ಮಕ್ಕಳನ್ನು ಶಾಲೆಗೆ ಕರೆತರಲು ಸಹಕರಿಸಿ

ಹಾಸನ ನಗರದ ವಾಣಿ ವಿಲಾಸ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕಲಿಕಾ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿಕ್ಷಣಾಧಿಕಾರಿ ಚಂದ್ರಶೇಖರ್, ಕ್ಲಸ್ಟರ್ 2 ಸಿಆರ್‌ಪಿ ಚಂದ್ರಕಾಂತ್ ಇತರರಿದ್ದರು.
ಹಾಸನ ನಗರದ ವಾಣಿ ವಿಲಾಸ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕಲಿಕಾ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿಕ್ಷಣಾಧಿಕಾರಿ ಚಂದ್ರಶೇಖರ್, ಕ್ಲಸ್ಟರ್ 2 ಸಿಆರ್‌ಪಿ ಚಂದ್ರಕಾಂತ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳನ್ನು ಶಾಲೆಗೆ ಕರೆತರಲು ಸಹಕರಿಸಿ
  • ಶಿಕ್ಷಣಾಧಿಕಾರಿ ಚಂದ್ರಶೇಖರ್ ಹೇಳಿಕೆ
  • ಕಲಿಕಾ ಹಬ್ಬ
ಹಾಸನ: ಶಾಲೆಯಿಂದ ಯಾವ ಮಕ್ಕಳು ಹೊರಗುಳಿಯಬಾರದೆಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಎಸ್‌ಡಿಎಂಸಿ ಪದಾಧಿಕಾರಿಗಳಿಗೆ ಗುರುತರ ಜವಾಬ್ದಾರಿ ನೀಡಿದೆ. ಶಿಕ್ಷಕರೊಂದಿಗೆ ಅವರು ಸಹ ಮಗುವನ್ನು ಶಾಲೆಗೆ ಕರೆತರಲು ಸಹಕರಿಸಬೇಕೆಂದು ಶಿಕ್ಷಣಾಧಿಕಾರಿ ಚಂದ್ರಶೇಖರ್ ಹೇಳಿದರು.
ನಗರದ ವಾಣಿ ವಿಲಾಸ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ನಡೆಸಿದ ಸಭೆಯಲ್ಲಿ ಎಸ್‌ಡಿಎಂಸಿ ಪದಾಧಿಕಾರಿಗಳಿಗೂ ಜವಾಬ್ದಾರಿ ವಹಿಸಿದ್ದಾರೆ. ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳ ಸಭೆಯನ್ನು ಕಡ್ಡಾಯವಾಗಿ ನಡೆಸುವಂತೆ ಸೂಚಿಸಿದ್ದಾರೆ ಎಂದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕನಿಷ್ಠ ಪದ ಗುರುತಿಸುವ, ವಾಕ್ಯ ರಚನೆಯ ಸಾಮರ್ಥ್ಯ ಕಲಿಸುವ ಉದ್ದೇಶದಿಂದ 2024-25ನೇ ಸಾಲಿನಿಂದ ಕಲಿಕಾ ಹಬ್ಬವನ್ನು ಜಾರಿಗೆ ತರಲಾಯಿತು. ಅದಕ್ಕಿಂತ ಮೊದಲು ನಲಿ-ಕಲಿ ಯೋಜನೆ ಜಾರಿಯಲ್ಲಿತ್ತು. ಒಟ್ಟು 16 ಅಂಶಗಳನ್ನು ಹಾಕಿಕೊಂಡಿದ್ದು ಅಕ್ಷರ ಜ್ಞಾನ ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ. ಕಲಿಕಾ ಹಬ್ಬದಲ್ಲಿ ಭಾಗಿಯಾದ ವಿದ್ಯಾರ್ಥಿ ಪ್ರೌಢಶಾಲಾ ಹಂತದಲ್ಲಿ ಸಾಕಷ್ಟು ಸುಧಾರಣೆಯಾಗಿರುವ ನಿದರ್ಶನಗಳಿವೆ ಎಂದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ಬಾರಿ ಹಾಸನ ಜಿಲ್ಲೆ 3ನೇ ಸ್ಥಾನ ಪಡೆದಿದ್ದು ಈ ಬಾರಿ ಮೊದಲ ಸ್ಥಾನದಲ್ಲಿರುತ್ತದೆ ಎಂಬ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಈಗಿನಿಂದಲೇ ಪ್ರಯತ್ನಗಳು ನಡೆಯುತ್ತಿವೆ. ಪಾಲಕರು ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಮನೋಭಾವ ಹೊಂದಬಾರದು. ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 48 ಖಾಸಗಿ ಶಾಲೆಗಳು ಶೇ.100 ಫಲಿತಾಂಶ ನೀಡಿದರೆ 52 ಸರ್ಕಾರಿ ಶಾಲೆಗಳು ಆ ಸಾಧನೆ ಮಾಡಿವೆ. ಪಾಲಕರು ಮಕ್ಕಳ ವ್ಯಾಸಂಗದ ದೃಷ್ಟಿಯಿಂದ ಎಲ್ಲ ನೆರವು ನೀಡಬೇಕೆಂದು ಸಲಹೆ ನೀಡಿದರು.
ಕ್ಲಸ್ಟರ್2 ಸಿಆರ್‌ಪಿ ಚಂದ್ರಕಾಂತ್ ಅವರು ಮಾತನಾಡಿ, ಶೈಕ್ಷಣಿಕ ಚಟುವಟಿಕೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ತಯಾರು ಮಾಡುವುದೇ ಎಫ್‌ಎಲ್‌ಎನ್ ಕಲಿಕಾ ಹಬ್ಬ. ಕಳೆದ ಜೂನ್ ತಿಂಗಳಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳ ಶೈಕ್ಷಣಿಕ ಪ್ರಗತಿ ಮೌಲ್ಯಮಾಪನಕ್ಕೆ ಈ ಕಾರ್ಯಕ್ರಮ ನೆರವಾಗಲಿದೆ ಎಂದರು.
ವಿದ್ಯಾರ್ಥಿಗಳು ಆಕರ್ಷಕ ಮೆರವಣಿಗೆ ಮೂಲಕ ಕಲಿಕಾ ಹಬ್ಬದ ಜಾಗೃತಿ ಮೂಡಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ಕುಮಾರಿ, ಉಪಾಧ್ಯಕ್ಷ ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್, ದೊಡ್ಡಳ್ಳಿ ರಮೇಶ್, ಮುಖ್ಯ ಶಿಕ್ಷಕಿ ಮೀನಾಕ್ಷಿ, ಶಿಕ್ಷಣ ಸಂಯೋಜಕರಾದ ಪವಿತ್ರಾ, ಕೃಷ್ಣ, ನಿವೃತ್ತ ಶಿಕ್ಷಕಿ ಸರೋಜಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net