ಅಹಿಂದಗೆ ಗ್ಯಾರಂಟಿ, ವಿವಿಧ ಭಾಗ್ಯ ಕೊಡುಗೆ

ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.,
ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.,
Published on

ಪ್ರಮುಖ ಮುಖ್ಯಾಂಶಗಳು

  • ಅಹಿಂದಗೆ ಗ್ಯಾರಂಟಿ, ವಿವಿಧ ಭಾಗ್ಯ ಕೊಡುಗೆ
  • ಎಚ್‌ಡಿಕೆ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು
ಹಾಸನ: ಅಹಿಂದ ವರ್ಗಗಳ ಸಂಘಟನೆಯಲ್ಲಿ ನನ್ನ ಕೊಡುಗೆ ಇದೆ. ಮಂಡ್ಯಕ್ಕೆ ಎಚ್.ಡಿ.ಕುಮಾರಸ್ವಾಮಿ ಕೊಡುಗೆಗಳೇನು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಕೊಡುಗೆ ಏನು ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಹಿಂದ ವರ್ಗಕ್ಕೆ ಗ್ಯಾರಂಟಿಗಳು, ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ದೇವೆ. ಕಾರ್ಮಿಕರು, ಬಡವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಸಬಲೀಕರಣಕ್ಕೆ ಗ್ಯಾರಂಟಿ ಸೇರಿದಂತೆ ಅನೇಕ ಯೋಜನೆಗಳಿಂದ ಅನುಕೂಲವಾಗಿದೆ. ಕುಮಾರಸ್ವಾಮಿ ರೈತರ ಕುಟುಂಬದವರಾದರೆ ರೈತವರ್ಗಕ್ಕೆ ಅವರ ಕೊಡುಗೆಗಳೇನಿದೆ ಎಂದು ಪ್ರಶ್ನಿಸಿದರು.
ಜಿಎಸ್‌ಟಿ ದರ ಕಡಿತದಿಂದ ರಾಜ್ಯಕ್ಕೆ ನಷ್ಟ: ಪ್ರಸಕ್ತ ವರ್ಷ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಕರ್ನಾಟಕಕ್ಕೆ ಜಿಎಸ್‌ಟಿಯಲ್ಲಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿಎಸ್‌ಟಿ ಜಾರಿಗೆ ತಂದು ಅಂದಿನಿಂದಲೂ ಜನರಿಂದ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಈಗ ಆರ್ಥಿಕ ವರ್ಷದ ಮಧ್ಯದಲ್ಲಿಯೇ ಜಿಎಸ್‌ಟಿ ದರ ಕಡಿಮೆ ಮಾಡಿದ ಪರಿಣಾಮ ರಾಜ್ಯ ಸರ್ಕಾರಗಳಿಗೆ ಜಿಎಸ್‌ಟಿ ಸಂಗ್ರಹದಲ್ಲಿ ನಷ್ಟವಾಗಿದೆ. ಕೇರಳ, ಮಹಾರಾಷ್ಟ್ರ, ಕರ್ನಾಟಕ ಹೊರತುಪಡಿಸಿ ದೇಶದ ಎಲ್ಲ ರಾಜ್ಯಗಳಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಕೊರತೆ ಕಂಡಿದೆ ಎಂದರು.
ಜಿಎಸ್‌ಟಿ ದರ ಕಡಿತದಿಂದ ರಾಜ್ಯಕ್ಕಾಗಿರುವ ನಷ್ಟದ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇದುವರೆಗೂ ಧ್ವನಿ ಎತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಕೇಂದ್ರ ವಿತ್ತ ಸಚಿವರು ಬಜೆಟ್‌ನಲ್ಲಿ 5300 ಕೋಟಿ ರೂ. ಘೋಷಣೆ ಮಾಡಿದ್ದರು. ಈ ಘೋಷಣೆಯನ್ನು ಹಿಂದಿನ ಸರ್ಕಾರದವರು ತಮ್ಮ ಆಯವ್ಯಯದಲ್ಲಿಯೂ ಉಲ್ಲೇಖಿಸಿದ್ದರು. ಆದರೆ ಇದುವರೆಗೆ ಕೇಂದ್ರದಿಂದ ಈ ಅನುದಾನ ಬಿಡುಗಡೆ ಮಾಡಿಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ರಾಜ್ಯದ ಪ್ರಮುಖ ಯೋಜನೆಗೆ ಇದುವರೆಗೆ ಅನುಮತಿ ದೊರೆತಿಲ್ಲ. ಇದರಿಂದ ಮಂಡ್ಯ ಜನರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
2 ಸಾವಿರ ಕೋಟಿ ರೂ.ನಷ್ಟ: ಜಿಎಸ್‌ಟಿಯಲ್ಲಿ ನಮಗೆ ಈ ವರ್ಷ ಸುಮಾರು 12 ಸಾವಿರ ಕೋಟಿ ರೂ. ನಷ್ಟವಾಗಬಹುದೆಂಬ ಅಂದಾಜಿದೆ. 1 ಲಕ್ಷದ 26 ಕೋಟಿ ರೂ. ತೆರಿಗೆ ಬರಲಿದೆ ಎಂದು ಅಂದಾಜು ಮಾಡಿದ್ದೆವು. ಈಗ 12 ಸಾವಿರ ಕೋಟಿ ರೂ. ಅದರಲ್ಲಿ ಕಡಿಮೆಯಾಗಲಿದೆ. 88 ಸಾವಿರ ಕೋಟಿ ರೂ. ತಲುಪಲೂ ಕಷ್ಟವಾಗಲಿದೆ. ಇದನ್ನು ಏಕೆ ಕುಮಾರಸ್ವಾಮಿ ಪ್ರಶ್ನಿಸುವುದಿಲ್ಲ. ಮಂಡ್ಯದಿಂದ ಕುಮಾರಸ್ವಾಮಿ ಸಂಸದರಾಗಿದ್ದಾರೆ. ಸಂಸತ್ತಿನಲ್ಲಿ ಎಂದಾದರೂ ಈ ಬಗ್ಗೆ ಮಾತನಾಡಿದ್ದಾರೆಯೇ ಎಂದು ಕುಟುಕಿದರು.
ಟೀಕೆ ಮಾಡಲೆಂದೇ ಮಾತನಾಡುವುದಲ್ಲ. ನಾವು ಏನು ಮಾಡಿದ್ದೇವೆ ಎಂದು ಹೇಳುತ್ತೇವೆ. ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಹಾಕಿಲ್ಲ ಎಂದು ಹೇಳಲಿ ನೋಡೋಣ. ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಜಾರಿ ಮಾಡಿದರೆ ಕರ್ನಾಟಕ ರಾಜ್ಯ ದಿವಾಳಿಯಾಗಲಿದೆ ಎಂದಿದ್ದರು. ಈಗ ಯಶಸ್ವಿಯಾಗಿ ಗ್ಯಾರಂಟಿ ಯೋಜನೆ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಮಹಿಳಾ ಮೀಸಲಿನಲ್ಲಿ ಕಾಂಗ್ರೆಸ್ ಮುಂಚೂಣಿ
ಮಹಿಳಾ ಮೀಸಲಾತಿ ಜಾರಿಯಾಗಿಲ್ಲದಿರುವ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿರುವ ಬಗ್ಗೆ ಸಿಎಂ ಮಾತನಾಡಿ, ನಮ್ಮ ಸರ್ಕಾರ ಮೊದಲಿನಿಂದಲೂ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳಾ ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸುವವರಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಮೀಸಲಾತಿ ಕೊಡಬೇಕು ಎಂದರೆ ತಕ್ಷಣ ಕೊಡಬೇಕು. ಕೇಂದ್ರ ಸರ್ಕಾರ ಇದನ್ನು ಏಕೆ ಮುಂದೂಡಬೇಕು ಎಂದು ಟೀಕಿಸಿದರು.
ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಗೆ ಕಾನೂನಿನ ಕ್ರಮ
ಚಿಕ್ಕಮಗಳೂರಿನಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಯಾಗಿರುವ ಬಗ್ಗೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ಇಲ್ಲದೆ ಕಾಂಗ್ರೆಸ್ ಇಲ್ಲ ಎಂಬ ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಅವರು, ಪಕ್ಷದ ವರಿಷ್ಠರು ನಿರ್ಧಾರ ಮಾಡಿದಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net