‘ಸರ್ಕಾರಿ ಸೌಲಭ್ಯ’ ಅಂಗವಿಕಲರಿಗೆ ಆದ್ಯತೆ ನೀಡಿ

ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂಗವಿಕಲರ ಕುಂದು ಕೊರತೆ, ಅಹವಾಲು ಸ್ವೀಕಾರ ಸಭೆಯಲ್ಲಿ ಡಿಸಿ ಲತಾಕುಮಾರಿ ಮಾತನಾಡಿದರು. ಡಾ.ಅನಿಲ್ ಕುಮಾರ್, ಡಾ.ಸಂತೋಷ್, ಚಂದ್ರಶೇಖರ್, ಅನುಪಮಾ ಇದ್ದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂಗವಿಕಲರ ಕುಂದು ಕೊರತೆ, ಅಹವಾಲು ಸ್ವೀಕಾರ ಸಭೆಯಲ್ಲಿ ಡಿಸಿ ಲತಾಕುಮಾರಿ ಮಾತನಾಡಿದರು. ಡಾ.ಅನಿಲ್ ಕುಮಾರ್, ಡಾ.ಸಂತೋಷ್, ಚಂದ್ರಶೇಖರ್, ಅನುಪಮಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ‘ಸರ್ಕಾರಿ ಸೌಲಭ್ಯ’ ಅಂಗವಿಕಲರಿಗೆ ಆದ್ಯತೆ ನೀಡಿ
  • * ಜಿಲ್ಲಾಧಿಕಾರಿ ಲತಾ ಕುಮಾರಿ ಅಧಿಕಾರಿಗಳಿಗೆ ಸೂಚನೆ
ಹಾಸನ: ವಿವಿಧ ಇಲಾಖೆಗಳ ಮೂಲಕ ನೀಡುವ ಸರ್ಕಾರದ ಸವಲತ್ತುಗಳನ್ನು ನೀಡುವಾಗ ಅಂಗವಿಕಲರಿಗೆ ಮೊದಲ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಅಂಗವಿಕಲರ ಕುಂದು ಕೊರತೆ, ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು. ಸ್ಥಳೀಯ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಶೇ.5 ಅನುದಾನ ಮೀಸಲಿಟ್ಟು ಅವರ ಬೆಳವಣಿಗೆಗೆ ಪೂರಕವಾಗಿ ಸದ್ಬಳಕೆಗೆ ಮಾಡುವಂತೆ ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ, ಕಲಾ ಭವನ, ಶಾಲೆ-ಕಾಲೇಜು, ಆಸ್ಪತ್ರೆಗಳಲ್ಲಿ ಎಲ್ಲ ಕಡೆಗಳಲ್ಲಿಯೂ ಅಂಗವಿಕಲರಿಗೆ ನೆರವಾಗುವಂತೆ ರ‌್ಯಾಂಪ್ ಇರಬೇಕು. ಎಲ್ಲ ಸರ್ಕಾರಿ ಆಸ್ಪತ್ರೆಗಳ ನಾಮಫಲಕದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಅವರ ಹೆಸರು, ಮೊಬೈಲ್ ನಂಬರ್‌ಗೆ ಸಂಬಂಧಿಸಿದ ಮಾಹಿತಿಯನ್ನು ಅಳವಡಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅಂಗವಿಕಲರ ಗ್ರಾಮ ಸಭೆ ನಡೆಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಮಾಜದಲ್ಲಿ ಅಂಗವಿಕಲರನ್ನು ಕಡೆಗಣಿಸದೆ ಸಮಾನತೆಯಿಂದ ನೋಡಬೇಕು. ಅವರ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಅವರಿಗೆ ಅಗತ್ಯವಿರುವ ಸಾಧನ ಸಲಕರಣೆಗಳು, ಶಿಕ್ಷಣ, ಆರೋಗ್ಯ ಸೌಲಭ್ಯ, ಸ್ವಯಂ ಉದ್ಯೋಗ ಪಡೆದುಕೊಳ್ಳಲು ಕೌಶಲ ತರಬೇತಿ ನೀಡುವ ಮೂಲಕ ಉದ್ಯೋಗದಲ್ಲಿ ತೊಡಗಿಕೊಳ್ಳಲು ಉತ್ತೇಜನ ನೀಡಬೇಕು. ವಿಶೇಷವಾಗಿ ಜಿಲ್ಲಾ ಮಟ್ಟದಲ್ಲಿ ಅಂಗವಿಕಲರಿಗೆ ಉದ್ಯೋಗ ಮೇಳ ಆಯೋಜಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಂಗವಿಕಲ ತಂದೆ ಅಥವಾ ತಾಯಿ ಸರ್ಕಾರಿ ನೌಕರಿಯಲ್ಲಿದ್ದು, ನಿವೃತ್ತಿ ಹೊಂದಿದ್ದಲ್ಲಿ ಅವರ ಮಕ್ಕಳಿಗೆ ಪಿಂಚಣಿ ನೀಡುವ ಸೌಲಭ್ಯವಿರುತ್ತದೆ. ಇದರ ಕುರಿತು ಹೆಚ್ಚಿನ ಪ್ರಚಾರ ನೀಡಿ. ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ಅಂಗವಿಲರಿಗೆ ಆದ್ಯತೆ ಮೇರೆಗೆ ವಸತಿ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಸೂಚಿಸಿದರಲ್ಲದೆ, ಉಚಿತ ಕಾನೂನು ನೆರವು ಒದಗಿಸಲು ಕ್ರಮವಹಿಸಬೇಕು ಎಂದರು.
ಪ್ರತಿ ತಿಂಗಳು ಅಂಗವಿಕಲರ ಮನೆ ಬಾಗಿಲಿಗೆ ಪಡಿತರ ತಲುಪಿಸಲು ಕ್ರಮಕೈಗೊಳ್ಳಿ. ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅಗತ್ಯ ಕ್ರೀಡಾ ಪರಿಕರಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್, ಹಿಮ್ಸ್‌ನ ಮಾನಸಿಕ ವಿಭಾಗದ ಮುಖ್ಯಸ್ಥ ಡಾ.ಸಂತೋಷ್, ಹಿರಿಯ ವಕೀಲ ಚಂದ್ರಶೇಖರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅನುಪಮಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net