ಹಾಸನ ತಾಲೂಕಿನ ಹೂವಿನಹಳ್ಳಿ ಮತ್ತು ಹೂವಿನಹಳ್ಳಿ ಕಾವಲು ಗ್ರಾಮಸ್ಥರು ಕೃಷಿ ಜಮೀನನ್ನು ವಸತಿ ಬಡಾವಣೆ ಯೋಜನೆಗಾಗಿ ಸ್ವಾಧೀನಪಡಿಸಿ ಕೊಳ್ಳುವ ಪ್ರಸ್ತಾವನೆ ವಿರೋಧಿಸಿ ಡಿಸಿ ಕಚೇರಿ ಎದುರು ಧರಣಿ ನಡೆಸಿದರು.
ಹಾಸನ:ತಾಲೂಕಿನ ಹೂವಿನಹಳ್ಳಿ ಮತ್ತು ಹೂವಿನಹಳ್ಳಿ ಕಾವಲು ಗ್ರಾಮಗಳ ಸುಮಾರು 387ಎಕರೆ ಫಲವತ್ತಾದ ಕೃಷಿ ಜಮೀನನ್ನು ವಸತಿ ಬಡಾವಣೆ ಯೋಜನೆಗಾಗಿ ಸ್ವಾಧೀನಪಡಿಸಿ ಕೊಳ್ಳುವ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಗ್ರಾಮಸ್ಥರು ಸೋಮವಾರ ಡಿಸಿ ಕಚೇರಿ ಎದುರು ಧರಣಿ ನಡೆಸಿದರು.
ಇದೇ ವೇಳೆ ಮಾತನಾಡಿದ ಗಾಮಸ್ಥ ದೇವೇಗೌಡ, ಕಳೆದ ಜ.29ರ ಸರ್ಕಾರ ಪ್ರಕಟಣೆಯಲ್ಲಿ ಕೆಎಚ್‌ಬಿ ವತಿಯಿಂದ ಒಟ್ಟು 387 ಎಕರೆ ಜಮೀನನ್ನು ವಸತಿ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆ ಬಗ್ಗೆ ತಿಳಿಸಲಾಗಿದೆ.
ಪ್ರಕಟಣೆ ಹೊರಬಿದ್ದ 60 ದಿನಗಳೊಳಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ. ಆದರೆ ಎರಡೂ ಗ್ರಾಮಗಳ ರೈತರು ಸಣ್ಣಹಿಡುವಳಿದಾರರು. ಕೃಷಿಯೇ ಅವರ ಜೀವನದ ಮುಖ್ಯ ಆಧಾರವಾಗಿದೆ. ಈ ಜಮೀನು ಅತ್ಯಂತ ಫಲವತ್ತಾಗಿದ್ದು, ಇಲ್ಲಿ ಜೋಳ, ರಾಗಿ, ಆಲೂಗಡ್ಡೆ ಸೇರಿ ವಿವಿಧ ತರಕಾರಿ ಬೆಳೆಯುವುದರ ಜತೆಗೆ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಅದೇ ಪ್ರಮುಖ ಆದಾಯ ಮೂಲವಾಗಿದೆ. ಜಮೀನಿನಲ್ಲಿ ಬೆಳೆಯುವ ಹುಲ್ಲು ಹಾಗೂ ಜೋಳ ಪಶುಗಳಿಗೆ ಆಹಾರವಾಗಿ ಹಾಲು ಉತ್ಪಾದನೆಗೆ ಸಹಕಾರಿ ಆಗುತ್ತಿದೆ ಎಂದರು.
ಹೈನುಗಾರಿಕೆ ಹಾಗೂ ಕೃಷಿ ಆದಾಯದಿಂದಲೇ ರೈತರು, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಚಿಕಿತ್ಸೆ ಹಾಗೂ ಕುಟುಂಬದ ದಿನನಿತ್ಯದ ಖರ್ಚು ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಮೀನನ್ನು ಸ್ವಾಧೀನಪಡಿಸಿಕೊಂಡರೆ ರೈತರು ಬರಿಗೈ ಆಗಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಾಸನದ ಸುತ್ತಮುತ್ತ ಈಗಾಗಲೇ ನೂರಾರು ಖಾಸಗಿ ವಸತಿ ಬಡಾವಣೆ ನಿರ್ಮಾಣ ವಾಗಿದ್ದು, 12 ಸಾವಿರಕ್ಕೂ ಹೆಚ್ಚು ಖಾಲಿ ನಿವೇಶನ ಮಾರಾಟವಾಗದೇ ಉಳಿದಿವೆ. ಇದೇ ವೇಳೆ ಹುಡಾದಿಂದ ನಿರ್ಮಿಸಿರುವ ಎಸ್.ಎಂ. ಕೃಷ್ಣಾನಗರ ವಸತಿ ಬಡಾವಣೆಯಲ್ಲಿ ಶೇ.30 ರಷ್ಟು ಮನೆ ಮಾತ್ರ ನಿರ್ಮಾಣಗೊಂಡಿದ್ದು, ಉಳಿದ ಶೇ.70 ರಷ್ಟು ನಿವೇಶನ ಖಾಲಿಯಾಗಿವೆ.
ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಕೆಂಚಟ್ಟಹಳ್ಳಿ ವಸತಿ ಬಡಾವಣೆಯಲ್ಲಿ ಸುಮಾರು 14 ಸಾವಿರ ನಿವೇಶನ ಹಂಚಿಕೆ ಹಂತದಲ್ಲಿವೆ. ಇದಲ್ಲದೆ, 20 ವರ್ಷಗಳ ಹಿಂದೆ ಕೆಹೆಚ್‌ಬಿ ನಿರ್ಮಿಸಿದ ಸತ್ಯಮಂಗಲ ಹಾಗೂ ಚನ್ನಪಟ್ಟಣ ವಸತಿ ಬಡಾವಣೆಗಳಲ್ಲಿಯೂ ಅನೇಕ ಖಾಲಿ ನಿವೇಶನ ಉಳಿದಿವೆ.
ಈ ಹಿನ್ನೆಲೆಯಲ್ಲಿ ನಿವೇಶನಗಳ ನಿಜವಾದ ಬೇಡಿಕೆ ಬಗ್ಗೆ ಸಮಗ್ರ ಸಮೀಕ್ಷೆ ನಡೆಸದೆ ರೈತರ ಫಲವತ್ತಾದ ಕೃಷಿ ಜಮೀನನ್ನು ವಸತಿ ಬಡಾವಣೆಗಳಾಗಿ ಪರಿವರ್ತಿಸುವುದು ಸರಿಯಲ್ಲ. ಇದರಿಂದ ಬಂಡವಾಳಶಾಹಿಗಳಿಗೆ ಮಾತ್ರ ಲಾಭವಾಗಬಹುದು ಎಂದು ಕಿಡಿಕಾರಿದರು.
ಹೂವಿನಹಳ್ಳಿ ಮತ್ತು ಹೂವಿನಹಳ್ಳಿ ಕಾವಲು ಗ್ರಾಮದ ಬಡ ರೈತರ ಜೀವನಾಧಾರವಾಗಿರುವ ಕೃಷಿ ಜಮೀನನ್ನು ವಸತಿ ಬಡಾವಣೆಗಾಗಿ ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ಸರ್ಕಾರ ಮರು ಪರಿಶೀಲಿಸಬೇಕು. ರೈತರ ಬದುಕಿಗೆ ಆಧಾರವಾದ ಈ ಜಮೀನು ಉಳಿಸಿಕೊಡಬೇಕು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದರು.
ಇದೇ ವೇಳೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಗ್ರಾಮದ ಸದಾಶಿವ, ಹರೀಶ್, ಹೇಮಂತ್, ನಾಗರಾಜು, ರೇವತಿ, ಕೃಷ್ಣಮೂರ್ತಿ, ರವಿಕುಮಾರ್ ಇದ್ದರು.