ಎಚ್‌ಪಿಸಿಎಲ್‌ನಲ್ಲಿ ಹೊರಗುತ್ತಿಗೆ ಆಧಾರದ 37 ಜನ ಮಾಜಿ ಸೈನಿಕರನ್ನು ಏಕಾಏಕಿ ನೌಕರಿಯಿಂದ ವಜಾ ಮಾಡಿರುವುದನ್ನು ಖಂಡಿಸಿ ಮಾಜಿ ಸೈನಿಕರು ಪ್ರತಿಭಟನೆ ನಡೆಸಿದರು. ನಿವೃತ್ತ ಯೋಧರ ಸಂಘದ ಉಪಾಧ್ಯಕ್ಷ ಡಾ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಡಿ.ಇ. ಸ್ವಾಮಿ, ಖಜಾಂಚಿ ಎಚ್.ಎ.ಲೋಕೇಶ್, ಸಹ ಕಾರ್ಯದರ್ಶಿ ಜಿ.ಕೆ.ಶ್ರೀಧರ್, ಸಂಚಾಲಕ ನಾರಾಯಣಸ್ವಾಮಿ, ನಿರ್ದೇಶಕ ಕೃಷ್ಣೇಗೌಡ ಮತ್ತು ಮೇಲ್ಗೆಗೌಡ, ಕರೀಗೌಡ, ನಾಗರಾಜು ಇತರರು ಇದ್ದರು.
ಹಾಸನ: ಎಚ್‌ಪಿಸಿಎಲ್‌ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ 37 ಮಾಜಿ ಸೈನಿಕರನ್ನು ಏಕಾಏಕಿ ನೌಕರಿಯಿಂದ ವಜಾ ಮಾಡಿರುವ ಕ್ರಮ ಖಂಡಿಸಿ ಮಾಜಿ ಸೈನಿಕರು ಸೋಮವಾರ ನಗರದ ಹೊರವಲಯದಲ್ಲಿರುವ ಪೆಟ್ರೋಲಿಯಂ ಕಂಪನಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಮಾಜಿ ಸೈನಿಕರ ಸಂಘದ ಜಿಲ್ಲಾ ಅಧ್ಯಕ್ಷ ಪ್ರದೀಪ್ ಸಾಗರ್ ಮಾತನಾಡಿ, ಡಿಜಿಆರ್ ನಿಯಮಾವಳಿಯಂತೆ ಮಾಜಿ ಸೈನಿಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕೆಂಬ ಸ್ಪಷ್ಟ ನಿಯಮವಿದ್ದರೂ, ಅದನ್ನು ಉಲ್ಲಂಘಿಸಿ ಹೊರಗಿನವರನ್ನು ನೇಮಕ ಮಾಡಿಕೊಂಡು ಎಲ್ಲ ಮಾಜಿ ಸೈನಿಕರನ್ನು ಕೆಲಸದಿಂದ ವಜಾ ಮಾಡಿರುವುದು ಖಂಡನೀಯ ಎಂದರು.
ಇದು ಕೇವಲ 37 ಜನಕ್ಕಷ್ಟೇ ಅಲ್ಲ. ಎಲ್ಲ ಮಾಜಿ ಸೈನಿಕರಿಗೆ ಮಾಡಿದ ಅವಮಾನವಾಗಿದೆ. ಇನ್ನು ಇದೆ ಜಾಗಕ್ಕೆ ಕಡಿಮೆ ಸಂಬಳಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂದರು. ಕಳೆದ 20 ರಿಂದ 25 ವರ್ಷಗಳಿಂದ ಮಾಜಿ ಸೈನಿಕರು ರಾಜ್ಯ ಸರ್ಕಾರದಿಂದ ದೊರೆಯಬೇಕಾದ ಜಮೀನು ಹಾಗೂ ಸೈಟುಗಳಿಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಇದೇ ರೀತಿಯ ನಿರ್ಲಕ್ಷೃ ಧೋರಣೆ ಮುಂದುವರಿಸಿದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ನಿವೃತ್ತ ಯೋಧರ ಸಂಘದ ಉಪಾಧ್ಯಕ್ಷ ಡಾ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಡಿ.ಇ. ಸ್ವಾಮಿ, ಖಜಾಂಚಿ ಎಚ್.ಎ.ಲೋಕೇಶ್, ಸಹ ಕಾರ್ಯದರ್ಶಿ ಜಿ.ಕೆ.ಶ್ರೀಧರ್, ಸಂಚಾಲಕ ನಾರಾಯಣಸ್ವಾಮಿ, ನಿರ್ದೇಶಕ ಕೃಷ್ಣೇಗೌಡ ಮತ್ತು ಮೇಲ್ಗೆಗೌಡ, ಕರೀಗೌಡ, ನಾಗರಾಜು ಇತರರು ಇದ್ದರು.