ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ರೌಷನ್ ಅರ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಗುರುವಂದನೆ ಸಲ್ಲಿಸಲಾಯಿತು. ಸಂತೋಷ್, ಮಂಜುನಾಥ್, ಕುಮಾರ್ ಇತರರಿದ್ದರು.
ಅರಕಲಗೂಡು: ಗ್ರಾಮೀಣ ಪ್ರದೇಶಗಳಲ್ಲಿ ಕಲಿಯುವ ಮಕ್ಕಳಿಗೆ ಆಂಗ್ಲ ಶಿಕ್ಷಣ ಅತ್ಯವಶ್ಯಕವಾಗಿದೆ ಎಂದು ಶಣವಿನಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಹೇಳಿದರು.
ತಾಲೂಕಿನ ಶಣವಿನಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ರೌಷನ್ ಅರ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರ ಪ್ರದೇಶದ ಮಕ್ಕಳಿಗೆ ಹೋಲಿಸಿದರೆ ಹಳ್ಳಿಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಇಂಗ್ಲಿಷ್ ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಇದರಿಂದ ಕೆಲ ಪಾಲಕರು ತಮ್ಮ ಮಕ್ಕಳನ್ನು ನಗರ ಪ್ರದೇಶದ ಕಾನ್ವೆಂಟ್‌ಗಳಿಗೆ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಉಂಟಾಗಿ ಮುಚ್ಚುವಂತಾಗಿದೆ ಎಂದು ಹೇಳಿದರು.
ಶಿಕ್ಷಕಿ ರೌಷನ್ ಅರ ಅವರು ಮಕ್ಕಳಿಗೆ ಇಂಗ್ಲಿಷ್ ಕಲಿಕೆಗೆ ಒತ್ತು ನೀಡಿ ಗುಣಮಟ್ಟದ ಶಿಕ್ಷಣ ನೀಡಿದ್ದರಿಂದ ಶಾಲೆಯಲ್ಲಿ ಮಕ್ಕಳ ಹಾಜರಾತಿಯಲ್ಲಿ ಹೆಚ್ಚಳವಾಗಿದೆ. ಇಲ್ಲವಾದರೆ ಪಟ್ಟಣಕ್ಕೆ ಸಮೀಪವಿರುವ ಈ ಶಾಲೆಯಲ್ಲಿಯೂ ಮಕ್ಕಳ ಕೊರತೆ ಉಂಟಾಗುತ್ತಿತ್ತು. ಇದನ್ನು ತಪ್ಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ನಮ್ಮೂರಿನ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕಿ ಇಲ್ಲವಾಗಿದ್ದು ಇದೇ ಶಾಲೆಗೆ ರೌಷನ್ ಅರ ಅವರನ್ನು ಮರು ವರ್ಗಾಯಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಶಿಕ್ಷಕಿ ರೌಷನ್ ಅರ ಮಾತನಾಡಿ, ಮಕ್ಕಳಿಗೆ ಕಲಿಕೆ ಜತೆಗೆ ಶಿಸ್ತು, ಉತ್ತಮ ಸಂಸ್ಕಾರ ಪ್ರಾಥಮಿಕ ಹಂತದಿಂದಲೇ ಸಿಗುವಂತಾಗಬೇಕು. ಅಂತಹ ಮಕ್ಕಳು ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡುತ್ತಾರೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಮುಖ್ಯ ಶಿಕ್ಷಕಿ ಯಾಸ್ಮೀನ್ ತಾಜ್, ಶಿಕ್ಷಕರಾದ ಸಾಗರ್, ಪರಮೇಶ್, ದಿವ್ಯಾಮಣಿ, ಅಂಗನವಾಡಿ ಶಿಕ್ಷಕಿ ಮಂಜುಳಾ, ಕುಮಾರ್, ಗ್ರಾಮಸ್ಥರು ಇದ್ದರು.