ಪೌರಕಾರ್ಮಿಕರಿಗೆ ಉತ್ತಮ ಚಿಕಿತ್ಸಾ ಸೌಲಭ್ಯ

ಹಾಸನದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನೇರ ಪಾವತಿ ಪೌರಾಕಾರ್ಮಿಕರ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ವಿಮೆ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮುರುಳಿ ಅಶೋಕ್ ಸಾಲಪ್ಪ, ಮಹಾನಗರ ಪಾಲಿಕೆಯ ಆಯುಕ್ತ ಕೃಷ್ಣಮೂರ್ತಿ ಇತರರಿದ್ದರು.
ಹಾಸನದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನೇರ ಪಾವತಿ ಪೌರಾಕಾರ್ಮಿಕರ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ವಿಮೆ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮುರುಳಿ ಅಶೋಕ್ ಸಾಲಪ್ಪ, ಮಹಾನಗರ ಪಾಲಿಕೆಯ ಆಯುಕ್ತ ಕೃಷ್ಣಮೂರ್ತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೌರಕಾರ್ಮಿಕರಿಗೆ ಉತ್ತಮ ಚಿಕಿತ್ಸಾ ಸೌಲಭ್ಯ
  • ಮುರುಳಿ ಅಶೋಕ್ ಸಾಲಪ್ಪ ಮಾಹಿತಿ
  • ಆರೋಗ್ಯ ವಿಮೆ ಕಾರ್ಡ್ ವಿತರಣೆ
ಹಾಸನ: ಸಮಾಜಕ್ಕೆ ಮತ್ತೊಂದು ತಾಯಿ ಸ್ವರೂಪಳಾಗಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ದೊಡ್ಡ ಉದ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಪಡೆಯುವಂತಹ ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳಿ ಅಶೋಕ್ ಸಾಲಪ್ಪ ಹೇಳಿದರು.
ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಹಾಸನ ಮಹಾನಗರ ಪಾಲಿಕೆ ಸಹಯೋಗದಲ್ಲಿ ನೇರ ಪಾವತಿ ಪೌರಾಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ, ಅರಿವು ಕಾರ್ಯಕ್ರಮ ಹಾಗೂ ಆರೋಗ್ಯ ವಿಮೆ ಕಾರ್ಡ್ ವಿತರಣೆ ಕಾರ್ಯಕ್ರದಲ್ಲಿ ಮಾತನಾಡಿ, ನಿವೃತ್ತಿ ಹೊಂದುವ ಮುನ್ನ ಆರೋಗ್ಯ ಸಮಸ್ಯೆಗಳಿದ್ದರೆ ಬಗೆಹರಿಸಿಕೊಂಡು ಉತ್ತಮ ನಿವೃತ್ತ ಜೀವನ ನಡೆಸಿ ಎಂದು ಸಲಹೆ ನೀಡಿದರು.
ಐಪಿಡಿ ಸಾಲಪ್ಪ ಅವರ 36 ವರದಿಯನ್ನು ಎಲ್ಲ ಪೌರಕಾರ್ಮಿಕರು ಕೇಳಿ ತಿಳಿದುಕೊಳ್ಳಬೇಕು ಹಾಗೂ ತಮ್ಮ ಮೂಲ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಕರ್ನಾಟಕದಲ್ಲಿ ಮಲಮೂತ್ರಗಳನ್ನು ನೇರವಾಗಿ ತೆಗೆಯುವ ಪೌರಕಾರ್ಮಿಕರನ್ನು ಗುರುತಿಸಿ ಆರೋಗ್ಯ ವಿಮಾ ಕಾರ್ಡ್ ಅನ್ನು ಕಡ್ಡಾಯವಾಗಿ ನೀಡಬೇಕು ಎಂದರು.
ಪೌರಕಾರ್ಮಿಕರ ಆರ್ಥಿಕ ಸ್ಥಿತಿ ಗತಿಗಳನ್ನು ಉತ್ತಮಪಡಿಸುವ ನಿಟ್ಟಿನಲ್ಲಿ 2026-27 ಸಾಲಿನಲ್ಲಿ ಖಾಯಂ ನಾಯಕತ್ವದ ಹಕ್ಕು ಪತ್ರಗಳ ಆಧಾರದ ಮೇಲೆ 10 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡುವುದಾಗಿ ಪೌರಕಾರ್ಮಿಕರಿಗೆ ಭರವಸೆ ನೀಡಿದರು.
ಪ್ರತಿಯೊಬ್ಬ ಪೌರಕಾರ್ಮಿಕರ ಮಕ್ಕಳು ಪ್ರೌಢ ಮಟ್ಟದ ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಬೇಕು. ಹತ್ತನೇ ತರಗತಿ ಒಳಗೆ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಸಂಜೆ ನಂತರ ಕೋಚಿಂಗ್ ಕ್ಲಾಸ್‌ಗಳನ್ನು ನಡೆಸಿ ಶೈಕ್ಷಣಿಕವಾಗಿ ಉತ್ತೇಜಿಸುತ್ತೇವೆ. ಅಲ್ಲದೆ ಕೆಎಂಎಫ್ ಮೀಲ್ಕ್ ಬೂತ್‌ಗಳನ್ನು ಸ್ಥಾಪನೆ ಮಾಡುವಂತೆ ಹಾಗೂ ಯುವಕರಿಗೆ ಆಟೋರಿಕ್ಷಾಗಳನ್ನು ನೀಡುವ ಮೂಲಕ ಕುಟುಂಬದ ನಿರ್ವಹಿಸಲು ಪ್ರೋತ್ಸಾಹಿಸಲಾಗುತ್ತದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಕಲೆ ಪ್ರದರ್ಶಿಸುವ ಪೌರಕಾರ್ಮಿಕ ಮಕ್ಕಳಿಗೆ 5 ಲಕ್ಷ ರೂ. ವೆಚ್ಚದ ಕ್ಯಾಮರಾ, ಡ್ರೋನ್, ಕಂಪ್ಯೂಟರ್, ಸ್ಪೀಕರ್ ಇತ್ಯಾದಿ ಸೌಲಭ್ಯ ಮಾಡಿಕೊಡಲಾಗುವುದು. ಇವೆಂಟ್ಸ್ ಫೋಟೋಗ್ರಫಿ ಆಸಕ್ತಿ ಇರುವವರಿಗೆ ಸ್ಟುಡಿಯೋಗಳ ಸ್ಥಾಪನೆಗೆ ಸಹಕಾರ ನೀಡಲಾಗುವದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಗೌರವ ಸಲಹಾಗಾರ ಟಿ.ಕುಮಾರ್ ಮಾತನಾಡಿ, ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾದಂತಹ ಸಂದರ್ಭದಲ್ಲಿ ಬೆಂಗಳೂರಿನಿಂದ ಡೆಲ್ಲಿಯವರೆಗೂ ಉಚಿತ ಉತ್ತಮ ಚಿಕಿತ್ಸೆಯನ್ನು ಪಡೆಯುವಂತಹ ಸೌಲಭ್ಯ ಮಾಡಿಕೊಡಲಾಗಿದೆ. ಆರೋಗ್ಯ ವಿಮಾ ಕಾರ್ಡ್‌ನಲ್ಲಿ ಒಟ್ಟು ಐದು ಲಕ್ಷ ರೂ. ಒಳಗಿನ ಚಿಕಿತ್ಸೆಯನ್ನು ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
ಐಪಿಡಿ ಸಾಲಪ್ಪ ವರದಿ ಪೌರ ಕಾರ್ಮಿಕರಿಗೆ ಸಹಕಾರಿಯಾಗುವಂತಹ ಸೌಲಭ್ಯಗಳನ್ನು ನೀಡುವುದು ಮಾತ್ರವಲ್ಲ ರಕ್ಷಣೆಯನ್ನು ನೀಡುತ್ತದೆ. ಕೇವಲ ಆರೋಗ್ಯ ಕಾರ್ಡ್ ಮಾತ್ರ ಅಲ್ಲ ಅದು 5 ಲಕ್ಷ ಹಣ ಇರುವ ಎಟಿಎಂ ಕಾರ್ಡ್ ಇದ್ದಂತೆ ಎಂದರು.
ಆರೋಗ್ಯ ವಿಮಾ ಯೋಜನೆಯನ್ನು ಈಗಾಗಲೇ 20 ಜಿಲ್ಲೆಗಳಲ್ಲಿ ನೀಡಲಾಗಿದೆ. ಹಾಗಾಗಿ ಪೌರಕಾರ್ಮಿಕರು ಆರೋಗ್ಯದ ಕಡೆಗೆ ಗಮನವಹಿಸಬೇಕು. ಪೌರಕಾರ್ಮಿಕರು ಸುರಕ್ಷತಾ ಪರಿಕರಗಳನ್ನು ಬಳಸಿ ತಮ್ಮ ಆರೋಗ್ಯ ರಕ್ಷಿಸಿಕೊಳ್ಳಬೇಕು ಎಂದರು.
ಮಹಾನಗರ ಪಾಲಿಕೆಯ ಆಯುಕ್ತರಾದ ಕೃಷ್ಣಮೂರ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net