2030ರೊಳಗೆ ದೇಶ ಎಚ್‌ಐವಿಮುಕ್ತವಾಗಲು ಸಹಕರಿಸಿ

ನಗರದಲ್ಲಿ ಕೆಸಾಪ್ಸ್‌ನ ಜಂಟಿ ನಿರ್ದೇಶಕಿ ಡಾ.ಚಂದ್ರಕಲಾ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು. ಡಾ. ಅನಿಲ್, ಡಾ.ವಿಜಯ್ ಗೊರೂರ್, ರವಿಕುಮಾರ್ ಇತರರಿದ್ದರು.
ನಗರದಲ್ಲಿ ಕೆಸಾಪ್ಸ್‌ನ ಜಂಟಿ ನಿರ್ದೇಶಕಿ ಡಾ.ಚಂದ್ರಕಲಾ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು. ಡಾ. ಅನಿಲ್, ಡಾ.ವಿಜಯ್ ಗೊರೂರ್, ರವಿಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 2030ರೊಳಗೆ ದೇಶ ಎಚ್‌ಐವಿಮುಕ್ತವಾಗಲು ಸಹಕರಿಸಿ
  • ಕೆಸಾಪ್ಸ್‌ನ ಜಂಟಿ ನಿರ್ದೇಶಕಿ ಡಾ. ಚಂದ್ರಕಲಾ ಮನವಿ
ಹಾಸನ: ಎಚ್‌ಐವಿ ಸೋಂಕನ್ನು ದೇಶದಿಂದ 2030ರೊಳಗೆ ನಿರ್ಮೂಲನೆ ಮಾಡುವ ರಾಷ್ಟ್ರೀಯ ಗುರಿ ಸಾಧನೆಗೆ ಆರೋಗ್ಯ ಇಲಾಖೆ ಪ್ರಯತ್ನ ಸಾಕಾಗುವುದಿಲ್ಲ. ಬದಲಾಗಿ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಜಾಗೃತಿ ಮೂಡಿಸಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಕೆಸಾಪ್ಸ್‌ನ ಜಂಟಿ ನಿರ್ದೇಶಕಿ ಡಾ. ಚಂದ್ರಕಲಾ ಸೂಚನೆ ನೀಡಿದರು.
ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಕಾರ್ಯಕ್ರಮಗಳು, ಪಲ್ಸ್ ಪೋಲಿಯೋ ಅಭಿಯಾನ ಹಾಗೂ ಎಚ್‌ಐವಿ/ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಗಾಗಿ ಬುಧವಾರ ಹಾಸನಕ್ಕೆ ಭೇಟಿ ನೀಡಿದ ಅವರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ರಾಜ್ಯಾದ್ಯಂತ ಜಾರಿಯಲ್ಲಿರುವ ಏಡ್ಸ್ ಸುರಕ್ಷತಾ ಅಭಿಯಾನವನ್ನು ಜಿಲ್ಲೆಯಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಸೋಂಕಿನ ನಿಯಂತ್ರಣಕ್ಕೆ ಒತ್ತು ನೀಡಬೇಕು. ಜನರಲ್ಲಿ ಎಚ್‌ಐವಿ ಕುರಿತು ಅರಿವು ಮೂಡಿಸು ವುದು, ಪರೀಕ್ಷೆಗೆ ಪ್ರೋತ್ಸಾಹಿಸುವುದು ಹಾಗೂ ಚಿಕಿತ್ಸೆಗೆ ಸಂಪರ್ಕ ಕಲ್ಪಿಸುವ ಕಾರ್ಯಗಳನ್ನು ತ್ವರಿತಗೊಳಿಸಬೇಕೆಂದು ತಿಳಿಸಿದರು.
ಎಚ್‌ಐವಿಯನ್ನು ನಡವಳಿಕೆ ಬದಲಾವಣೆಯಿಂದ ತಡೆಗಟ್ಟಬಹುದಾದ ಸೋಂಕಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಆದ್ದರಿಂದ ಯುವ ಸಮುದಾಯವನ್ನು ಗುರಿಯಾಗಿಸಿಕೊಂಡು ವ್ಯಾಪಕ ಜಾಗೃತಿ ಕಾರ್ಯಕ್ರಮ, ಆಪ್ತ ಸಮಾಲೋಚನೆ, ಪರೀಕ್ಷೆ ಹಾಗೂ ಚಿಕಿತ್ಸಾ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಬೇಕೆಂದು ಸೂಚಿಸಿದರು.
ಸರ್ಕಾರ ನಿಗದಿಪಡಿಸಿರುವ 95-95-95 ಗುರಿ ಸಾಧನೆ ಅತ್ಯಂತ ಮಹತ್ವದ್ದಾಗಿದೆ. ಅದರಂತೆ ಶೇ.95ಜನರು ತಮ್ಮ ಎಚ್‌ಐವಿ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ಸೋಂಕು ದೃಢಪಟ್ಟವರಲ್ಲಿ ಶೇ.95 ಜನರು ಚಿಕಿತ್ಸೆ ಪಡೆಯಬೇಕು ಹಾಗೂ ಚಿಕಿತ್ಸೆ ಪಡೆಯುವವರಲ್ಲಿ ಶೇ.95 ಜನರಲ್ಲಿ ವೈರಲ್ ಲೋಡ್ ನಿಯಂತ್ರಣಕ್ಕೆ ಬರಬೇಕು. ಈ ಗುರಿ ಸಾಧನೆ ಮೂಲಕ ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯ ಎಂದು ಹೇಳಿದರು.
ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಎಚ್‌ಐವಿ ಪರೀಕ್ಷೆಗೆ ಒಳಗಾಗಲು ಹಾಗೂ ತಮ್ಮ ಆರೋಗ್ಯ ಸ್ಥಿತಿಯನ್ನು ತಿಳಿದುಕೊಳ್ಳಲು ‘ಬ್ರೇಕ್ ಫ್ರೀ’ ಆ್ಯಪ್ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದೊಂದಿಗೆ ಗ್ರಾಮ ಮಟ್ಟದವರೆಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರಲ್ಲದೆ, ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಹಾಸನ ಜಿಲ್ಲೆಗೆ ಭೇಟಿ ನೀಡಿ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಿಲ್ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ತಿಂಗಳು ಸುಮಾರು 30ರಿಂದ 35 ಹೊಸ ಎಚ್‌ಐವಿ ಸೋಂಕಿತರು ಪತ್ತೆಯಾಗುತ್ತಿದ್ದು, ಅವರಲ್ಲಿ ಹೆಚ್ಚಿನವರು ಯುವಜನರಾಗಿರುವುದು ಕಳವಳಕಾರಿ ಸಂಗತಿ. ಈ ಹಿನ್ನೆಲೆಯಲ್ಲಿ ಕಾಲೇಜುಗಳು, ವಿದ್ಯಾರ್ಥಿ ವಸತಿ ನಿಲಯ ಹಾಗೂ ಅಪಾಯದ ಗುಂಪುಗಳು ಹೆಚ್ಚಿರುವ ಪ್ರದೇಶಗಳಲ್ಲಿ ಜಾಗೃತಿ ಮತ್ತು ಉಚಿತ ಪರೀಕ್ಷಾ ಶಿಬಿರ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ವಿಜಯ್ ಗೊರೂರ್, ಜಿಲ್ಲಾ ಮೇಲ್ವಿಚಾರಕ ರವಿಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net