ಪುನಾರಂಭಗೊಂಡ ಹಾಸನ ದನಗಳ ಜಾತ್ರೆ

ಜಿಲ್ಲಾ ಕ್ರೀಡಾಂಗಣದ ಬಳಿ ದನಗಳ ಜಾತ್ರೆಯಲ್ಲಿ ಕಟ್ಟಲಾಗಿರುವ ವಿವಿಧ ತಳಿಯ ಜಾನುವಾರುಗಳು.
ಜಿಲ್ಲಾ ಕ್ರೀಡಾಂಗಣದ ಬಳಿ ದನಗಳ ಜಾತ್ರೆಯಲ್ಲಿ ಕಟ್ಟಲಾಗಿರುವ ವಿವಿಧ ತಳಿಯ ಜಾನುವಾರುಗಳು.
Published on

ಪ್ರಮುಖ ಮುಖ್ಯಾಂಶಗಳು

  • ಪುನಾರಂಭಗೊಂಡ ಹಾಸನ ದನಗಳ ಜಾತ್ರೆ
  • ಸಂತೆ ಮೈದಾನದಲ್ಲಿ 250ಕ್ಕೂ ಹೆಚ್ಚು ಜೋಡೆತ್ತುಗಳ ಕಲರವ
  • ಶಾಸಕ ಸ್ವರೂಪ್ ತಾಯಿ ಲಲಿತಾ ಪ್ರಕಾಶ್ ರಿಂದ ಚಾಲನೆ
ಹಾಸನ: ನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ನಿಂತು ಹೋಗಿದ್ದ ದನಗಳ ಜಾತ್ರೆಯನ್ನು ಈ ಬಾರಿ ಪುನಾರಂಭಿಸಲಾಗಿದೆ. ಸೋಮವಾರ ಸಂಜೆ ಜಿಲ್ಲಾ ಕ್ರೀಡಾಂಗಣದ ಬಳಿ ದನಗಳ ಜಾತ್ರಾ ಮೆರವಣಿಗೆಗೆ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಅವರ ತಾಯಿ ಲಲಿತಾ ಪ್ರಕಾಶ್ ಚಾಲನೆ ನೀಡಿದರು.
ಸುಮಾರು 250ಕ್ಕೂ ಹೆಚ್ಚು ಜೋಡೆತ್ತುಗಳ ಮೆರವಣಿಗೆಯಲ್ಲಿ ಭಾಗಿಯಾಗಿ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದವು. ನಂತರ ಹಾಸನಾಂಬ ದೇವಾಲಯದ ಎದುರು ವಿಶೇಷ ಪೂಜೆ ಬಳಿಕ ಸಂತೆ ಮೈದಾನದಲ್ಲಿ ವ್ಯವಸ್ಥಿತವಾಗಿ ಸಿದ್ಧಪಡಿಸಿರುವ ಜಾತ್ರಾ ಸ್ಥಳಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಲಿತಾ ಪ್ರಕಾಶ್, ತಮ್ಮ ಪತಿ ಮಾಜಿ ಶಾಸಕ ದಿ. ಪ್ರಕಾಶ್ ಅವರ ಕಾಲದಲ್ಲಿ ಹಾಸನದಲ್ಲಿ ಅದ್ಧೂರಿಯಾಗಿ ದನಗಳ ಜಾತ್ರೆ ನಡೆಯುತ್ತಿತ್ತು. ಆದರೆ ಕೆಲ ಕಾರಣಗಳಿಂದಾಗಿ ಈಚೆಗೆ ನಿಂತು ಹೋಗಿತ್ತು. ಆದರೆ ಮಗ ಶಾಸಕ ಸ್ವರೂಪ್ ಪ್ರಕಾಶ್ ಅವರ ಅವಧಿಯಲ್ಲಿ ಮತ್ತೆ ಆರಂಭವಾಗಿದೆ. ಜಾತ್ರೆಗೆ ಯಾವುದೇ ವಿಘ್ನ ಬಾರದಂತೆ ಯಶಸ್ವಿಯಾಗಿ ನಡೆಯಲಿ. ಹಾಸನದ ದನಗಳ ಜಾತ್ರೆ ಈ ಹಿಂದಿನಂತೆ ಹೆಸರುವಾಸಿಯಾಗಲಿ ಎಂದು ಶುಭ ಹಾರೈಸಿದರು.
ಆಯೋಜಕ ಹಾಗೂ ರೈತ ಹರಳಳ್ಳಿ ಪುಟ್ಟರಾಜ್ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ನಿಂತು ಹೋಗಿದ್ದ ದನಗಳ ಜಾತ್ರೆ ಈ ವರ್ಷ ಮತ್ತೆ ಆರಂಭವಾಗಿದೆ. ಇದಕ್ಕಾಗಿ ಶಾಸಕರು ಬಹಳ ಮುತುವರ್ಜಿ ವಹಿಸಿ ಎಲ್ಲ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಟ್ಟಿದ್ದು, ಯಾವುದೇ ಮೂಲ ಸೌಕರ್ಯಗಳ ಕೊರತೆ ಆಗದಂತೆ ಕಾಳಜಿ ವಹಿಸಿದ್ದಾರೆ ಎಂದರು.
ಇಂದಿನಿಂದ 10 ದಿನಗಳ ವರೆಗೆ ನಡೆಯಲಿರುವ ದನಗಳ ಜಾತ್ರೆಯಲ್ಲಿ ಈಗಾಗಲೇ ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ 250ಕ್ಕೂ ಹೆಚ್ಚು ಜೋಡಿ ಎತ್ತುಗಳು ಆಗಮಿಸಿವೆ. ನಾಳೆಯಿಂದ ಇನ್ನಷ್ಟು ಹೋರಿಗಳು ಸೇರುವ ನಿರೀಕ್ಷೆ ಇದೆ. ಇದರ ಉದ್ದೇಶ ವಿವಿಧ ಜಿಲ್ಲೆಗಳ ಜನರು ಹಾಸನದ ತೀರುಗಿ ನೋಡಿ ದನಗಳ ವ್ಯಾಪಾರ ವಹಿವಾಟು ಹೆಚ್ಚಾಗಲಿ ಹಾಗೂ ಹಾಸನದ ನಾಟಿ ತಳಿಗಳನ್ನು ಇತರ ಜಿಲ್ಲೆಗಳಿಗೂ ಪರಿಚಯಿಸುವ ಆಶಯ ಇದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net