ಹೊಳೆನರಸೀಪುರ ಪಟ್ಟಣದ ಹೌಸಿಂಗ್ ಬೋರ್ಡ್ ಪಿಆರ್ ಕಲ್ಯಾಣ ಮಂಟಪದಲ್ಲಿ ಶನಿವಾರ ಬಿಜೆಪಿ ವತಿಯಿಂದ ಬಿಎಲ್‌ಎ 2 ಕಾರ್ಯಾಗಾರ ಏರ್ಪಡಿಸಲಾಗಿತ್ತು. ಸಿದ್ದೇಶ್ ನಾಗೇಂದ್ರ, ಶ್ರೀನಿವಾಸ್, ಗಿರೀಶ್, ಇತರರಿದ್ದರು.
ಹೊಳೆನರಸೀಪುರ:ಮುಂಬರುವ ಚುನಾವಣೆ ಎದುರಿಸಲು ಬಿಜೆಪಿ ಕಾರ್ಯಕರ್ತರು ಸಂಘಟಿತರಾಗುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಸಲಹೆ ನೀಡಿದರು.
ಪಟ್ಟಣದ ಹೌಸಿಂಗ್ ಬೋರ್ಡ್‌ನಲ್ಲಿರುವ ಪಿಆರ್ ಕಲ್ಯಾಣ ಮಂಟಪದಲ್ಲಿ ಶನಿವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬಿಎಲ್‌ಎ 2 ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಂಬರುವ ಯಾವುದೇ ಚುನಾವಣೆಗಳನ್ನು ಎದುರಿಸಲು ಈಗಿನಿಂದಲೇ ಬೂತ್ ಮಟ್ಟದಿಂದ ಸಂಘಟಿತರಾಗಬೇಕು. ಪ್ರತಿ ಬೂತ್ ಮಟ್ಟದಲ್ಲಿಯೂ ತಂಡಗಳನ್ನು ರಚಿಸಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು, ಯುವಕರು ಬೂತ್ ಮಟ್ಟದಲ್ಲಿ ಹೆಚ್ಚಿನ ಪ್ರಚಾರ ಮಾಡಲು ತೊಡಗಿಸಿಕೊಳ್ಳಬೇಕು, ಮತದಾರರಿಗೆ ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲು ಕೈಗೊಳ್ಳುವ ವಿಶೇಷ ಅಭಿಯಾನವಾಗಿದೆ. ಈ ಪ್ರಕ್ರಿಯೆಯ ಮೂಲಕ ಮರಣ ಹೊಂದಿದ ಅಥವಾ ಬೇರೆಡೆಗೆ ವಲಸೆ ಹೋದ ಮತದಾರರ ಹೆಸರುಗಳು, ತಪ್ಪು ಸೇರ್ಪಡೆಗಳು, ನಕಲಿ ಹೆಸರುಗಳು ಅಥವಾ ಒಳ ನುಸುಳು ಕೋರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ, ಜತೆಗೆ ಹೊಸ ಮತ್ತು ಅರ್ಹ ಮತದಾರರ ಹೆಸರುಗಳನ್ನು ಸೇರಿಸಲಾಗುತ್ತದೆ. ಈ ಪ್ರಕ್ರಿಯೆಯೂ ಈ ಹಿಂದೆ 11 ಬಾರಿ ನಡೆದಿದ್ದು ಕೊನೆಯದಾಗಿ 2002ರಿಂದ 2005ರ ಅವಧಿಯಲ್ಲಿ ದೇಶಾದ್ಯಂತ ನಡೆಸಲಾಗಿತ್ತು. ಕಳೆದ ಒಂದು ವರ್ಷದಲ್ಲಿ ಇದು ಈಗಾಗಲೇ 13 ರಾಜ್ಯಗಳಲ್ಲಿ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ 325 ಬೂತ್‌ಗಳಲ್ಲಿಯೂ ಬಿಜೆಪಿಯ ಎಲ್ಲ ಬೂತ್ ಅಧ್ಯಕ್ಷರು ಹಾಗೂ ಬಿ ಎಲ್‌ಎ 2ಗಳು ಆಸಕ್ತರಾಗಿ ಪರಿಷ್ಕರಣೆ ಬಗ್ಗೆ ಮಾಹಿತಿಯನ್ನು ಸಮಗ್ರವಾಗಿ ತಿಳಿಸಲಾಯಿತು.
ಮತದಾನ ಪರಿಷ್ಕರಣ ಸಂದರ್ಭದಲ್ಲಿ ಯಾವುದೇ ರೀತಿಯ ಭಯಪಡುವ ಅವಶ್ಯಕತೆ ಇಲ್ಲ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕೂಲಂಕಶವಾಗಿ ಪರಿಶೀಲಿಸಿ ಅರ್ಹ ಮತದಾರರಷ್ಟೇ ಪಟ್ಟಿಯಲ್ಲಿ ಉಳಿಯುವಂತೆ ಮಾಡಬೇಕೆಂದರು.
ಹೊರ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಮಂಡಲ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಬಿಹಳ್ಳಿ ಗಿರೀಶ್, ಅಮಿತ್ ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಗೌರಮ್ಮ, ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದ್ರಾ ನಾಗರಾಜ್, ದೀಪಕ್, ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಎಂ.ಎನ್.ರಾಜು ಮತ್ತಿತರರಿದ್ದರು.