ಅರಕಲಗೂಡು: ದ್ವಿತೀಯ ಪಿಯು ಬಳಿಕ ಉನ್ನತ ವ್ಯಾಸಂಗಕ್ಕೆ ವಿದ್ಯಾರ್ಥಿಗಳು ತೆಗೆದುಕೊಳ್ಳುವ ನಿರ್ಧಾರಗಳು ಅವರ ಭವಿಷ್ಯ ರೂಪಿಸುತ್ತವೆ. ಈ ಹಂತದಲ್ಲಿ ಸ್ವತಂತ್ರವಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎ. ಮಂಜು ಕಿವಿಮಾತು ಹೇಳಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಮೊಬೈಲ್ ವ್ಯಾಮೋಹ ಬಿಟ್ಟು ಓದಿನ ಕಡೆಗೆ ಹೆಚ್ಚು ಗಮನ ಹರಿಸುವುದು ಅತ್ಯಂತ ಮುಖ್ಯ ಎಂದು ಸಲಹೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಚ್.ಎಸ್. ಮಂಜುಶೆಟ್ಟಿಗೌಡ, ಸರ್ಕಾರವು ಪ್ರತಿವರ್ಷ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ವ್ಯಯಿಸುತ್ತಿದೆ. ಕಾಲೇಜಿನಲ್ಲಿ ಉತ್ತಮ ಅನುಭವ ಹೊಂದಿದ ಉಪನ್ಯಾಸಕರಿದ್ದು, ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನೀಡುವ ಮೂಲಕ ಸರ್ಕಾರಿ ಕಾಲೇಜಿನ ಘನತೆಯನ್ನು ಹೆಚ್ಚಿಸಬೇಕು ಎಂದರು.
ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕ ಎಚ್.ಆರ್. ವಿಶ್ವೇಶ್ವರಯ್ಯ ಪ್ರಧಾನ ಭಾಷಣ ಮಾಡಿದರು. ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ನಡೆಸಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಬಿಇಒ ಕೆ.ಪಿ.ನಾರಾಯಣ್, ಉಪ ಪ್ರಾಂಶುಪಾಲ ಬೊರಣ್ಣಗೌಡ, ಪ್ರಾಂಶುಪಾಲ ಕೆ.ಬಿ.ಅನಂತರಾಜು, ಸಿಡಿಸಿ ಸದಸ್ಯರಾದ ಶಶಿಕುಮಾರ್, ಮಂಜು ಮೋಹನ್, ಸವಿತಾ ಸುರೇಶ್, ಮಹೇಶ್ವರಿ, ಉಪನ್ಯಾಸಕ ಬಿ.ಪಿ. ಬಸವರಾಜ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು.