ಅನುದಾನ ಇಲ್ಲದೆ ಸೊರಗಿದ ಹಾಸನ ವಿವಿ

ಹಾಸನ ವಿಶ್ವವಿದ್ಯಾಲಯ.
ಹಾಸನ ವಿಶ್ವವಿದ್ಯಾಲಯ.
Published on

ಪ್ರಮುಖ ಮುಖ್ಯಾಂಶಗಳು

  • ಅನುದಾನ ಇಲ್ಲದೆ ಸೊರಗಿದ ಹಾಸನ ವಿವಿ
  • ಕಾಡುತ್ತಿರುವ ಬೋಧಕ ಸಿಬ್ಬಂದಿ ಕೊರತೆ
  • ವಿದ್ಯಾರ್ಥಿಗಳಿಗೆ ಸಿಗಬೇಕಿದೆ ಸೂಕ್ತ ಸೌಲಭ್ಯ

ವಿಜಯವಾಣಿ ವಿಶೇಷ ಹಾಸನ

ಜಿಲ್ಲೆಯ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಬೇಕಿದ್ದ ಹಾಸನ ವಿಶ್ವವಿದ್ಯಾಲಯ ಆರಂಭವಾಗಿ ಮೂರು ವರ್ಷ ಕಳೆದರೂ ಸರ್ಕಾರದಿಂದ ಬಿಡಿಗಾಸು ಅನುದಾನ ಸಿಗದೆ ಸೊರಗುತ್ತಿದ್ದು, ಆಂತರಿಕ ಅನುದಾನ ಬಳಕೆಗೂ ಅನುಮತಿ ಸಿಗದೆ ನಲುಗಿದೆ.

ಪಕ್ಕದಲ್ಲೇ ಅರಣ್ಯ ಪ್ರದೇಶ ಇರುವುದರಿಂದ ಚಿರತೆ ಮತ್ತಿತರ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದೆ. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ರಕ್ಷಣೆಗೆ ಆದ್ಯತೆ ನೀಡಬೇಕಿದೆ. ವಿಶ್ವವಿದ್ಯಾಲಯದ ಜಾಗ ಸುಮಾರು 78 ಎಕರೆ ಇದ್ದು ಒತ್ತುವರಿ ಸಮಸ್ಯೆಯಿಂದ ಪಾರಾಗಬೇಕೆಂದರೆ ಸುತ್ತಲು ತಂತಿಬೇಲಿ ಹಾಕಬೇಕಿದೆ. ವಿಶ್ವವಿದ್ಯಾಲಯಕ್ಕೆ ಭವ್ಯ ಸ್ವಾಗತ ಕಮಾನು, ಅನಧಿಕೃತ ಪ್ರವೇಶ ನಿರ್ಬಂಧಕ್ಕೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ.

ಪ್ರಯೋಗಾಲಯ, ಮೌಲ್ಯಮಾಪನ ಕೊಠಡಿ, ಕ್ರೀಡಾಂಗಣ ನಿರ್ಮಾಣ ತುರ್ತಾಗಿ ಆಗಬೇಕಿದೆ. ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಿದ್ದರೂ ಸರ್ಕಾರದ ಅನುಮತಿ ಕಡ್ಡಾಯ ಎಂಬ ನಿಯಮ ಆಡಳಿತ ಮಂಡಳಿಯನ್ನು ಹೈರಾಣಾಗಿಸಿದೆ. ತಾತ್ಕಾಲಿಕವಾಗಿ 2 ಕೋಟಿ ರೂ. ಅನುದಾನ ಬೇಕಾಗಿದೆ. ಇಷ್ಟು ಕಡಿಮೆ ವೆಚ್ಚದ ಕಾಮಗಾರಿ ಕೈಗೊಳ್ಳಬೇಕೆಂದರೂ ಪೂರ್ವಾನುಮತಿ ಕಡ್ಡಾಯ ಎಂಬ ನಿಯಮ ಅಭಿವೃದ್ಧಿಗೆ ಅಡ್ಡಿಯಾಗಿದೆ.

2023ರ ಮಾರ್ಚ್ 23ರಿಂದ ಹಾಸನ ವಿಶ್ವವಿದ್ಯಾಲಯ ಕಾರ್ಯಾರಂಭ ಮಾಡುತ್ತಿದೆ. ಅದಕ್ಕಿಂತ ಮೊದಲು ಹೇಮಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. 32 ವರ್ಷಗಳ ಬಳಿಕ ವಿಶ್ವವಿದ್ಯಾಲಯವಾಗಿ ಮಾರ್ಪಾಡಾಗಿದೆ. ಪ್ರಸ್ತುತ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ 450 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾಲಯ ವ್ಯಾಪ್ತಿಗೆ 54 ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು ಒಟ್ಟು 21 ಸಾವಿರ ವಿದ್ಯಾರ್ಥಿಗಳು ಒಳಪಡುತ್ತಾರೆ.
ಮೊದಲು ಇದ್ದ ಎಂಟು ಕೋರ್ಸ್‌ಗೆ ಹೊಸದಾಗಿ ಸ್ನಾತಕೋತ್ತರ ಸಮಾಜ ವಿಭಾಗ, ರಸಾಯನಶಾಸ್ತ್ರ ಹಾಗೂ ಗಣಕ ವಿಜ್ಞಾನ (ಕಂಪ್ಯೂಟರ್ ಸೈನ್ಸ್) ವಿಭಾಗ ಆರಂಭಿಸಲಾಗಿದೆ. ಕೃತಕ ಬುದ್ದಿಮತ್ತೆ, ಡೇಟಾ ಸೈನ್ಸ್ ವಿಸ್ತರಣೆಗೆ ಹೊಸ ಕೋರ್ಸ್ ಆರಂಭಿಸಲಾಗಿದೆ. ಹಳೆಯ ಎಂಟು ಹಾಗೂ ಹೊಸ ಮೂರು ಕೋರ್ಸ್‌ಗಳು ಸದ್ಯ ವಿಶ್ವವಿದ್ಯಾಲಯದಲ್ಲಿ ಇದ್ದು ಇರುವ ಸಂಪನ್ಮೂಲ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆಯುತ್ತಿದೆ.

23 ಕೋಟಿ ರೂ.ಅನುದಾನ:

ಆಂತರಿಕ ಸಂಪನ್ಮೂಲಗಳಿಂದಲೇ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿರುವುದರಿಂದ ಕಾಯಂ ಸಿಬ್ಬಂದಿ ಹೊರತುಪಡಿಸಿ ಗುತ್ತಿಗೆ ನೌಕರರ ವೇತನ ಹಾಗು ಇತರ ಖರ್ಚು ವೆಚ್ಚವನ್ನು ಸ್ಥಳೀಯವಾಗಿಯೇ ಭರಿಸಬೇಕಿದೆ. ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕದಿಂದ 12 ಕೋಟಿ ರೂ., ಹಾಗು ಪರೀಕ್ಷಾ ಶುಲ್ಕ 6.65 ಕೋಟಿ ರೂ. ಸಂಗ್ರಹವಾಗುತ್ತಿದೆ. ಸಿಬ್ಬಂದಿ ವೇತನ, ಕಟ್ಟಡ ನಿರ್ವಹಣೆಗೆ ವೆಚ್ಚ ಮಾಡಲಾಗುತ್ತಿದೆ.
ಸಿಬ್ಬಂದಿ ಕೊರತೆಯೂ ಅಧಿಕ:
ಹಾಸನ ವಿಶ್ವವಿದ್ಯಾಲಯಕ್ಕೆ ಸಿಬ್ಬಂದಿ ಕೊರತೆ ಹೆಚ್ಚಾಗಿ ಕಾಡುತ್ತಿದೆ. 245 ಬೋಧಕೇತರ ಹುದ್ದೆ ಮಂಜೂರಾಗಿದ್ದರೂ ನೇರ ಪಾವತಿಯಡಿ 23 ಹಾಗೂ ಹೊರ ಗುತ್ತಿಗೆ ಆಧಾರದಡಿ 24 ಜನರು ಸೇರಿ 47 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು 198 ಹುದ್ದೆ ಭರ್ತಿಯಾಗದೆ ಉಳಿದಿವೆ. ಅದೇ ರೀತಿ 27 ಬೋಧಕ ಸಿಬ್ಬಂದಿ ಹುದ್ದೆ ಮಂಜೂರಾಗಿದ್ದು 10 ಸ್ಥಾನಗಳು ಭರ್ತಿಯಾಗಿವೆ. ಉಳಿದಂತೆ ಅತಿಥಿ ಉಪನ್ಯಾಸಕರನ್ನೇ ವಿಶ್ವವಿದ್ಯಾಲಯ ಅವಲಂಬಿಸಿದೆ.
ಹುಸಿಯಾದ ಸರ್ಕಾರದ ಭರವಸೆ:
2023ರಲ್ಲಿ ಹಾಸನ, ಚಾಮರಾಜನಗರ, ಮಡಿಕೇರಿ ಸೇರಿ ಆರು ಜಿಲ್ಲೆಗಳಲ್ಲಿ ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ ಅಂದಿನ ಬಿಜೆಪಿ ಸರ್ಕಾರ ಪ್ರತಿವರ್ಷ 2 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿತ್ತು. ಆದರೆ ನಂತರ ಬಂದ ಕಾಂಗ್ರೆಸ್ ಸರ್ಕಾರ ಯಾವುದೇ ಅನುದಾನ ನೀಡಲಿಲ್ಲ. ಇಷ್ಟುಮಾತ್ರವಲ್ಲದೆ ವಿಶ್ವವಿದ್ಯಾಲಯವನ್ನೇ ರದ್ದು ಮಾಡುವ ಕುರಿತು ನಿರ್ಧಾರ ಪ್ರಕಟಿಸಿತ್ತು. ಈ ಸಂಬಂಧ ಎಲ್ಲ ಜಿಲ್ಲೆಗಳಲ್ಲಿ ಪ್ರಬಲ ಹೋರಾಟಗಳು ನಡೆದ ಹಿನ್ನೆಲೆಯಲ್ಲಿ ರದ್ಧತಿ ನಿರ್ಧಾರದಿಂದ ಹಿಂದೆ ಸರಿಯಲಾಗಿತ್ತು.

ಇರುವ ಅಲ್ಪ ಸಂಪನ್ಮೂಲ ಬಳಸಿಕೊಂಡು ವಿಶ್ವವಿದ್ಯಾಲಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಸರ್ಕಾರ ಪ್ರೋತ್ಸಾಹ ನೀಡಿದರೆ ವಿದ್ಯಾಲಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಹುದು. ಸದ್ಯ ಆಂತರಿಕ ಸಂಪನ್ಮೂಲದಿಂದಲೇ ಕೆಲಸ ಮಾಡಲಾಗುತ್ತಿದೆ.

ತರೀಕೆರೆ ತಾರಾನಾಥ್, ಉಪ ಕುಲಪತಿ ಹಾಸನ ವಿಶ್ವವಿದ್ಯಾಲಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net