ಸಾರ್ವಜನಿಕ ಆಸ್ಪತ್ರೆಗೆ ಹೈಟೆಕ್ ಪ್ರಯೋಗಶಾಲೆ

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳ ಕುರಿತು ಪರಿಶೀಲನೆ ಸಭೆ ನಡೆಸಿದ ಶಾಸಕ ಎಚ್.ಡಿ.ರೇವಣ್ಣ ವೈದ್ಯಾಧಿಕಾರಿ ಹಾಗೂ ವೈದ್ಯರ ತಂಡದಿಂದ ಮಾಹಿತಿ ಪಡೆದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳ ಕುರಿತು ಪರಿಶೀಲನೆ ಸಭೆ ನಡೆಸಿದ ಶಾಸಕ ಎಚ್.ಡಿ.ರೇವಣ್ಣ ವೈದ್ಯಾಧಿಕಾರಿ ಹಾಗೂ ವೈದ್ಯರ ತಂಡದಿಂದ ಮಾಹಿತಿ ಪಡೆದರು.
Published on
ಹೊಳೆನರಸೀಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಮೂಲಸೌಲಭ್ಯಗಳನ್ನು ನೀಡುವ ಮೂಲಕ ಸ್ಥಳೀಯವಾಗಿಯೇ ಉತ್ತಮ ಚಿಕಿತ್ಸೆ ದೊರೆಯಬೇಕು ಎಂಬ ಹಿನ್ನೆಲೆಯಲ್ಲಿ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆಯಲಾಗಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ವೈದ್ಯರೊಂದಿಗೆ ಸಭೆ ನಡೆಸಿದ ಅವರು, 1982ರಲ್ಲಿ ಸ್ಥಾಪನೆಯಾದ ಆಸ್ಪತ್ರೆ ಇಂದು ಸುಸಜ್ಜಿತವಾಗಿ ಸಾರ್ವಜನಿಕರಿಗೆ ಸೇವೆ ನೀಡುತ್ತಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಡಯಾಲಿಸಿಸ್ ಕೇಂದ್ರವನ್ನು ತಾಲೂಕು ಆಸ್ಪತ್ರೆಗೆ ತಂದಿದ್ದು ನಮ್ಮ ಹೆಗ್ಗಳಿಕೆ. ತಾಲೂಕಿನಲ್ಲಿ 4 ಸಮುದಾಯ ಆಸ್ಪತ್ರೆಗಳನ್ನು ತೆರೆದಿದ್ದು ನಮ್ಮ ಸರ್ಕಾರದ ಅವಧಿಯಲ್ಲಿಯೇ. ಪ್ರಸ್ತುತ 350 ಹಾಸಿಗೆ ಸಾಮರ್ಥ್ಯ ಇರುವ ಪಟ್ಟಣದ ಆಸ್ಪತ್ರೆಯಲ್ಲಿ ಪ್ರತ್ಯೇಕ ಎರಡು ತೀವ್ರ ನಿಗಾ ಘಟಕಗಳುಳ್ಳ ಘಟಕ ಸ್ಥಾಪಿಸಲಾಗಿದೆ. ಇದೀಗ 80 ಲಕ್ಷ ರೂ.ವೆಚ್ಚದಲ್ಲಿ ಲಿಫ್ಟ್, ತಾಯಿ ಮಕ್ಕಳ ಆಸ್ಪತ್ರೆ ಸೇರಿದಂತೆ ತಲಾ 20 ಲಕ್ಷ ರೂ.ವೆಚ್ಚದಲ್ಲಿ ಎರಡೂ ಕಡೆ ಶುದ್ಧ ಕುಡಿಯುವ ನೀರಿನ ಸ್ಥಾವರ ಸ್ಥಾಪಿಸಬೇಕಿದೆ. ಸಿಟಿ ಸ್ಕಾೃನ್ ನಿರ್ವಹಣೆಗೆ ವರ್ಷದಲ್ಲಿ 27 ಲಕ್ಷ ರೂ. ವೆಚ್ಚವಾಗುತ್ತದೆ. ಎಲ್ಲಕ್ಕೂ ಮುಖ್ಯವಾಗಿ 65 ಲಕ್ಷ ರೂ.ವೆಚ್ಚದಲ್ಲಿ ಹೈಟೆಕ್ ಮತ್ತು ಅತ್ಯಾಧುನಿಕ ಯಂತ್ರೋಪಕರಣಗಳುಳ್ಳ ಪ್ರಯೋಗಶಾಲೆ ಪ್ರಾರಂಭಿಸಬೇಕು. ಅಲ್ಟ್ರಾಸೌಂಡ್ ಸ್ಕಾೃನಿಂಗ್ ಯಂತ್ರ ಖರೀದಿಸಿ ಅಳವಡಿಸಬೇಕಿದೆ. ಬಿಸಿನೀರಿನ ಅನುಕೂಲತೆ ಹಾಗೂ ವಿದ್ಯುತ್‌ಲೈನ್ ಬದಲಾವಣೆಗೊಳಿಸಿ ಸಕಲ ಅನುಕೂಲತೆ ಮಾಡಬೇಕಿದೆ. ವೈದ್ಯರಿಗೆ ಅಗತ್ಯ ಸಲಕರಣೆ, ಯಂತ್ರಗಳ ಖರೀದಿಸಲು ಸಹ ಕೇಂದ್ರ ಸರ್ಕಾರದ ಸಿ ಆ್ಯಂಡ್ ಆರ್‌ಎಫ್ ಅನುದಾನ ಕೋರಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಈಗಾಗಲೇ ಪ್ರತಿ ತಾಲೂಕಿನ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 65 ಲಕ್ಷ ರೂ. ಅನುದಾನದಲ್ಲಿ ತಾಲೂಕಿನ ಪಡುವಲಹಿಪ್ಪೆ, ದೊಡ್ಡಹಳ್ಳಿ, ಬಿಟ್ಟಗೌಡನಹಳ್ಳಿ, ನಾಗಲಾಪುರ, ಚಿಚನಹಳ್ಳಿ, ಎಲೆಚಾಗಹಳ್ಳಿ, ದೊಡ್ಡಬ್ಯಾಗತವಳ್ಳಿ, ಬಾಗೀವಾಳು, ಮೂಡಲಹಿಪ್ಪೆ, ಚನ್ನರಾಯಪಟ್ಟಣ ತಾಲೂಕಿನ ಆನೆಕರೆ, ಉದಯಪುರ, ಯಾಚೇನಹಳ್ಳಿ, ದೊಡ್ಡಕರಡೇವು, ನೊರನಕ್ಕಿ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಸಾರ್ವಜನಿಕರ ಸಂಖ್ಯೆ ಪಟ್ಟಣದ ಮತ್ತು ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಹೆಚ್ಚಿರುವ ಇಂದಿನ ಆರೋಗ್ಯ ಪರಿಸ್ಥಿತಿಗೆ ತಕ್ಕಂತೆ ಮೇಲ್ದರ್ಜೆಗೆ ಏರಿಸಲಾಗುವುದು. ಅಗತ್ಯ ವೈದ್ಯರ ಕೊರತೆ ತುಂಬಲು ಹಂಗಾಮಿ ನೇಮಕಗೊಳಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಆಸ್ಪತ್ರೆಯ ಎಲ್ಲ ತಜ್ಞ ವೈದ್ಯರಿಂದ ಆಸ್ಪತ್ರೆಗೆ ಬೇಕಾದ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಆಡಳಿತ ವೈದ್ಯಾಧಿಕಾರಿ ಡಾ.ಮಂಜುಳಾ, ಹಿರಿಯ ವೈದ್ಯರಾದ ಡಾ.ನಟರಾಜ್, ಡಾ.ನಾಗೇಂದ್ರ, ಡಾ.ಎಚ್.ಕೆ.ರಮೇಶ್, ಡಾ. ಕುಸುಮಾ, ಅಶ್ವತಿ, ಶ್ರೇಯಾ, ಡಾ.ಸೆಲ್ವಕುಮಾರ್ ಹಲವು ತಜ್ಞರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net