ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ

ಹಾಸನದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಿಂದ ನಿಲಯ ಪಾಲಕರು, ಮೇಲ್ವಿಚಾರಕರಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಡಿಸಿ ಲತಾ ಕುಮಾರಿ ಮಾತನಾಡಿದರು. ಪೂರ್ಣಿಮಾ, ಕುಮಾರ್ ಇತರರಿದ್ದರು.
ಹಾಸನದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಿಂದ ನಿಲಯ ಪಾಲಕರು, ಮೇಲ್ವಿಚಾರಕರಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಡಿಸಿ ಲತಾ ಕುಮಾರಿ ಮಾತನಾಡಿದರು. ಪೂರ್ಣಿಮಾ, ಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ
  • ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸೂಚನೆ
  • ನಿಲಯಪಾಲಕರು, ಮೇಲ್ವಿಚಾರಕರಿಗೆ ಕಾರ್ಯಾಗಾರ
ಹಾಸನ: ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳು ತಂದೆ, ತಾಯಿಗಳಿಂದ ದೂರವಿರುತ್ತಾರೆ. ನೂರಾರು ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸುವ ಅವಕಾಶ ವಾರ್ಡನ್‌ಗಳ ಕೈಯಲ್ಲಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಪಾಲಕರಾಗಿ ಜೀವನದ ಪಾಠ ಕಲಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಮಂಗಳವಾರ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಿಂದ ನಿಲಯ ಪಾಲಕರಿಗೆ/ನಿಲಯ ಮೇಲ್ವಿಚಾರಕರಿಗೆ ಜೀವನದ ಕೌಶಲಗಳು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಬೆಂಬಲ ಸೇವೆಗಳ ಕುರಿತ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಯಾವುದೇ ಕೆಲಸವಾದರೂ ಸಹ ಕರ್ತವ್ಯ ನಿಷ್ಠೆ ಇರಬೇಕು, ಆಸಕ್ತಿ ಇದ್ದರೆ ಯಾವುದೇ ಕೆಲಸವಾಗಲಿ ಮಾಡಿ ಸಾಧಿಸಬಹುದು. ಮಕ್ಕಳನ್ನು ಗೌರವ, ಪ್ರೀತಿಯಿಂದ ಮಾತನಾಡಿಸಿ ವಿದ್ಯಾಭ್ಯಾಸಕ್ಕೆ ಪೋತ್ಸಾಹಿಸಬೇಕು. ವಸತಿನಿಲಯದಲ್ಲಿ ನೂರು ವಿದ್ಯಾರ್ಥಿಗಳಿದ್ದರೆ ನೂರು ಸಮಸ್ಯೆಗಳಿರುತ್ತವೆ. ತಾಳ್ಮೆಯಿಂದ ಗೌರವದಿಂದ ಆಲಿಸಿ ಅರ್ಥ ಮಾಡಿಕೊಂಡು ಪರಿಹಾರ ನೀಡುವ ಕೆಲಸ ಮಾಡಬೇಕು, ಮಕ್ಕಳ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ನಿಲಯದಲ್ಲಿ ಸ್ವಚ್ಛತೆ ಇಲ್ಲದಿದ್ದರೆ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಎಲ್ಲ ವಿದ್ಯಾರ್ಥಿನಿಲಯದಲ್ಲಿ ಕಡ್ಡಾಯವಾಗಿ ಸ್ವಚ್ಛತೆ ಕಾಪಾಡಿಕೊಳ್ಳವುದು ನಿಲಯ ಪಾಲಕರು ಕರ್ತವ್ಯ. ಹೀಗಾಗಿ ಸ್ವಚ್ಛತೆಗೆ ಮೊದಲ ಆದ್ಯತೆಯಾಗಬೇಕು. ಮಕ್ಕಳ ಆಲೋಚನೆಗಳನ್ನು ಅರ್ಥೈಸಿಕೊಂಡು ಅವರಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವ ಹಾಗೂ ಪ್ರೋತ್ಸಾಹಿಸುವ ಕೆಲಸವಾಗಬೇಕು, ಅಡುಗೆ ಸಿಬ್ಬಂದಿ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎಂದರು.
ಪ್ರತಿಯೊಂದು ಹಾಸ್ಟೆಲ್‌ಗಳಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿಸಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲು ತರಬೇತಿ ನೀಡಬೇಕು, ಕೌಶಲ ಬಳಸಿಕೊಳ್ಳಲು ತರಬೇತಿ, ಸ್ವಂತ ಉದ್ಯೋಗ ಮಾಡಲು ಸಲಹೆ ನೀಡಬೇಕು ಎಂದರು.
ಪೋಕ್ಸೋ ಕಾಯ್ದೆಯ ನಿಯಮಗಳ ಬಗ್ಗೆ ಪ್ರತಿಯೊಂದು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಅರಿವು ಮೂಡಿಸಬೇಕು. ವಿದ್ಯಾರ್ಥಿ ನಿಲಯದ ಆವರಣದಲ್ಲಿ ಗಿಡ ಮರಗಳನ್ನು ಬೆಳೆಸುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಬೇಕು. ನಿಲಯದಲ್ಲಿ ಗ್ರಂಥಾಲಯ ಇರಬೇಕು, ಗ್ರಂಥಾಲಯದಲ್ಲಿ ವಿದ್ಯಾಭ್ಯಾಸ ಪೂರಕ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು, ದಿನಪತ್ರಿಕೆಗಳು ಇರಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಮಾತನಾಡಿ, ವಿದ್ಯಾರ್ಥಿನಿಲಯಗಳಲ್ಲಿ ಗುಣಮಟ್ಟದ ಆಹಾರವನ್ನು ತಯಾರಿಸಿ ನೀಡಬೇಕು, ಕೊಠಡಿಗಳಲ್ಲಿ, ಶೌಚಗೃಹಗಳಲ್ಲಿ ಸ್ವಚ್ಛತೆಯ ಕಾಯ್ದುಕೊಳ್ಳಬೇಕು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net