ಕೆಪಿಎಸ್ ಶಾಲೆಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ

ಆಲೂರು ತಾಲೂಕಿನ ರಾಯರಕೊಪ್ಪಲಿನ ಕೆಪಿಎಸ್ ಶಾಲೆ.
ಆಲೂರು ತಾಲೂಕಿನ ರಾಯರಕೊಪ್ಪಲಿನ ಕೆಪಿಎಸ್ ಶಾಲೆ.
Published on

ಪ್ರಮುಖ ಮುಖ್ಯಾಂಶಗಳು

  • ಕೆಪಿಎಸ್ ಶಾಲೆಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ
  • ಪ್ರಸಕ್ತ ವರ್ಷ 15 ಶಾಲೆಗಳು ಆರಂಭದ ನಿರೀಕ್ಷೆ
  • ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಿದಂತೆ
ಹಾಸನ: ಖಾಸಗಿ ಶಾಲೆಗಳ ವ್ಯಾಮೋಹದಿಂದ ಮಕ್ಕಳು ಹಾಗೂ ಪಾಲಕರನ್ನು ಹೊರತರುವ ಉದ್ದೇಶದಿಂದ ಜಾರಿಯಾದ ಕೆಪಿಎಸ್ ಶಾಲೆಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಹೆಚ್ಚುವರಿಯಾಗಿ 15 ಶಾಲೆಗಳು ಆರಂಭವಾಗುವ ನಿರೀಕ್ಷೆ ಇದೆ.
ಜಿಲ್ಲೆಯಲ್ಲಿ ಈಗಾಗಲೇ 15 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. 2025-26ನೇ ಸಾಲಿನ ಬಜೆಟ್ ಘೋಷಣೆಯಂತೆ 2026-27ನೇ ಸಾಲಿಗೆ ರಾಜ್ಯದ ಆಯ್ದ 500 ಸರ್ಕಾರಿ ಶಾಲೆಗಳನ್ನು ರಾಜ್ಯ ಆಯವ್ಯಯದ ಅನುದಾನ ಮತ್ತು ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸಾಲ ಯೋಜನೆಯಡಿ ಹೆಚ್ಚುವರಿ ಮೂಲಸೌಕರ್ಯ ಒದಗಿಸುವ ಸಂಬಂಧ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ 474 ಶಾಲೆಗಳನ್ನು ಉನ್ನತೀಕರಿಸಲು 2025ರ ಅ.15ರ ಆದೇಶದಂತೆ ಸರ್ಕಾರ ಕ್ರಮ ಕೈಗೊಂಡಿದ್ದು, ಜಿಲ್ಲೆಯಲ್ಲಿ 15 ಶಾಲೆಗಳನ್ನು ಉನ್ನತೀಕರಿಸಲು ಕ್ರಮ ಕೈಗೊಳ್ಳಲಾಗಿದೆ.
ಕೆಪಿಎಸ್ ಶಾಲೆಗೆ ಮಾನದಂಡ: ರಾಜ್ಯದ ಎಲ್ಲಿಯೇ ಕೆಪಿಎಸ್ ಶಾಲೆ ಪ್ರಾರಂಭಿಸಬೇಕೆಂದರೆ ಶಿಕ್ಷಣ ಇಲಾಖೆ ಕೆಲವು ಮಾನದಂಡಗಳನ್ನು ಹಾಕಿದೆ. ಸರ್ಕಾರಿ ಶಾಲೆಯಾಗಿರಬೇಕು. ಒಂದೇ ಆವರಣದಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಬೋಧನೆಗೆ ಅವಕಾಶವಿರಬೇಕು. ಸುಮಾರು 500 ಮೀಟರ್ ಅಂತರದಲ್ಲಿರುವ ಶಾಲೆಗಳನ್ನು ಪರಿಗಣಿಸುವುದು. ಒಟ್ಟು ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ 200 ಅಥವಾ ಅದಕ್ಕಿಂತ ಹೆಚ್ಚಿರಬೇಕು. ಶಾಲೆಯ ಹೆಸರಿನಲ್ಲಿ 3 ರಿಂದ 5 ಎಕರೆ ಜಾಗ ಹೊಂದಿರಬೇಕು. ಈ ಎಲ್ಲ ಅರ್ಹತೆಗಳನ್ನು ಒಳಗೊಂಡ 15 ಶಾಲೆಗಳ ಹೆಸರನ್ನು ಶಿಕ್ಷಣ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ.
ಮಂಜೂರಾದ ಶಾಲೆಗಳ ಮಾಹಿತಿ
ಆಲೂರು ತಾಲೂಕಿನ ಕಾಮತಿ ಕೂಡಿಗೆ ಸರ್ಕಾರಿ ಪ್ರೌಢಶಾಲೆ (144 ಮಕ್ಕಳ ಸಂಖ್ಯೆ), ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (607), ಬೆಳವಾಡಿ ಹಿರಿಯ ಪ್ರಾಥಮಿಕ ಶಾಲೆ (229), ಅರಸೀಕೆರೆಯ ಕುರುವಂಕ ಸರ್ಕಾರಿ ಪ್ರೌಢಶಾಲೆ (122), ಬಾಣಾವರ ಸರ್ಕಾರಿ ಪದವಿಪೂರ್ವ ಕಾಲೇಜು (200), ಡಿ.ಎಂ.ಕುರ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು (195), ಜಾವಗಲ್ ಪದವಿ ಪೂರ್ವ ಕಾಲೇಜು (673) ಮತ್ತು ಬೇಲೂರು ತಾಲೂಕಿನ ಅರೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು (441), ಚನ್ನರಾಯಪಟ್ಟಣದ ಬಾಗೂರು ಸರ್ಕಾರಿ ಪ್ರೌಢಶಾಲೆ (176), ಶ್ರವಣಬೆಳಗೊಳ ಕಾಲೇಜು (298), ಹಾಸನ ತಾಲೂಕಿನ ನಿಟ್ಟೂರು (422), ಚಿಕ್ಕನಾಳು ಸರ್ಕಾರಿ ಪ್ರೌಢಶಾಲೆ (259), ಗೊರೂರು ಸರ್ಕಾರಿ ಪದವಿಪೂರ್ವ ಕಾಲೇಜು (249), ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ (456) ಹಾಗೂ ಮೂಡಲಹಿಪ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜು (238) ಸೇರಿ 4709 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೆಪಿಎಸ್ ಶಾಲೆ ಪ್ರಾರಂಭಿಸಲು ವಿದ್ಯಾರ್ಥಿಗಳ ಸಂಖ್ಯೆ ಕನಿಷ್ಠ 200 ಇರಲೇಬೇಕೆಂಬ ನಿಯಮ ಇರುವುದರಿಂದ ಕಡಿಮೆ ದಾಖಲಾತಿ ಇರುವ ಪಕ್ಕದ ಶಾಲೆಗಳನ್ನು ವಿಲೀನಗೊಳಿಸಲು ನಿರ್ಧರಿಸಲಾಗಿದೆ.
ಕಾರ್ಯನಿರ್ವಹಿಸುತ್ತಿರುವ ಕೆಪಿಎಸ್‌ಗಳು
ಪ್ರಸ್ತುತ ಆಲೂರು ತಾಲೂಕಿನ ರಾಯರಕೊಪ್ಪಲು, ಅರಕಲಗೂಡಿನ ಬಸವಾಪಟ್ಟಣ, ಅರಸೀಕೆರೆಯ ಚಿಂದೇನಹಳ್ಳಿ ಗೇಟ್, ಬೇಲೂರಿನ ಹಳೇಬೀಡು, ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಹಾಗೂ ಉದಯಪುರ, ಹಾಸನ ತಾಲೂಕಿನ ಮೊಸಳೆಹೊಸಳ್ಳಿ, ಸೋಮಹಳ್ಳಿ ಹಾಗೂ ಶಾಂತಿಗ್ರಾಮ, ಹೊಳೆನರಸೀಪುರದ ಹರಿಹರಪುರ, ಬಾಲಕರ ಶಾಲೆ ಹೊಳೆನರಸೀಪುರ, ಬಾಲಕಿಯರ ಶಾಲೆ, ಸಕಲೇಶಪುರ ತಾಲೂಕಿನ ಹೆತ್ತೂರು ಹಾಗು ಹಾನುಬಾಳುವಿನಲ್ಲಿ ಕೆಪಿಎಎಸ್ ಪ್ರಾರಂಭವಾಗಿದ್ದು, ಒಟ್ಟು 6444 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ವಿರೋಧದ ನಡುವೆಯೂ ಶಾಲೆಗಳ ವಿಲೀನ
ಸರ್ಕಾರಿ ಶಾಲೆಗಳ ಉಳಿಸಬೇಕೆಂದರೆ ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕೆಪಿಎಸ್ ಶಾಲೆಗಳ ಮೂಲಕ ಕಡಿಮೆ ದಾಖಲಾತಿ ಇರುವ ಶಾಲೆಗಳ ವಿಲೀನಕ್ಕೆ ಮುಂದಾಗಿದೆ. ಕೆಪಿಎಸ್ ಶಾಲೆ ಎಂದರೆ ಇಂಗ್ಲಿಷ್ ಮಾಧ್ಯಮದ ಜತೆಗೆ ದ್ವಿತೀಯ ಪಿಯುವರೆಗೆ ಮಕ್ಕಳ ವ್ಯಾಸಂಗಕ್ಕೆ ಕೊರತೆಯಾಗುವುದಿಲ್ಲ ಎಂಬ ಆಶಾಭಾವ ಪಾಲಕರದ್ದಾಗಿದೆ. ಜನಪ್ರತಿನಿಧಿಗಳು ಸಹ ಕೆಪಿಎಸ್ ಶಾಲೆಗಳನ್ನು ಸ್ವಾಗತಿಸಿರುವುದರಿಂದ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳು ಮುಚ್ಚುವುದು ಅನಿವಾರ್ಯವಾಗಿದೆ.
ಜಿಲ್ಲೆಯಲ್ಲಿ ಹಿಂದೆ 15 ಕೆಪಿಎಸ್‌ಸಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಬಾರಿ ಹೆಚ್ಚುವರಿಯಾಗಿ 15 ಕೆಪಿಎಸ್‌ಸಿ ಶಾಲೆಗಳು ಕಾರ್ಯನಿರ್ವಹಿಸಲಿವೆ. ಪ್ರವೇಶಾತಿ ಹೆಚ್ಚಳ ಮಾಡಲು ಪಾಲಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹೆಚ್ಚು ವಿದ್ಯಾರ್ಥಿಗಳು ದಾಖಲಾದರೆ ಹೆಚ್ಚಿನ ಶಿಕ್ಷಕರ ನಿಯೋಜನೆ ಮಾಡಲಾಗುವುದು. ಇಲಾಖೆಯಿಂದ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ.
ಬಲರಾಮು ಡಿಡಿಪಿಐ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net