ಧರ್ಮದ ಹಾದಿಯಲ್ಲಿ ಸಾಗಿದರೆ ಬದುಕು ಹಸನು

ಶ್ರೀ ಮಠದಿಂದ ನೀಡುವ ಗುರು ಸೇವಾ ಕೌಸ್ತುಭ ಪ್ರಶಸ್ತಿಯನ್ನು ಉದ್ಯಮಿ ಡಿ.ಜೆ.ಪ್ರವೀಣ್ ದಂಪತಿಗೆ ಪ್ರದಾನ ಮಾಡಲಾಯಿತು.
ಶ್ರೀ ಮಠದಿಂದ ನೀಡುವ ಗುರು ಸೇವಾ ಕೌಸ್ತುಭ ಪ್ರಶಸ್ತಿಯನ್ನು ಉದ್ಯಮಿ ಡಿ.ಜೆ.ಪ್ರವೀಣ್ ದಂಪತಿಗೆ ಪ್ರದಾನ ಮಾಡಲಾಯಿತು.
Published on
ಸತೀಶ್ ಚಿಕ್ಕಕಣಗಾಲು ಆಲೂರು: ಪ್ರತಿಯೊಬ್ಬರು ಉತ್ತಮವಾದ ಸಂಸ್ಕಾರ ಬೆಳೆಸಿಕೊಂಡು ಧರ್ಮದ ಹಾದಿಯಲ್ಲಿ ನಡೆದಾಗ ಸಾರ್ಥಕತೆ ಹೊಂದಲು ಸಾಧ್ಯವಾಗುತ್ತದೆ ಎಂದು ಆಂಧ್ರಪ್ರದೇಶದ ಶ್ರೀಶೈಲ ಪೀಠದ ಶ್ರೀಮದ್ ಗಿರಿರಾಜ ಶ್ರೀಶೈಲ ಸೂರ್ಯ ಸಿಂಹಾಸನಾಧೀಶ್ವರ 1008 ಜಗದ್ಗುರು ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿಯಲ್ಲಿರುವ ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಲಿಂಗೈಕ್ಯ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅವರ 47ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಪ್ರಸ್ತುತ ಶ್ರೀಗಳವರ ಪಟ್ಟಾಧಿಕಾರದ ಐದನೇ ವಾರ್ಷಿಕೋತ್ಸವ, ಜನ್ಮ ವರ್ಧಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮ ಜ್ಞಾನ ಸಂಗಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಿತ್ಯ ಹಲವಾರು ದೇವರನ್ನು ಪೂಜಿಸುವುದಕ್ಕಿಂತ ಮನೆಯಲ್ಲಿರುವ ತಂದೆ-ತಾಯಿಯರನ್ನು ಪೂಜ್ಯ ಮನೋಭಾವನೆಯಿಂದ ಕಂಡಾಗ ದೇವರು ಒಲಿದು ತಮ್ಮ ಸಂಕಷ್ಟಗಳನ್ನು ದೂರ ಮಾಡುತ್ತಾನೆ ಎಂದರು.
ಧರ್ಮದ ಹಾದಿಯಲ್ಲಿ ಸಾಗಿದರೆ ಬದುಕು ಹಸನಾಗುತ್ತದೆ. ಧರ್ಮ ಎಂಬುದು ಸತ್ಯ, ಪ್ರಾಮಾಣಿಕ ಹಾದಿಯಲ್ಲಿ ಸಾಗುವ ದಾರಿಯಾಗಿದೆ. ಬದುಕಿನಲ್ಲಿ ಸಾಧನೆ ಎಂಬುದು ಒಳ್ಳೆತನದ ಹಾದಿಯಲ್ಲಿ ಗಳಿಸಿದ ಶ್ರೇಷ್ಠತೆಯಾಗಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಯಿಂದ ಕಾಣಬೇಕು. ಆಗ ಜೀವನ ಸಾರ್ಥಕವಾಗಲಿದೆ ಎಂದರು.
ಭಕ್ತಿ ಮಾರ್ಗದಲ್ಲಿ ಸಾಗಿದಾಗ ಮನಸ್ಸಿನಲ್ಲಿ ಚಂಚಲತೆ ಬಾರದು. ಮನುಷ್ಯನ ಮನಸ್ಸು ತಿಳಿಯಾಗಿರಬೇಕು. ಅಯ್ಯಚಾರ ಪಡೆದ ವಟುಗಳು ನಿತ್ಯ ಪೂಜೆ ಮಾಡಿಕೊಳ್ಳಬೇಕು. ಇದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಮನಸ್ಸಿನಲ್ಲಿ ಭಕ್ತಿ ಭಾವನೆ ಮೂಡುತ್ತದೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಕಲಿಸುವ ಪಾಠವು ಜೀವನದುದ್ದಕ್ಕೂ ಇರುತ್ತದೆ ಎಂಬುದಕ್ಕೆ ಕಾರ್ಜುವಳ್ಳಿಯ ಶ್ರೀಗಳು ಸಾಕ್ಷಿಯಾಗಿದ್ದಾರೆ. ಅವರು ದೀಕ್ಷೆ ಪಡೆದು ಈ ಮಠಕ್ಕೆ ಬಂದಾಗಿನಿಂದ ನಿತ್ಯ ಪೂಜೆ ಮಾಡುವುದರ ಜತೆಗೆ ಮಠಕ್ಕೆ ಆಗಮಿಸುವ ಭಕ್ತರಿಗೆ ಸಂಸ್ಕಾರದ ಅರಿವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿರುವುದು ಮಹತ್ವದ ಕಾರ್ಯವಾಗಿದೆ ಎಂದು ತಿಳಿಸಿದರು.
ವಿವಿಧ ಪೂಜೆಗಳು
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಅವರ ಶ್ರೀಗುರು ಪಟ್ಟಾಧಿಕಾರದ ಪಂಚಮ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಇಷ್ಟನಾಗ-ಸಿದ್ಧಿನಾಗ-ಮುಕ್ತಿನಾಗ ದೇವರ ಸನ್ನಿಧಿಯಲ್ಲಿ ಸರ್ಪಸೂಕ್ತ ಪಾರಾಯಣ ಪೂರ್ವಕ ಕ್ಷೀರಾಭಿಷೇಕ, ಪುಷ್ಪಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ ನಡೆದವು.
ಶ್ರೀ ಜಗದ್ಗುರು ರೇಣುಕಾಚಾರ್ಯರ ಸನ್ನಿಧಿಯಲ್ಲಿ ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಹಾಗೂ ಶ್ರೀ ಮಠದ ಹಿರಿಯ ಶ್ರೀಗಳವರ ಸನ್ನಿಧಿಯಲ್ಲಿ ರುದ್ರಾಭಿಷೇಕ, ಅಷ್ಟೋತ್ತರ ಆರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ ಜರುಗಿದವು. ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಅವರ ಶ್ರೀಗುರು ಸಣ್ಣಾಧಿಕಾರದ ಸಂಚು ವಾರ್ಷಿಕೋತ್ಸವದ ಅಂಗವಾಗಿ ಶ್ರೀಗಳಿಗೆ ಹರಿದ್ರಾಲೇಪನ, ಮಹಾಭಿಷೇಕ, ರಾಜೋಪಚಾರಯುಕ್ತ ಪಾದಪೂಜೆ, ಶಿಷ್ಯ ಸದಕ್ಷರಿಂದ ಭಕ್ತಿ ಸಮರ್ಪಣೆ ನಡೆಯಿತು.
ಗುರು ಸೇವಾ ಕೌಸ್ತುಭ ಪ್ರಶಸ್ತಿ ಪ್ರದಾನ
ಉದ್ಯಮಿ ಡಿ.ಜೆ.ಪ್ರವೀಣ್ ದಡದಹಳ್ಳಿ ಅವರಿಗೆ ಗುರು ಸೇವಾ ಕೌಸ್ತುಭ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಗಳಿಂದ ಗೌರವ ಗುರುರಕ್ಷೆಯನ್ನು ಪಿ.ಎಸ್.ವಿರೂಪಾಕ್ಷಯ್ಯ ಪಡುವಳಲು, ಕಾಂತರಾಜ್ ಕಡದರವಳ್ಳಿ, ಎಂ.ಜಿ.ಯತೀಶ್ ಮಂಜಲಗೋಡು, ಶ್ರೀಮಠದ ವಾರ್ತಾ ಸಂಯೋಜಕರಾದ ಸತೀಶ್ ಚಿಕ್ಕಣಗಾಲ್, ಮೊಗಪ್ಪ ಮಂಜಲಗೋಡು, ಡಿ.ಎಚ್.ಬಸವರಾಜ್, ಹಾಲಪ್ಪ ಎಂ.ಜಿ ಪಡೆದರು.
ಧನಲಕ್ಷ್ಮೀ ಮತ್ತು ಕನಸು ಶೇಖರ್ ಭರತನಾಟ್ಯ ಪ್ರದರ್ಶಿಸಿದರು. ಅರಕಲಗೂಡಿನ ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕಡೆನಂದಿಹಳ್ಳಿಯ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿಯ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ನುಗ್ಗೇಹಳ್ಳಿಯ ಪುರವರ್ಗ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ವಿಜಯಪುರದ ಸಿಂಧನೂರು-ಕನ್ನೂರು ಮಠದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ತೆಂಡೆಕೆರೆ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಕೆಸವತ್ತೂರು ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಲ್ಲಿ ಜಗದೀಶ್, ಎಂ.ಎಸ್.ಸುರೇಶ್, ಜಿಲ್ಲಾ ವೀರಶೈವ ಸಂಘದ ಅಧ್ಯಕ್ಷ ಐಸಾಮಿಗೌಡ, ವಿಧಾನಪರಿಷತ್ ಮಾಜಿ ಸದಸ್ಯ ರವಿ, ಶಾಂತಪ್ಪ ದೇವರಮನೆ ಕೊಪ್ಪಲು, ಡಾ.ಜಯರಾಜ್, ದರ್ಶನ್ ಡಿ.ಆರಾಧ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net