ಆಲೂರು: ಹವಾಮಾನ ವೈಪರೀತ್ಯ ಸೇರಿದಂತೆ ವಿವಿಧ ಕಾರಣಗಳಿಂದ ಉಂಟಾಗುವ ಬೆಳೆ ನಷ್ಟದಿಂದ ರೈತರನ್ನು ಆರ್ಥಿಕವಾಗಿ ರಕ್ಷಿಸುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಯಲ್ಲಿರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಎಲ್ಲ ರೈತರು ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಹೇಳಿದರು.
ಆಲೂರು ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಕಬ್ಬಿನಹಳ್ಳಿ, ಕೆರೆಗಡಲು, ಕದಾಳು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಭೇಟಿ ನೀಡಿ, ರೈತರು ಬೆಳೆದಿರುವ ಮುಸುಕಿನ ಜೋಳದ ಬೆಳೆಗೆ ತಗುಲಿರುವ ಬಿಳಿಸುಳಿ ರೋಗ ವೀಕ್ಷಿಸಿ ಮಾತನಾಡಿದರು. ಕಳೆದ ವರ್ಷ ಈ ಮುಸುಕಿನ ಜೋಳದ ಬೆಳೆಗೆ ಶೇ.10ರಷ್ಟು ಮಾತ್ರ ಬಿಳಿಸುಳಿ ರೋಗ ಕಂಡುಬಂದಿತ್ತು. ಆದರೆ ಪ್ರಸ್ತುತ ಸಾಲಿನಲ್ಲಿ ಶೇಕಡ ನೂರರಷ್ಟು ಜೋಳ ರೋಗಕ್ಕೆ ತುತ್ತಾಗಿರುವುದು ಕಂಡು ಬಂದಿದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಕೃಷಿಯು ಪ್ರಕೃತಿಯನ್ನು ಅವಲಂಬಿಸಿರುವ ವೃತ್ತಿಯಾಗಿದ್ದು, ಹವಾಮಾನ ವೈಪರೀತ್ಯದಿಂದ ರೈತರಿಗೆ ಅನಿರೀಕ್ಷಿತ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭಗಳಲ್ಲಿ ರೈತರ ಆರ್ಥಿಕ ಸಂಕಷ್ಟ ಕಡಿಮೆ ಮಾಡುವಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಪರಿಣಾಮಕಾರಿ. ಆದ್ದರಿಂದ ಜಿಲ್ಲೆಯ ಎಲ್ಲ ರೈತರು ತಮ್ಮ ಬೆಳೆಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳುವ ಮೂಲಕ ಬೆಳೆ ಭದ್ರತೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಂ.ಡಿ.ಮನು ಮಾತನಾಡಿ, ಆಲೂರು ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 4,200 ಹೆಕ್ಟೇರ್ ಮತ್ತು ಪಾಳ್ಯ ಹೋಬಳಿಯಲ್ಲಿ 3,500 ಹೆಕ್ಟೇರ್ ಹಾಗೂ ಕುಂದೂರು ಹೋಬಳಿಯಲ್ಲಿ 400 ಹೆಕ್ಟೇರ್ ಸೇರಿ ಕೊಟ್ಟು ತಾಲೂಕಿನಲ್ಲಿ 13,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ಮುಸುಕಿನ ಜೋಳ ಬಿತ್ತನೆ ಮಾಡಿದ್ದರು. ಹವಾಮಾನ ವೈಪರೀತ್ಯದಿಂದ ಈ ಬಾರಿ ಬಹುತೇಕ ರೈತರ ಮುಸುಕಿನ ಜೋಳ ಬಿಳಿಸುಳಿ ರೋಗಕ್ಕೆ ತುತ್ತಾಗಿದೆ ಎಂದು ತಿಳಿಸಿದರು.
ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ರೈತ ಕದಾಳು ಲೋಕೇಶ್ ಮಾತನಾಡಿ, ಬಿಳಿಸುಳಿ ರೋಗ ಎಂಬುದು ಜಿಲ್ಲೆಯ ರೈತರಿಗೆ ದೊಡ್ಡ ಕಂಟಕವಾಗಿ ಪರಿಣಮಿಸುತ್ತಿದೆ. ಬೆಳೆಗೆ ತಜ್ಞರು ಹೇಳಿದ ಔಷಧ ಸಿಂಪಡಿಸಬೇಕು. ಇದಕ್ಕಾಗಿ ಎಷ್ಟು ಹಣ ಖರ್ಚು ಮಾಡಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಆದ್ದರಿಂದ ಯಾವ ರೈತರು ಜೋಳ ಬಿತ್ತನೆ ಮಾಡಿದ್ದಾರೋ ಆ ಎಲ್ಲ ರೈತರಿಗೂ ಸರ್ಕಾರಗಳು ಬೆಳೆ ವಿಮೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಮಲ್ಲಿಕಾರ್ಜುನ್, ಜಂಟಿ ಕೃಷಿ ನಿರ್ದೇಶಕ ರಮೇಶ್‌ಕುಮಾರ್, ಕೃಷಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ್, ಕೃಷಿ ಅಧಿಕಾರಿಗಳಾದ ಸಂಗೀತಾ ,ಲಕ್ಷ್ಮೀ, ಗ್ರಾಮ ಲೆಕ್ಕಾಧಿಕಾರಿಗಳಾದ ಲೋಕೇಶ್, ಸಂಜೀವ್, ರೈತರಾದ ಲೋಕೇಶ್ ಕದಾಳು, ಕುಮಾರ್, ಅಶೋಕ್, ರಾಜೇಗೌಡ, ರುದ್ರೇಗೌಡ ಇತರರು ಇದ್ದರು.