ಗಾಂಧೀಜಿ ಆದರ್ಶ ಮೈಗೂಡಿಸಿಕೊಂಡಿದ್ದ ಗೊರೂರು

ಹಾಸನದ ಟೈಮ್ಸ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮ ದಿನ ಕಾರ್ಯಕ್ರಮದ ಅಂಗವಾಗಿ ವಿಶೇಷ ಉಪನ್ಯಾಸ ನಡೆಯಿತು. ಗೊರೂರು ಶಿವೇಶ್, ಗೊರೂರು ವಸಂತಿಮೂರ್ತಿ, ಸಾಹಿತಿ ಗೊರೂರು ಅನಂತರಾಜು ಇತರರಿದ್ದರು.
ಹಾಸನದ ಟೈಮ್ಸ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮ ದಿನ ಕಾರ್ಯಕ್ರಮದ ಅಂಗವಾಗಿ ವಿಶೇಷ ಉಪನ್ಯಾಸ ನಡೆಯಿತು. ಗೊರೂರು ಶಿವೇಶ್, ಗೊರೂರು ವಸಂತಿಮೂರ್ತಿ, ಸಾಹಿತಿ ಗೊರೂರು ಅನಂತರಾಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗಾಂಧೀಜಿ ಆದರ್ಶ ಮೈಗೂಡಿಸಿಕೊಂಡಿದ್ದ ಗೊರೂರು
  • ನಿವೃತ್ತ ಉಪನ್ಯಾಸಕ ಗೊರೂರು ಶಿವೇಶ್ ಹೇಳಿಕೆ ವಿಶೇಷ ಉಪನ್ಯಾಸ

ಹಾಸನ:

ಗಾಂಧಿ ಮತ್ತು ಗ್ರಾಮ ಇವೆರಡೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಣ್ಣುಗಳಾಗಿದ್ದವು ಎಂದು ಲೇಖಕ ಹಾಗೂ ನಿವೃತ್ತ ಉಪನ್ಯಾಸಕ ಗೊರೂರು ಶಿವೇಶ್ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ವತಿಯಿಂದ ಹಾಸನ ನಗರ ಸತ್ಯಮಂಗಲದ ಟೈಮ್ಸ್ ಪಿಯು ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮ ದಿನ ಕಾರ್ಯಕ್ರಮದ ಅಂಗವಾಗಿ ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಗಾಂಧೀಜಿಯವರ ಸರಳತೆ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಗೊರೂರರಿಗೆ ಗ್ರಾಮ ಹೃದಯವಾಗಿದ್ದರೆ, ಗಾಂಧೀಜಿಯವರು ಆತ್ಮವಾಗಿದ್ದಾರೆ. ಗಾಂಧೀಜಿ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಅವರು, ಗಾಂಧೀಜಿಯವರ ಆತ್ಮಕಥೆಯನ್ನು ಕನ್ನಡಕ್ಕೆ ತಂದರು. ಗ್ರಾಮೋದ್ಧಾರದ ಅಂಗವಾಗಿ ಗುಡಿ ಕೈಗಾರಿಕೆ, ಗ್ರಾಮೋದ್ಯೋಗ ಭವನ, ಸೇವಾ ಸಹಕಾರ ಸಂಘ, ಊರಿನ ಸ್ವಚ್ಛತೆ, ಶಾಲೆ, ಆಸ್ಪತ್ರೆಗಳ ನಿರ್ಮಾಣಕ್ಕೆ ಪ್ರೇರಣೆ ನೀಡಿ ಗೊರೂರು ಗ್ರಾಮವನ್ನು ಮಾದರಿಯನ್ನಾಗಿಸಲು ಶ್ರಮಿಸಿದ್ದರು. ಇದರ ಜತೆಗೆ ಜನಪದ ಗೀತೆಗಳ ಸಂಗ್ರಹಕಾರರಾಗಿ ಹಳ್ಳಿಯ ಹಾಡುಗಳ ಕೃತಿಯನ್ನು ಹೊರ ತಂದರು. ತಮ್ಮ ಕಥೆ, ಪ್ರಬಂಧಗಳಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಹಿಡಿದಿಟ್ಟರು. ಅವರ ಕಥೆಯನ್ನಾಧರಿಸಿದ ಭೂತಯ್ಯನ ಮಗ ಅಯ್ಯು ಜನಪ್ರಿಯ ಮತ್ತು ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾಗಲು ಅದರಲ್ಲಿ ಬಿಂಬಿತವಾದ ಗ್ರಾಮೀಣ ಸಂಸ್ಕೃತಿ ಒಂದು ಕಾರಣ ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪುತ್ರಿ ವಸಂತಿಮೂರ್ತಿ, ನಮ್ಮ ತಂದೆ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮಯದಲ್ಲಿಯೇ ಸ್ವಾತಂತ್ರೃ ಹೋರಾಟಕ್ಕೆ ಧುಮುಕಿದರು. ಗಾಂಧೀಜಿಯವರ ಸಬರಮತಿ ಆಶ್ರಮದಲ್ಲಿ ಇದ್ದು ಅಲ್ಲಿಂದ ಹೊರ ತರುತ್ತಿದ್ದ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದಲ್ಲದೆ, ಬೆಂಗಳೂರಿನ ಕೆಂಗೇರಿಯ ಖಾದಿ ಭಂಡಾರದಲ್ಲಿ ಕೆಲಸ ನಿರ್ವಹಿಸಿದ್ದರು. ಗೊರೂರು ಟ್ರಸ್ಟ್ ಮೂಲಕ ಅವರ ವಾಸದ ಮನೆಯನ್ನು ಪುಸ್ತಕ ವಸ್ತು ಸಂಗ್ರಹಾಲಯ, ಸ್ಮರಣ ಭವನ, ಅವರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಲು, ತಮ್ಮ ಅಂತಿಮ ದಿನಗಳನ್ನು ಕಳೆದ ಅವರು ವಾಸಿಸುತ್ತಿದ್ದ ರಾಜಾಜಿನಗರದ ಮೆಟ್ರೋ ಸ್ಟೇಷನ್‌ಗೆ ಅವರ ಹೆಸರನ್ನು ಇಡಬೇಕೆಂದು ಮನವಿ ಮಾಡಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಗೊರೂರರು ಸ್ವಾತಂತ್ರೃ ಹೋರಾಟ ಮತ್ತು ಸಾಹಿತ್ಯ, ಜನಪದ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಯುವಜನರಿಗೆ ಪರಿಚಯಿಸಲು ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಪ್ರಯತ್ನಿಸಲಾಗುತ್ತಿದೆ. ಡಾ.ಗೊರೂರು ಸ್ಮರಣ ಸಮಿತಿ ಮಾಡಿ 1991ರಿಂದಲೇ ಅವರ ನಿವಾಸವನ್ನು ಸ್ಮಾರಕವಾಗಿಸಲು ಹಲವಾರು ಸೆಮಿನಾರ್‌ಗಳನ್ನು ಏರ್ಪಡಿಸಿ ಹಾಸನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಈಗಲೂ ಈ ವೇದಿಕೆ ಮೂಲಕ ಮತ್ತೊಮ್ಮೆ ಮನವಿ ಮಾಡುತ್ತಿದ್ದು, ಸರ್ಕಾರ ಈ ದಿಶೆಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ಲೇಖಕ ಗೊರೂರು ಶಿವೇಶ್ ಮತ್ತು ಗೊರೂರು ವಸಂತಿಮೂರ್ತಿ ಅವರನ್ನು ಟೈಮ್ಸ್ ಪಿಯು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಪಿಯು ಕಾಲೇಜಿನ ಅಧ್ಯಕ್ಷ ಎ.ಬಿ. ಸುರೇಂದ್ರ ಕುಮಾರ್, ಕಾರ್ಯಕ್ರಮದ ಸಂಯೋಜಕ, ಚಿತ್ರಕಲಾವಿದ ಬಿ.ಎಸ್.ದೇಸಾಯಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ.ಕುಶಾಲ್ ಬರಗೂರು, ಗಾಯಕ ಗೊರೂರು ಶ್ರೀಕಾಂತ್, ಕಲಾವಿದ ಯಾಕೂಬ್ ಗೊರೂರು, ಶೈಲಜಾ ರೈ, ಪದ್ಮಾ ವಿಜಯಸಾರಥಿ, ರೇವತಿ ಮೂರ್ತಿ, ಜಯಂತಿ ರಘುರಾಮ್, ಅರವಿಂದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net