ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ

ಗಂಡಸಿ ಸೇಂಟ್‌ಜಾನ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜೆ.ಪಿ.ಪ್ರಕಾಶ್, ಪದ್ಮನಾಭ, ಮಂಜೇಗೌಡ, ಮುಕೇಶ್ ಕೃಷ್ಣಕುಮಾರ್ ಇತರರಿದ್ದರು.
ಗಂಡಸಿ ಸೇಂಟ್‌ಜಾನ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜೆ.ಪಿ.ಪ್ರಕಾಶ್, ಪದ್ಮನಾಭ, ಮಂಜೇಗೌಡ, ಮುಕೇಶ್ ಕೃಷ್ಣಕುಮಾರ್ ಇತರರಿದ್ದರು.
Published on
ಗಂಡಸಿ: ಅಪಘಾತದಲ್ಲಿ ಸಾವು ಪ್ರಕರಣ ತಡೆಗಟ್ಟಲು ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸಿ ವಾಹನ ಚಾಲನೆ ಮಾಡುವುದು ಅವಶ್ಯ. ಹಾಗಾಗಿ ರಸ್ತೆ ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸಿ ಎಂದು ಹಾಸನ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಪ್ರಕಾಶ್ ತಿಳಿಸಿದರು.
ಗಂಡಸಿ ಸೇಂಟ್ ಜಾನ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ, ಅಕ್ಷಯ ಡ್ರೈವಿಂಗ್ ಸ್ಕೂಲ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಒಬ್ಬ ವ್ಯಕ್ತಿಗೆ ಅಪಘಾತವಾಗಿ ಜೀವನ್ಮರಣ ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ವಿಡಿಯೋ ಮಾಡುವ ಬದಲು ಕೂಡಲೇ ಆಸ್ಪತ್ರೆಗೆ ಸೇರಿಸಲು ಸಹಕರಿಸಬೇಕು. ಈ ಮೂಲಕ ಒಂದು ಜೀವವನ್ನು ಉಳಿಸಲು ನೆರವಾಗಬೇಕು ಎಂದರು.
ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ತಕ್ಷಣ ಸಹಾಯ ಮಾಡಲು ಕೇಂದ್ರ ಸರ್ಕಾರ ರಹಾವೀರ ಯೋಜನೆ ಜಾರಿಗೆ ತಂದಿದೆ. ಗಾಯಾಳುವಿನ ಆಸ್ಪತ್ರೆಯ ಚಿಕಿತ್ಸಾ ವೆಚ್ಚ 7 ಲಕ್ಷ ರೂ.ದವರೆಗೆ ಸರ್ಕಾರವೇ ನೀಡಲಿದೆ. ಜತೆಗೆ ಗಾಯಾಳುಗೆ ಸಹಕರಿಸಿದ ವ್ಯಕ್ತಿಗೆ ಕಾನೂನಿನ ರಕ್ಷಣೆ ಇದ್ದು, ಪೊಲೀಸ್ ಮತ್ತು ನ್ಯಾಯಾಲಯದ ಕಿರುಕುಳ ಇರುವುದಿಲ್ಲ. ಸ್ವಇಚ್ಛೆಯಿಂದ ಹೇಳಿಕೆ ನೀಡಬಹುದು. ಈ ಯೋಜನೆ ಅಡಿ ಅತ್ಯಮೂಲ್ಯ ಜೀವ ರಕ್ಷಣೆ ಮಾಡುವ ವ್ಯಕ್ತಿಗಳಿಗೆ 25 ಸಾವಿರ ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ ನೀಡಿ ಸರ್ಕಾರದಿಂದ ಗೌರವಿಸಲಾಗುವುದು ಎಂದರು.
ಪ್ರಾದೇಶಿಕ ಸಾರಿಗೆ ಇಲಾಖೆಯ ಇನ್‌ಸ್ಪೆಕ್ಟರ್ ಪದ್ಮನಾಭ, ಅಕ್ಷಯ ಡ್ರೈವಿಂಗ್ ಸ್ಕೂಲ್ ಮಾಲಿಕ ಸಿದ್ದಲಿಂಗ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಸೇಂಟ್‌ಜಾನ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಮುಕೇಶ್, ಗಂಡಸಿ ಪೊಲೀಸ್ ಠಾಣೆ ಎಎಸ್‌ಐ ಮಂಜೇಗೌಡ, ವಕೀಲ ಕೃಷ್ಣಕುಮಾರ್, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net