

ಪ್ರಮುಖ ಮುಖ್ಯಾಂಶಗಳು
ಹಾಸನ:
ಬೀದಿನಾಟಕ ಕಲಾವಿದರ ಹಕ್ಕು ಹಾಗೂ ಸರ್ಕಾರದಿಂದ ದೊರಕುವ ಸೌಲಭ್ಯ ಪಡೆಯಲು ಒಗ್ಗಟ್ಟು ಹಾಗೂ ಸಂಘಟನೆ ಮುಖ್ಯ ಎಂದು ಬೀದಿನಾಟಕ ಕಲಾತಂಡಗಳ ಒಕ್ಕೂಟದ ಅಧ್ಯಕ್ಷ ಸಬ್ಬನಹಳ್ಳಿ ರಾಜು ಹೇಳಿದರು.
ಕರ್ನಾಟಕ ರಾಜ್ಯ ಬೀದಿನಾಟಕ ಕಲಾತಂಡಗಳ ಒಕ್ಕೂಟ ಹಾಗೂ ಹಾಸನ ಜಿಲ್ಲಾ ಘಟಕದ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸೋಮವಾರ ನಡೆದ ಮೈಸೂರು ವಿಭಾಗಮಟ್ಟದ ಸಭೆಯಲ್ಲಿ ಮಾತನಾಡಿ, ಇತ್ತೀಚೆಗೆ ಸರ್ಕಾರ ಬೀದಿನಾಟಕ ಕಲಾವಿದರಿಗೆ ಹಲವು ಕಾರ್ಯಕ್ರಮ ಜಾರಿಗೆ ತಂದಿದೆ. ಆದರೆ, ಅವು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ನಮ್ಮ ಹಕ್ಕುಗಳನ್ನು ಪಡೆಯಲು ನಮ್ಮಲ್ಲಿ ಒಗ್ಗಟ್ಟು ಬಹಳ ಮುಖ್ಯ. ನಿಟ್ಟಿನಲ್ಲಿ ರಾಜ್ಯಾದ್ಯಂತ ಕಲಾವಿದರನ್ನು ಒಗ್ಗೂಡಿಸಿ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಎಲ್ಲ ಕಲಾವಿದರು ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಕಲಾವಿದರ ಗೌರವಧನ ಹೆಚ್ಚಳ ಹಾಗೂ ಆರೋಗ್ಯ ನಿಧಿ ಒದಗಿಸುವ ಪ್ರಸ್ತಾವನೆ ಸಲ್ಲಿಸುವ ಸಲುವಾಗಿ ಸಭೆಯಲ್ಲಿ ಚರ್ಚೆ ನಡೆದಿದೆ. ಜತೆಗೆ ಸರ್ಕಾರದಿಂದ ಹೆಚ್ಚು-ಹೆಚ್ಚು ಕಾರ್ಯಕ್ರಮಗಳನ್ನು ನೀಡಬೇಕು ಎಂಬ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಸರ್ಕಾರ ಹಾಗೂ ಇಲಾಖೆಗಳ ನಡುವೆ ಸಂಪರ್ಕ ಸೇತುವೆಯಾಗಿ ನಮ್ಮ ಸಂಘಟನೆ ಕೆಲಸ ಮಾಡಲಿದೆ ಎಂದರು.