ಗ್ರಾಮ ಪಂಚಾಯಿತಿ ಮೀಸಲಾತಿ ಸರಿಪಡಿಸಿ

 ಸಿ.ಎನ್.ಬಾಲಕೃಷ್ಣ
ಸಿ.ಎನ್.ಬಾಲಕೃಷ್ಣ
Published on

ಚನ್ನರಾಯಪಟ್ಟಣ:

ಗ್ರಾಮ ಪಂಚಾಯಿತಿಗೆ ಪ್ರಕಟಿಸಲಾಗಿರುವ ಮೀಸಲಾತಿ ಅವೈಜ್ಞಾನಿಕವಾಗಿದ್ದು, ತಾಲೂಕಿನ ಸುಮಾರು 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಇರುವ ಜಾತಿವಾರು ಪಾತಿನಿಧ್ಯ ನೀಡದೆ ಮೀಸಲು ನಿಗದಿಗೊಳಿಸಿ ಲೋಪ ಮಾಡಿದ್ದಾರೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ದೂರಿದರು.

ಗೌಡಗೆರೆ, ಯಾಳನಹಳ್ಳಿ, ಕರಿಮಾರನಹಳ್ಳಿ, ಗೋವಿನಕೆರೆ, ಹಿರೀಸಾವೆ, ಮಂಚೇನಹಳ್ಳಿ, ಜಿನ್ನೇನಹಳ್ಳಿ, ಕಾಮನಾಯಕನಹಳ್ಳಿ, ನುಗ್ಗೇಹಳ್ಳಿ, ಬಾಗೂರು ಸೇರಿ ಅನೇಕ ಗ್ರಾಮಗಳಲ್ಲಿ ಮೀಸಲಾತಿ ನಿಗದಿಯಲ್ಲಿ ಲೋಪವಾಗಿದೆ ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮೀಸಲಾತಿ ಅವೈಜ್ಞಾನಿಕ ಬಗ್ಗೆ ಎಚ್.ಡಿ.ರೇವಣ್ಣ ಈಗಾಗಲೇ ಪ್ರಶ್ನೆ ಮಾಡಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಲೋಪವಾಗಿರುವುದು ಕಂಡುಬಂದಿದೆ. ಜಿಲ್ಲಾಧಿಕಾರಿಗಳು ಮೀಸಲಾತಿ ಪ್ರಕಟಕ್ಕೂ ಮೊದಲು ಮೀಸಲಾತಿ ಲೋಪವಾಗದಂತೆ ಚರ್ಚಿಸಲು ಹಾಸನದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆಯಬೇಕಿತ್ತು. ಈಗಲೂ ಕಾಲಮಿಂಚಿಲ್ಲ. ಜಿಲ್ಲಾಧಿಕಾರಿ, ರಾಜ್ಯ ಚುನಾವಣಾ ಆಯೋಗದ ಗಮನಕ್ಕೆ ತಂದು ಮೀಸಲಾತಿ ನೀತಿ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಕಳೆದ ಮೂರು ವರ್ಷಗಳಿಂದ ರೈತರ ಆತ್ಮಹತ್ಯೆಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಜಿಲ್ಲೆಯಲ್ಲಿ 124 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ತಾಲೂಕಿನಲ್ಲಿ 13 ಪ್ರಕರಣ ದಾಖಲಾಗಳಿವೆ. ಜಿಲ್ಲಾಧಿಕಾರಿಗಳು ರೈತ ಸಂಜೀವಿನಿಯಡಿ ಶೀಘ್ರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿಯಲ್ಲಿ ಅಂತರಜಾತಿ ವಿವಾಹವಾದವರಿಗೆ 2024-27ರವರೆಗೆ 127 ಪ್ರಕರಣಗಳಿಂದ 3.84 ಕೋಟಿ ರೂ. ಪ್ರೋತ್ಸಾಹ ಧನ ಬಿಡುಗಡೆಯಾಗಿಲ್ಲ. ಪರಿಶಿಷ್ಟ ಪಂಗಡದಲ್ಲಿ 34 ಪ್ರಕರಣಗಳಿಗೆ ಸಂಬಂಧಿಸಿದಂತೆ 1.02 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಉಳಿದಿದೆ. ಶೀಘ್ರವೇ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬರ ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರವು ಎಕರೆಗೆ 15ರಿಂದ 20 ಸಾವಿರ ಪರಿಹಾರ ನೀಡಬೇಕು. ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು, ತಾಲೂಕಿನಲ್ಲಿ 4 ಸಾವಿರ ಬಿಪಿಎಲ್ ಕಾರ್ಡ್ ಕಡಿತಗೊಂಡಿವೆ ಹಾಗೂ ಸಾಮಾಜಿಕ ಭದ್ರತೆಯಡಿ 18,069 ಜನರಿಗೆ ಮಾಸಾಶನ ತಡೆಹಿಡಿಯಲಾಗಿದೆ. ಈ ಕುರಿತು ತಹಸೀಲ್ದಾರ್ ಗಮನಕ್ಕೆ ತರಲಾಗಿದ್ದು, ಲೋಪವನ್ನು ಶೀಘ್ರ ಸರಿಪಡಿಸಬೇಕು ಎಂದು ಶಾಸಕರು ಒತ್ತಾಯಿಸಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ದೇವರಾಜೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಆರ್.ವೆಂಕಟೇಶ್ ಮೂರ್ತಿ, ನಿರ್ದೇಶಕ ಎಂ.ಆರ್.ಅನಿಲ್‌ಕುಮಾರ್, ಮುಖಂಡರಾದ ಎನ್.ಬಸವರಾಜು, ರವೀಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net