರಿಕ ಚುನಾವಣೆಯಲ್ಲಿ ತೋರಿಸುತ್ತೇವೆ. ಎನ್‌ಡಿಎ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದು ಖಂಡಿತ ಎಂದರು.
ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಹಾಸನದಲ್ಲಿ 2 ಲಕ್ಷಕ್ಕೂ ಅಧಿಕ ಜನರ ಸಮಾವೇಶ ನಡೆಸಲು ತೀರ್ಮಾನಿಸಿದ್ದು, ಜೆಡಿಎಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಹಾಗೂ ಮೈತ್ರಿ ಕೂಟದ ಅಭ್ಯರ್ಥಿ ರಾಜ್ಯದ ಮುಖ್ಯಮಂತ್ರಿ ಮಾಡಲು ಶ್ರಮಿಸಬೇಕಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ತೊ.ಚ.ಅನಂತ ಸುಬ್ಬರಾಯ ಮಾತನಾಡಿ, ಈ ಸಭೆ ನಡೆಸಲು ಯಾರಿಗೂ ಕರೆ ಮಾಡಿರಲಿಲ್ಲ, ಕೇವಲ ನಮ್ಮ ಪಕ್ಷದ ಗುಂಪಿನಲ್ಲಿ ಚರ್ಚೆ ಮಾಡಿ ತಿಳಿಸಿದ್ದೆವು. ಸುಮಾರು 500 ಕ್ಕೂ ಅಧಿಕ ಕಾರ್ಯಕರ್ತರು ಮುಖಂಡರು ಬಂದಿರುವುದು ಪಕ್ಷದ ಶಕ್ತಿಯನ್ನು ತೋರಿಸುತ್ತದೆ. ತಾಲೂಕಿನಲ್ಲಿ ಹೋಬಳಿ ಮಟ್ಟದ ಸಭೆ ನಡೆಸಿ ಹೊಸ ಮುಖಗಳಿಗೆ ಅವಕಾಶ ನೀಡಲಾಗುವುದು. ಮಲೆನಾಡು ಅಭಿವೃದ್ಧಿಗಾಗಿ ಅವರ ಹಿತ ಕಾಪಾಡಲು ನಮ್ಮ ನಾಯಕರು ಹೋರಾಡುತ್ತಿದ್ದಾರೆ. ಮೈತ್ರಿ ವಿಚಾರವಾಗಿ ನಮ್ಮ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು.
ಎಚ್‌ಡಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್, ಜಿಪಂ ಮಾಜಿ ಅಧ್ಯಕ್ಷರಾದ ಬಿ.ಡಿ. ಚಂದ್ರೆಗೌಡ, ಜಿ.ಟಿ.ಇಂದಿರಾ, ಉಪಾಧ್ಯಕ್ಷ ರಾಜಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲತಾ ಮಂಜೇಶ್ವರಿ, ಮರಿಯಪ್ಪ, ತಾಪಂ ಮಾಜಿ ಅಧ್ಯಕ್ಷರಾದ ರಂಗೇಗೌಡ, ಸುಭಾನ್, ಅಶ್ವಥ್, ಸದಸ್ಯರಾದ ರವಿ ಬಲ್ಲೇನಹಳ್ಳಿ, ಮುಖಂಡರಾದ ನಟರಾಜ್, ರಾಮಚಂದ್ರ, ಭಾರತೀ ಅರುಣಕುಮಾರ್, ಮೊಗಪ್ಪಗೌಡ, ದಿನೇಶ್, ನಾಗೇಶ್, ಸೋಮೇಶ್, ಸತೀಶ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net