ಸರ್ಕಾರದ ವಿರುದ್ಧ ರೈತ ಮಹಿಳೆಯರ ಆಕ್ರೋಶ

ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಬಿಜೆಪಿ ರಾಜ್ಯ ನಾಯಕರ ತಂಡ ಬರ ಅಧ್ಯಯನ ನಡೆಸಿತು. ಈ ಸಂದರ್ಭ ರೈತ ಮಹಿಳೆಯರು ನೋವು ತೋಡಿಕೊಂಡರು. ಶಾಸಕ ಸುನೀಲ್ ಕುಮಾರ್, ಅರಗ ಜ್ಞಾನೇಂದ್ರ ಇತರರು ಇದ್ದರು.
ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಬಿಜೆಪಿ ರಾಜ್ಯ ನಾಯಕರ ತಂಡ ಬರ ಅಧ್ಯಯನ ನಡೆಸಿತು. ಈ ಸಂದರ್ಭ ರೈತ ಮಹಿಳೆಯರು ನೋವು ತೋಡಿಕೊಂಡರು. ಶಾಸಕ ಸುನೀಲ್ ಕುಮಾರ್, ಅರಗ ಜ್ಞಾನೇಂದ್ರ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ವಿರುದ್ಧ ರೈತ ಮಹಿಳೆಯರ ಆಕ್ರೋಶ
  • ಬರ ಅಧ್ಯಯನ ತಂಡಕ್ಕೆ ದೂರು
ಹಾಸನ: ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಮತ್ತು ಬೆಳೆ ಹಾನಿಯನ್ನು ವೀಕ್ಷಿಸಲು ಬಿಜೆಪಿ ರಾಜ್ಯ ನಾಯಕರ ತಂಡ ಜಿಲ್ಲೆಗೆ ಆಗಮಿಸಿದ ಸಂದರ್ಭ ರೈತ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆದ ಶಾಸಕ ಸುನೀಲ್ ಕುಮಾರ್, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಶಾಸಕ ಚನ್ನಬಸಪ್ಪ ನೇತೃತ್ವದ ತಂಡವು ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಿತ್ತು.
ತಂಡವು ಬೆಳೆ ಸುಳಿ ರೋಗದಿಂದ ನಾಶವಾಗಿರುವ ಜೋಳದ ಬೆಳೆಗಳನ್ನು ವೀಕ್ಷಿಸಿದ ಬಳಿಕ ರೈತ ಮಹಿಳೆಯರು ತಮ್ಮ ಅಳಲು ತೋಡಿಕೊಂಡರು. ನಮಗೆ ಸರ್ಕಾರದ ಯಾವುದೇ ಗ್ಯಾರಂಟಿ ಬೇಕಾಗಿಲ್ಲ. ನಾವು ಬಸ್ ಹತ್ತಿ ಉಚಿತವಾಗಿ ಎಲ್ಲಿಗೂ ಪ್ರವಾಸ ಹೋಗುತ್ತಿಲ್ಲ. ವಿವಿಧ ಉಚಿತ ಯೋಜನೆ ನೀಡಿ, ಗೊಬ್ಬರದ ಬೆಲೆ ಹೆಚ್ಚಿಸಿದ್ದಾರೆ. ನಾವು ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಈಗ ಮಳೆ ಇಲ್ಲದೆ ಬೆಳೆ ನಾಶವಾಗಿದೆ. ಈ ಸರ್ಕಾರ ಮತ್ತೆ ಆಡಳಿತಕ್ಕೆ ಬರುವುದೇ ಬೇಡ ಎಂದು ಹಿಡಿಶಾಪ ಹಾಕಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಆರಗ ಜ್ಞಾನೇಂದ,್ರ ಹಾಸನ ಜಿಲ್ಲೆಯಲ್ಲಿ ಜೋಳದ ಬೆಳೆ ನಾಶವಾಗಿದೆ. ಕೃಷಿ ಇಲಾಖೆ ಅಸಹಾಯಕತೆ ತೋರುತ್ತಿದೆ. ರೈತರ ಪಾಲಿಗೆ ಸರ್ಕಾರವೇ ಇಲ್ಲದಂತಾಗಿದೆ ಎಂದು ಹೇಳಿದರು. ಬರ ವೀಕ್ಷಣೆ ಮತ್ತು ಸಮೀಕ್ಷೆ ಮಾಡಬೇಕಾದ್ದು ರಾಜ್ಯ ಸರ್ಕಾರದ ಕೆಲಸ. ಆದರೆ ಇಲ್ಲಿವರೆಗೂ ಸಮೀಕ್ಷೆ ಮಾಡಿಲ್ಲ. ಇದು ಸರ್ಕಾರದ ವೈಫಲ್ಯ. ನಮ್ಮ ವರದಿಯನ್ನು ರಾಜ್ಯ ಮತ್ತು ಕೇಂದ್ರಕ್ಕೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಬೆಂಗಳೂರಿನಿಂದ ಹೊರ ಬಾರದ ಶಾಸಕರಿಗೆ ನೀರಾವರಿ ಸಚಿವ ಸ್ಥಾನ ನೀಡಲಾಗಿದೆ. ಈ ಹಿಂದೆ ತಜ್ಞರಿಗೆ ನೀರಾವರಿ, ಕೃಷಿ ಇಲಾಖೆ ನೀಡುತ್ತಿದ್ದರು. ಈಗ ಅಧಿಕಾರಕ್ಕಾಗಿ ಸ್ಥಾನ ನೀಡಿದ ಕಾರಣ ರೈತರ ಸ್ಥಿತಿ ಗಮನಿಸಲು ಆಗುತ್ತಿಲ್ಲ ಎಂದು ದೂರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net